ಕಲ್ಲಪಳ್ಳಿ: ಅಮ್ಮನ ಹಠಾತ್ ಸಾವು ; ಎಂಡೋಸಲ್ಫಾನ್ ಪೀಡಿತ ಮಗು ಚಾರಿಟೇಬಲ್ ಟ್ರಸ್ಟ್‌ಗೆ ಹಸ್ತಾಂತರ

0

ಎಂಡೋಸಲ್ಫಾನ್ ಪರಿಣಾಮ ಬಾಧಿಸಿ ಬಹು ಅಂಗಾಗ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನೊಬ್ಬನ ತನ್ನ ತಾಯಿಯ ಹಠಾತ್ ಅಗಲಿಕೆಯಿಂದ ಸಂಕಷ್ಟಕ್ಕೆ ಸಿಲುಕಿದಾಗ ಆತನನ್ನು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸರಕಾರದ ಗಮನಕ್ಕೆ ತಂದು ಇದೀಗ ಬಾಲಕನನ್ನು ಕಣ್ಣನ್ನೂರಿನ ಆಶ್ರಯ ಚಾರಿಟೇಬಲ್ ಟ್ರಸ್ಟ್ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

ಸುಳ್ಯ ತಾಲೂಕು ಗಡಿಪ್ರದೇಶವಾಗಿರುವ ಹೊಸದುರ್ಗ ತಾಲೂಕಿನ ಪನತ್ತಡಿ ಗ್ರಾಮದ ಕಲ್ಲಪಳ್ಳಿಯ ೮ ವರ್ಷದ ಬಾಲಕ ಲೋಹಿತ್ ಬಾಲ್ಯದಿಂದಲೂ ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದ. ಬಾಲಕನನ್ನು ತಾಯಿ ಅಮ್ಮ ಸವಿತ ಎಚ್ಚರಿಕೆಯಿಂದ ಇದುವರೆಗೆ ನೋಡಿಕೊಂಡು ಬಂದಿದ್ದರು. ಆದರೆ ಇತ್ತೀಚೆಗೆ ಸವಿತ ಹಠಾತ್ ನಿಧನರಾಗಿದ್ದಾರೆ. ತನ್ನ ಇನ್ನೊಂದು ಮಗನ ಜೊತೆಗೆ ರೋಹಿತ್ ನ ಆರೈಕೆಯನ್ನೂ ಮಾಡುವುದು ತಂದೆಗೆ ಕಷ್ಟವಾಯಿತು. ಬಡ ಕುಟುಂಬ ಕಷ್ಟ ಅರಿತ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆಯವರು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಳಿಕ ಕೇರಳ ಸರಕಾರದ ಮಕ್ಕಳ ಸಂರಕ್ಷಣೆ ಸಮಿತಿಗೂ ಮನವಿ ಮಾಡಲಾಯಿತು. ಇತ್ತೀಚೆಗೆ ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿ ಶೀಬಾ ಮುಮ್ತಾಜ್, ಆರೋಗ್ಯಧಿಕಾರಿಗಳ ತಂಡ ಮಕ್ಕಳ ಸಂರಕ್ಷಣಾ ಸಮಿತಿಯ ಜಿಲ್ಲಾ ಸಮಿತಿಯಿಂದ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಮಗುವನ್ನು ಸರಕಾರ ತನ್ನ ತೆಕ್ಕೆಗೆ ಪಡೆದುಕೊಂಡು ಸಂಪೂರ್ಣ ಆರೈಕೆ ಮಾಡುವ ನಿರ್ಧಾರಕ್ಕೆ ಬರಲಾಯಿತು. ಅದರಂತೆ ಕಣ್ಣೂರಿನ ಆಶ್ರಯ ಚಾರಿಟೇಬಲ್ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು. ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಛಂದ್, ಎಂಡೋಸಲ್ಫಾನ್ ಡೆಪ್ಯುಟಿ ಕಲೆಕ್ಟರ್ ಶಶಿಧರ ಪಿಳ್ಳೆ, ಸಾಮಾಜಿಕ ಜಿಲ್ಲಾ ನ್ಯಾಯಾಧಿಕಾರಿ ಶಿಬಾ ಮುಮ್ತಾಜ್, ಮಕ್ಕಳ ಕ್ಷೇಮಾಭಿವೃದ್ಧಿ ಜಿಲ್ಲಾ ಚೇರ್‌ಮೆನ್ ಮೋಹನ್‌ಕುಮಾರ್ ಮೊದಲಾದ ಅಧಿಕಾರಿಗಳು ಈ ಕಾರ್ಯಕ್ಕೆ ಸಹಕರಿಸಿದ್ದು, ಪನತ್ತಡಿ ಗ್ರಾ.ಪಂ. ಅಧ್ಯಕ್ಷೆ ಪ್ರಸನ್ನಾ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾಕೃಷ್ಣ ಕಲ್ಲಪ್ಪಳ್ಳಿ, ಆಶಾ ಕಾರ್ಯಕರ್ತೆ ಬಿನ್ಸಿ ಐಸಾಕ್, ಅಂಗನವಾಡಿ ಕಾರ್ಯಕರ್ತೆ ರೋಹಿಣಿ ಮೊದಲಾದವರು ಸಹಕಾರ ನೀಡಿದರು.