ಅಡಿಕೆ ಕೃಷಿಕರು ಗೊಂದಲ ಪಡುವ ಅಗತ್ಯವಿಲ್ಲ

0

ಅಡಿಕೆ ಬೆಳೆಗಾರರ ಭವಿಷ್ಯದಿಂದಲೇ ಆ ರೀತಿಯ ಹೇಳಿಕೆ

ಪತ್ರಿಕಾಗೋಷ್ಠಿಯಲ್ಲಿ ಸಚಿವ ಎಸ್.ಅಂಗಾರ

ಅಡಿಕೆ ಕೃಷಿಗೆ ಭವಿಷ್ಯವಿಲ್ಲ ಎಂದು ಗೃಹ ಸಚಿವರು ಹೇಳಿರುವ ಹೇಳಿಕೆಯನ್ನು ಕೆಲವು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯವಾಗಿ ಲಾಭ ಪಡೆಯಲು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅಡಿಕೆ ಕೃಷಿಕರು ಇದರಿಂದ ಯಾವುದೇ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಅಡಿಕೆ ಬೆಳೆಗಾರರ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡೇ ಅವರು ಈ ರಿತಿಯ ಹೇಳಿಕೆ ನೀಡಿದ್ದಾರೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.


ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಡಿ.೩೧ರಂದು ಪತ್ರಿಕಾಗೋಷ್ಠಿ ನಡೆಸಿದ ಸಚಿವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಡಿಕೆ ಎಲೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಈಗ ಚುಕ್ಕೆ ರೋಗವೂ ಇದೆ. ಸಂಶೋಧನೆಗಳು ಒಂದು ಕಡೆ ನಡೆಯುತ್ತಿದೆ. ಔಷಧಿಗಳನ್ನು ನೀಡಲಾಗುತ್ತಿದೆ. ಹೀಗಿರುವಾಗ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶಕ್ಕಿಂತ ಬೇರೆಡೆಯಲ್ಲಿ ಅಡಿಕೆ ಬೆಳೆದರೆ ಬೆಳೆ ಹೆಚ್ಚಾಗಿ ಕೃಷಿಕನಿಗೆ ನಷ್ಟ ಆಗಬಾರದಲ್ಲವೇ?. ಹಿಂದೆ ಬೆಸಾಯವನ್ನು ಮಾಡುತ್ತಿದ್ದರು. ಆದರೆ ಕಾಲ ಕ್ರಮೇಣ ಆ ಗದ್ದೆಯಲ್ಲಿ ಅಡಿಕೆ ಹಾಕಲಾಯಿತು. ರಬ್ಬರನ್ನು ಕಡಿದು ಅಡಿಕೆ ಹಾಕಲಾಯಿತು. ಅಡಿಕೆಯ ಧಾರಣೆಯನ್ನು ಉಳಿಸಿಕೊಳ್ಳುವ ಅಗತ್ಯ ಸರಕಾರದ ಮೇಲಿದೆ. ನಮ್ಮ ಸರಕಾರ ಕೃಷಿಕರಿಗೆ ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಆದ್ದರಿಂದ ಈಗಿರುವ ಅಡಿಕೆ ಬೆಳೆಗಾರರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವರು ಹೇಳಿಕೆ ನೀಡಿದ್ದಾರೆ.

ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೃಷಿಕರು ಯಾವುದೇ ಗೊಂದಲ ಕ್ಕೀಡಾಗುವುದು ಬೇಡ ಎಂದು ಅವರು ಹೇಳಿದ ಅವರು, ಕೇರಳದಲ್ಲಿ ಎಲ್ಲರೂ ಒಂದೇ ಬೆಳೆ ಬೆಳೆಯಲು ಅವಕಾಶ ಇಲ್ಲ. ಆಯಾ ಪ್ರದೇಶಕ್ಕೆ ಹೊಂದಿಕೊಂಡು ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದ ಹೇಳಿದರು.


ಕಾಂಗ್ರೆಸ್ ಆಡಳಿತ ನಡೆಸುವ ಸಂದರ್ಭದಲ್ಲಿ ಕೃಷಿಕರಿಗೆ ಏನು ಯೋಜನೆ ತಂದಿದ್ದಾರೆ ಎಂದು ಸಚಿವರು ಪ್ರಶ್ನಿಸಿದರು.


ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶವನ್ನು ಹೊರತು ಪಡಿಸಿ ಬೇರೆ ಬೆಳೆ ಬೆಳೆಯುವ ಪ್ರದೇಶದಲ್ಲಿ ಅದೇ ಬೆಳೆಯನ್ನು ಬೆಳೆಯಬೇಕು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವೇ ಅಡಿಕೆಗೆ ಉತ್ತಮ ದರ ಬಂದಿರುವುದು. ಈಗ ಕಾಂಗ್ರೆಸ್ಸಿಗರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಕೃಷಿಕರು ಯಾರೂ ಗೊಂದಲ ಪಡುವ ಅಗತ್ಯವಿಲ್ಲ” ಎಂದು ಹೇಳಿದರು.


ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಇದ್ದರು.