ಪರೀಕ್ಷಾ ಪೂರ್ವ ತಯಾರಿಯಲ್ಲಿ ಪೋಷಕರ ಪಾತ್ರ

0

ಪರೀಕ್ಷೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಘಟ್ಟದಲ್ಲಿ ಮಹತ್ವವಾದ ಮೈಲುಗಲ್ಲು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಪರೀಕ್ಷೆಯನ್ನು ಚೆನ್ನಾಗಿ ಮಾಡಲಿ ಎಂದು ಆಶಿಸುವುದು ಸಹಜ. ಮಕ್ಕಳ ಭವಿಷ್ಯವನ್ನು ರೂಪಿಸುವ ಪರೀಕ್ಷೆಗಳಲ್ಲಿ ಮಕ್ಕಳ ಪಾತ್ರವಷ್ಟೇ ಅಲ್ಲದೆ ಶಿಕ್ಷಕರ ಮತ್ತು ಪೋಷಕರ ಪಾತ್ರವಿರುತ್ತದೆ. ಹಾಗಾಗಿ ಮಕ್ಕಳು ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಅವರ ಗಮನ ಬೇರೆಡೆ ಹೋಗದಂತೆ ಪೂರಕವಾದ ವಾತಾವರಣ ನಿರ್ಮಿಸಬೇಕಾದ್ದು ಪೋಷಕರ ಕರ್ತವ್ಯ

ಪೋಷಕರಿಗೆ ಸಲಹೆ :

ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಲಿ ಎನ್ನುವ ಉದ್ದೇಶದಿಂದ ಹೆಚ್ಚು ಒತ್ತಡವನ್ನು ಹೇರಬಹುದು. ಇದು ಮಕ್ಕಳ ಮನಸ್ಸಿನ ಮೇಲೆ ನಕರಾತ್ಮಕ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಮಕ್ಕಳಿಗೆ ಯಾವ ರೀತಿ ಓದಬೇಕು, ಒತ್ತಡ ನಿವಾರಣೆ ಹೇಗೆ ಮಾಡಬೇಕು ಎನ್ನುವುದನ್ನು ಪೋಷಕರು ತಿಳಿ ಹೇಳಬೇಕು.
ಮೊದಲಿಗೆ ಮಕ್ಕಳಿಗೆ ಓದಲು ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು. ಅವರೊಂದಿಗೆ ಸ್ನೇಹದಿಂದ ವರ್ತಿಸಿ ಅವರಲ್ಲಿ ಓದಲು ಆಸಕ್ತಿ ಬರುವಂತೆ ನೋಡಿಕೊಳ್ಳಬೇಕು.

ಮಕ್ಕಳಿಗಾಗಿ ಓದಲು ಕ್ರಿಯಾಶೀಲರಾಗಿರುವಂತೆ ವೇಳಾಪಟ್ಟಿಯನ್ನು ಪೋಷಕರೇ ಸಿದ್ದ ಪಡಿಸಿದರೆ ಉತ್ತಮ. ಎಷ್ಟು ಗಂಟೆ ಅಭ್ಯಾಸ ಮಾಡಬೇಕು, ಅನ್ನೋದನ್ನ ಅವರಿಗೆ ಮನದಟ್ಟು ಮಾಡಿಸಿ, ಇದರಿಂದ ಒತ್ತಡ ರಹಿತವಾದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಓದಿನ ಸಮಯದಲ್ಲಿ ಅವರಿಗೆ ಮನಸ್ಸಿಗೆ ನೋವಾಗುವ ಯಾವುದೇ ವಿಚಾರವನ್ನು ಮಾತನಾಡಬೇಡಿ. ಓದಿನಲ್ಲಿ ಆಸಕ್ತಿ ತೋರಿಸದಿದ್ದಲ್ಲಿ ಬೈಯಬೇಡಿ. ಅಲ್ಲದೆ ದೈಹಿಕವಾಗಿ ಮಾನಸಿಕವಾಗಿಯೂ ದಂಡಿಸಬೇಡಿ. ಉತ್ತಮ ಅಂಕ ಗಳಿಸಿದರೆ ಆಗುವ ಅನುಕೂಲ ಕಡಿಮೆ ಅಂಕ ಗಳಿಸಿದರೆ ಆಗುವ ಅನಾನುಕೂಲದ ಬಗ್ಗೆ ವಿವರಿಸಿ. ಅವರನ್ನು ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ. ಮಕ್ಕಳನ್ನು ಅವರ ಕನಸಿನ ದಾರಿಯಲ್ಲಿ ಸಾಗಲು ಪ್ರೋತ್ಸಾಹಿಸಬೇಕು.
ಇನ್ನು ಮಗು ಮನೆಯಲ್ಲಿ ಯಾವ ರೀತಿ ಇರುತ್ತದೆ ಎಂದು ತಿಳಿದ ನಂತರ ಅವರ ಶಾಲೆಯ ಬಗ್ಗೆಯೂ ಗಮನ ಹರಸಿ . ಶಾಲೆಯಲ್ಲಿ ಶಿಕ್ಷಕರ ಸಂಪರ್ಕವನ್ನು ಇಟ್ಟುಕೊಂಡು, ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಿದರೆ ಉತ್ತಮ

ಎಲ್ಲಾ ವಿಷಯಗಳನ್ನು ಪೋಷಕರು ಆರಂಭದಿಂದಲೂ ತಮ್ಮ ಮಕ್ಕಳಲ್ಲಿ ಗಮನಹರಿಸದೆ ಇದ್ದರೂ ಪರೀಕ್ಷೆಗೂ ಮುನ್ನ ಎರಡು ಮೂರು ತಿಂಗಳು ಅನುಸರಿಸಿದರೆ ಸಾಕು . ನೀವು ನಿಮ್ಮ ಮಗುವಿನ ಗುರಿ ತಲುಪಬಹುದು. ಹಾಗೆಯೇ ಪರೀಕ್ಷೆ ಎಂಬ ಭಯ ಗೊಂದಲಗಳನ್ನು ಇಟ್ಟುಕೊಳ್ಳದೆ ಪೂರ್ವ ತಯಾರಿ ಮಾಡಿಕೊಂಡದ್ದೆ ಆದಲ್ಲಿ ನಿಮ್ಮ ಮಕ್ಕಳ ಪರೀಕ್ಷೆಯನ್ನು ಹಬ್ಬಕ್ಕಿಂತಲೂ ಚೆನ್ನಾಗಿ ಆಚರಿಸಿಕೊಳ್ಳಬಹುದು….

                                   ಕಿಶನ್ ಎಂ.
                      ಪವಿತ್ರ ನಿಲಯ ಪೆರುವಾಜೆ ✍️..