ಮರ್ಕಂಜ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಳ : ಸಾರ್ವಜನಿಕರ ಆಕ್ರೋಶ, ಅಕ್ರಮ ಮದ್ಯ ಮಾರಾಟಗಾರರ ಪಟ್ಟಿ ಹಿಡಿದುಕೊಂಡು ಬಂದ ಅಬಕಾರಿ ಇಲಾಖೆ – ಖಾಲಿ ಕೈಯಲ್ಲಿ ವಾಪಾಸ್

0

ಮರ್ಕಂಜ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವಿಚಾರದ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಅಬಕಾರಿ ಇಲಾಖೆಯ ಮೇಲೆ ಗ್ರಾಮಸ್ಥರು ತಮ್ಮ ಅಸಮಾಧಾನ, ರೋಷ ಹೊರಹಾಕುತ್ತಿದ್ದು, ನಿನ್ನೆ ಇಲಾಖೆಯವರು ಮರ್ಕಂಜ ಗ್ರಾಮದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕೆಲವರ ಪಟ್ಟಿ ತಯಾರಿಸಿ ಗ್ರಾಮಕ್ಕೆ ಬಂದು ಬರಿಗೈಯಲ್ಲಿ ತೆರಳಿದ ಘಟನೆ ವರದಿಯಾಗಿದೆ.

ಮರ್ಕಂಜ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವಾಗುತ್ತಿರುವ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಗ್ರಾಮಸಭೆಗಳಲ್ಲಿ ನಿರಂತರ ಚರ್ಚೆಗಳು ನಡೆಯುತ್ತಲೇ ಇತ್ತು. ಅಬಕಾರಿ ಇಲಾಖೆಯವರು ಬಂದು ಭರವಸೆಯ ಉತ್ತರ ನೀಡಿ ಮರಳುತ್ತಿದ್ದರೇ ಹೊರತು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂಬುದು ಜನರ ಆರೋಪವಾಗಿತ್ತು. ಅಬಕಾರಿ ಇಲಾಖೆ ಕೂಡಾ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ಪರವಾಗಿ ಇದೆ ಎಂದು ಗ್ರಾಮಸಭೆಯಲ್ಲಿಯೂ ಆರೋಪಿಸಲಾಗಿತ್ತು. ಅಲ್ಲದೇ ಅಕ್ರಮ ಮದ್ಯ ಮುಕ್ತ ಹೋರಾಟ ಸಮಿತಿಯನ್ನು ರಚಿಸಿಕೊಂಡು ಇಲಾಖೆಗಳಿಗೆ ಮನವಿ ಕೊಡಲಾಗಿತ್ತು. ಕಳೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಇಲಾಖೆಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರಲ್ಲದೇ, ಇಲಾಖೆಯ ಮೇಲೆ ತಮ್ಮ ಮಾತಿನ‌ಮೂಲಕ ರೋಷ ಹೊರ ಹಾಕಿದ್ದರು. ಅಲ್ಲದೇ ಕೆಲವರು ತಮ್ಮ ಫೇಸ್ಬುಕ್ ಪೇಜ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಕುಡಿದು ಬಿಸಾಡಿರುವ ಬಗ್ಗೆ ವಿಡಿಯೋ ಮಾಡಿ ಹರಿಯಬಿಟ್ಟಿದ್ದರು.

ಈ ಘಟನೆಗಳ ಬೆನ್ನಲ್ಲೇ ಫೆ.28ರಂದು ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಮಾರಾಟ ಮಾಡುವವರ ಪಟ್ಟಿ ಹಿಡಿದು ದಿಡೀರ್ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ಮರ್ಕಂಜ ಮಧ್ಯೆ ಸಂಚರಿಸುವ ವ್ಯಾನ್ ಒಂದರಲ್ಲಿ ಮದ್ಯ ದೊರೆತಿದ್ದು ಕಾನೂನು ಕ್ರಮ ತೆಗೆಯುವಷ್ಟು ಮದ್ಯ ಇಲ್ಲದೆ ಇದ್ದುದರಿಂದ ಅವರನ್ನು ಬಿಟ್ಟು ಬರಿಗೈಯಲ್ಲಿ ಅಧಿಕಾರಿಗಳು ಹಿಂದಿರುಗಿರುವುದಾಗಿ ತಿಳಿದು ಬಂದಿದೆ.