ಪೆರಾಜೆ: ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ

0

ದೈವಂಕಟ್ಟು ಮಹೋತ್ಸವಗಳು ಧಾರ್ಮಿಕತೆ ಹಾಗೂ ಧರ್ಮವನ್ನು ಬೆಳಗಿಸುತ್ತದೆ: ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ

ಕೊಡಗಿನ ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮವು ಮಾ.3ರಂದು ಬೆಳಿಗ್ಗೆ ಜರುಗಿತು.
ದೈವಂಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅವರು ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇ.ಮೂ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ‘ಕೇರಳಕ್ಕೂ ಕೊಡಗಿಗೂ ಅವಿನಾಭಾವ ಸಂಬಂಧವಿದೆ. ಕೇರಳ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೊಡಗಿನ ಕೆಲವೊಂದು ಭಾಗದಲ್ಲಿ ಆರಾಧಿಸಲ್ಪಡುವ ವಯನಾಟ್ ಕುಲವನ್ ದೈವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಕೇರಳಕ್ಕೂ ಕರ್ನಾಟಕದ ಘಟ್ಟಪ್ರದೇಶದ ದೇವಸ್ಥಾನದಲ್ಲಿನ ಧಾರ್ಮಿಕ ಆಚಾರದಲ್ಲಿ ವಿಭಿನ್ನತೆಯಿದೆ. ಆದರೆ ದಕ್ಷಿಣ ಕನ್ನಡ ಹಾಗೂ ಇದಕ್ಕೆ ಹೊಂದಿಕೊಂಡಿರುವ ಗಡಿಪ್ರದೇಶದಲ್ಲಿರುವ ದೈವಸ್ಥಾನ ಹಾಗೂ ದೇವಸ್ಥಾನದ ಆಚರಣೆಯಲ್ಲಿ ಭಿನ್ನತೆಯನ್ನು ಕಾಣಬಹುದು. ವೈವಿಧ್ಯತೆ ಎಂಬುದು ಪ್ರಕೃತಿ ನಿಯಮ. ಭಗವಂತನ ವಿರಾಟ ಸ್ವರೂಪವನ್ನು ಹುಡುಕಿಕೊಂಡು ಹೋಗಲು ಯಾರಿಂದಲೂ ಸಾಧ್ಯವಾಗಿಲ್ಲ. ಭರತವರ್ಷದ 64 ಕ್ಷೇತ್ರ ಕಲೆಗಳು ಸಂಯೋಜನೆಗೊಂಡಾಗ ಮಾತ್ರ ಇಂತಹ ದೇವತಾ ಕಾರ್ಯಗಳು ಪರಿಪೂರ್ಣವಾಗಲು ಸಾಧ್ಯ. ಭಾರತೀಯ ಸಂಸ್ಕೃತಿಯಲ್ಲಿ ಅದೆಷ್ಟೋ ಶಾಸ್ತ್ರಗಳಿವೆ. ಇವೆಲ್ಲವನ್ನು ಆವಿಷ್ಕಾರ ಹಾಗೂ ಉಪಾಸನೆ ಮಾಡಿದಾಗ ಮಾತ್ರ ಭಾರತೀಯ ಸಂಸ್ಕೃತಿಯ ಅನಾವರಣವಾಗುತ್ತದೆ. ಇದರಿಂದಾಗಿ ದೈವಂಕಟ್ಟು ಮಹೋತ್ಸವಗಳು ಧಾರ್ಮಿಕತೆ ಮತ್ತು ಧರ್ಮವನ್ನು ಬೆಳಗಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ, ಶ್ರೀ ಶಾಸ್ತಾವು ದೇವಸ್ಥಾನ ದ ಆಡಳಿತ ಮೊಕ್ತೇಸರರು ಹಾಗೂ ದೈವಂಕಟ್ಟು ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿತೇಂದ್ರ ನಿಡ್ಯಮಲೆ , ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ದೇವತಕ್ಕರಾದ ರಾಜಗೋಪಾಲ ರಾಮಕಜೆ, ಕುತ್ತಿಕೋಲು ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಿಕಣ್ಣ ಬೇಡಗಂ, ಶ್ರೀ ಭಗವತಿ ತಂಬೂರಾಟಿ ಕ್ಷೇತ್ರದ ಸ್ಥಾನಿಕರಾದ ಸತ್ಯನ್ ಕಾರ್ನೋಚ್ಚನ್, ದೈವಂಕಟ್ಟು ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಸಕ ಕೆ.ಜಿ. ಕೆ.ಜಿ.ಬೋಪಯ್ಯ ಭೇಟಿ -ಶುಭಹಾರೈಕೆ

ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟಕರಾಗಿದ್ದ, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯರ ಅವರು ಮಾ.3ರಂದು ‌ಬೆಳಿಗ್ಗೆಯೇ ದೈವಸ್ಥಾನಕ್ಕೆ ಆಗಮಿಸಿ, ಶುಭಹಾರೈಸಿ, ತೆರಳಿದರು.