ಸುಳ್ಯದಲ್ಲಿ ಚುನಾವಣೆಯ ಮಹತ್ವದ ಅರಿವು ಕಾರ್ಯಕ್ರಮ

0

ಮತಗಟ್ಟೆಯಲ್ಲಿ ಮೂಲಸೌಕರ್ಯ ಕಲ್ಪಿಸಿ : ಎ.ಸಿ. ಗಿರೀಶ್ ನಂದನ್ ಸೂಚನೆ

ಮುಂದಿನ ವಿಧಾನಸಭಾ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಮತ ಗಟ್ಟೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಮಾಡಲು ಪಿಡಿಒಗಳಿಗೆ ಸೂಚನೆ ನೀಡಬೇಕು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು. ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳ ಮತ್ತು ಮತಗಟ್ಟೆ ಏಜೆಂಟರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಹಾಗೂ ಚುನಾವಣೆಯ ಮಹತ್ವದ ಅರಿವುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಸೆಕ್ಟರ್‌ಗಳಲ್ಲಿ ಈಗಾಗಲೇ ಇವಿಎಂ ಪ್ರಾತ್ಯಕ್ಷಿಕೆ ನಡೆಸಲು ಸೂಚಿಸಲಾಗಿದೆ. ಇದಕ್ಕಾಗಿ ಮತಯಂತ್ರಗಳನ್ನು ನೀಡಲಾಗಿದೆ.ಚುನಾವಣೆ ವ್ಯವಸ್ಥಿತವಾಗಿ ನಡೆಸಲು ಅಧಿಕಾರಿಗಳ ಪಾತ್ರ ಪ್ರಮುಖವಾದದ್ದು. ಪ್ರತಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತಕೇಂದ್ರಗಳನ್ನು ಪರಿಶೀಲನೆ ನಡೆಸಬೇಕು. ಮತಕೇಂದ್ರದಲ್ಲಿ ವಿಕಲಚೇತನರಿಗೆ ಅನುಕೂಲವಾಗಲು ರ‍್ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದರು.
ತಾಲೂಕಿನಲ್ಲಿ 6 ಕಡೆ ಚೆಕ್‌ಪೋಸ್ಟ್‌ಗಳಿವೆ. ಅಲ್ಲಿ ಗಸ್ತು ಇರುವ ಸಿಬ್ಬಂದಿಗಳ ಸಂಪರ್ಕ ಸಂಖ್ಯೆಯನ್ನು ಪಡೆದು ಗಮನ ನೀಡಬೇಕು. ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋದ ಮತದಾರರನ್ನು ಸೇರಿಸುವ ಕೆಲಸ ಕೂಡಲೇ ಆಗಬೇಕು. ಮತದಾನದ ಪ್ರಮಾಣ ಹೆಚ್ಚಾಗಬೇಕಾದರೆ ಮತದಾರರಿಗೆ ಜಾಗೃತಿ ಅಗತ್ಯ. ಜಾಗೃತಿ ಮೂಡಿಸುವ ಕೆಲಸ ಅಧಿಕಾರಿ ವರ್ಗ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್ ರಾಮಚಂದ್ರ ಭಟ್ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳ ಮತ್ತು ಮತಗಟ್ಟೆ ಏಜೆಂಟರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಹಾಗೂ ಚುನಾವಣೆಯ ಮಹತ್ವದ ಅರಿವು ಎಂಬ ವಿಷಯದಲ್ಲಿ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್, ಕಡಬ ತಹಸೀಲ್ದಾರ್ ರಮೇಶ್ ಬಾಬು, ಸುಳ್ಯ ಪ್ರಭಾರ ತಹಸೀಲ್ದಾರ್ ಮಂಜುನಾಥ್, ಉಪ ತಹಸೀಲ್ದಾರ್ ಚಂದ್ರಕಾಂತ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ವಿವಿಧ ಪಕ್ಷಗಳ ನಾಯಕರು, ಬೂತ್ ಏಜೆಂಟರು, ಅಂಗನವಾಡಿ ಕಾರ್ಯಕರ್ತರು, ಗ್ರಾ.ಪಂ. ಸಿಬ್ಬಂದಿಗಳು ಮತ್ತು ಇತರ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.