ಅತ್ಯಾಚಾರ ಆರೋಪ ಪ್ರಕರಣ : ವಿವಿ ಸಹ ಪ್ರಾಧ್ಯಾಪಕ ಡಾ.ವೇದವ ಪಿ. ಅವರಿಗೆ ಹೈಕೋರ್ಟ್‌ನಿಂದ ಕ್ಲೀನ್ ಚಿಟ್

0

ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ಮಂಗಳೂರು ವಿ.ವಿ. ಸಹ ಪ್ರಾಧ್ಯಾಪಕ ಡಾ. ವೇದವ ಪಿ. ಅವರನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.

ಮಂಗಳೂರು ವಿವಿ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ವೇದವ ಪಿ ಅವರ ವಿರುದ್ಧ ಇದೇ ವಿಶ್ವವಿದ್ಯಾನಿಲಯದ ಅಧ್ಯಯನ ಪೀಠವೊಂದರ ಸಂಶೋಧನಾ ಸಹಾಯಕಿಯಾಗಿವರೊಬ್ಬರು ಅತ್ಯಾಚಾರ ಮತ್ತು ಜೀವಬೆದರಿಕೆಯ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶ ಆರೋಪ ಪಟ್ಟಿಯನ್ನು ಪರಿಗಣಿಸಿ ಆರೋಪಿ ಡಾ.ವೇದವ ಪಿ. ಅವರಿಗೆ ಸಮನ್ಸ್ ನೀಡಿದ್ದರು. ಹಿಯರಿಂಗ್ ಬಿಫೋರ್ ಚಾರ್ಜ್ (ಎಚ್‌ಬಿಸಿ) ಹಂತದಲ್ಲಿ ಆರೋಪದಿಂದ ಬಿಡುಗಡೆಗೊಳಿಸಲು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 227ರ ಪ್ರಕಾರ ಡಾ.ವೇದವರು ಅರ್ಜಿ ಸಲ್ಲಿಸಿದ್ದು, ಆರೋಪದ ಸತ್ಯಾಂಶ ವಿಚಾರಣೆಯಿಂದ ಮಾತ್ರ ಹೊರಬೀಳಬೇಕಾಗಿದೆಯೆಂಬ ಕಾರಣಕ್ಕೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಡಿಸ್ಚಾರ್ಜ್ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಡಾ.ವೇದವ ಪಿ. ಕರ್ನಾಟಕ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಅರ್ಜಿಯನ್ನು 2017 ರಲ್ಲಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್ ವಿಚಾರಣೆಗೆ ಒಪ್ಪಿಕೊಂಡು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿತ್ತು. ದಿನಾಂಕ 23-02-2023 ರಂದು ನಡೆದ ಅಂತಿಮ ಹಿಯರಿಂಗ್‌ನಲ್ಲಿ ಉಚ್ಛನ್ಯಾಯಾಲಯವು ಆರೋಪವಗಳನ್ನು ಸಾಬೀತು ಪಡಿಸಲು ಆರೋಪ ಪಟ್ಟಿ ಮತ್ತು ಎಫ್.ಐ.ಆರ್ ಯಾವುದೇ ಪುರಾವೆಗಳನ್ನು ಹೊಂದಿಲ್ಲವೆಂದು ಸರ್ವೋಚ್ಛ ನ್ಯಾಯಲಯದ ಈ ಹಿಂದಿನ ತೀರ್ಪುಗಳ ಆಧಾರದ ಮೇಲೆ ಡಾ.ವೇದವ ಪಿ. ಸಲ್ಲಿಸಿದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶರು ಡಾ.ವೇದವ ಪಿ. ಸಲ್ಲಿಸಿದ ಡಿಸ್ಚಾರ್ಜ್ ಅರ್ಜಿಯನ್ನು ತಿರಸ್ಕರಿಸಿದ ತೀರ್ಪನ್ನು ರದ್ದು ಮಾಡಿ ಆರೋಪಿಯನ್ನು ಎಲ್ಲಾ ಆರೋಪಗಳಿಂದ ಬಿಡುಗಡೆ ಮಾಡಿದೆ.

ದೂರುದಾರರು ದಿನಾಂಕ 16-10-2014 ರಂದು ನೀಡಿದ ದೂರಿನಲ್ಲಿ ದಿನಾಂಕ 2-06-2013 ರಂದು ಡಾ.ವೇದವ ಪಿ. ಅತ್ಯಾಚಾರ ಮಾಡಿ ನಂತರ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಜೀವ ಬೆದರಿಕೆಯನ್ನು ಹಾಕಿ ಮದುವೆಯಾಗುವುದಾಗಿ ತಿಳಿಸಿ 2-06-2013 ರ ನಂತರ ಕೂಡ ಅತ್ಯಾಚಾರ ಮಾಡಿರುವುದಾಗಿ ಹೇಳಿದ್ದಳು. ಹೈಕೋರ್ಟ್‌ನ ಈ ತೀರ್ಪಿನಂತೆ ಆರೋಪ ಪಟ್ಟಿಯಲ್ಲಿ ಆರೋಪಿ ಡಾ.ವೇದವ ಪಿ. ಫಿರ್ಯಾದಿದಾರಳನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿದ್ದು ಕಂಡು ಬರುತ್ತಿಲ್ಲ ಮತ್ತು ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪವು ಭಾರತೀಯ ದಂಡ ಸಂಹಿತೆ ಪ್ರಕಾರ ಅತ್ಯಾಚಾರದ ಅಪರಾಧವಾಗುವುದಿಲ್ಲವಾದ್ದರಿಂದ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶರು ಈ ಅಪರಾಧಗಳಿಗೆ ಅಗತ್ಯವಾದ ಅಂಶಗಳಿಲ್ಲದೇನೇ ನೀಡಿದ ತೀರ್ಪು ಒಪ್ಪತಕ್ಕದ್ದಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿದೆ.
ಆರೋಪಿಸಲ್ಪಟ್ಟ ಬಲಾತ್ಕಾರವಾದ ಲೈಂಗಿಕ ಕ್ರಿಯೆ 2-06-2013 ರಂದು ನಡೆದು, ಎಫ್.ಐ.ಆರ್ ನ್ನು ದಿನಾಂಕ 16-10-2014 ರಂದು ದಾಖಲಿಸಿದ್ದು ಆರೋಪಿ ಮತ್ತು ಪಿರ್ಯಾದಿದಾರಳ ಮಧ್ಯೆ ಸಂಬಂಧವಿದ್ದು, ಅದು ಹಳಸಿದಾಗ ಸೇಡು ತೀರಿಸಿಕೊಳ್ಳುವ ದುರುದ್ಧೇಶದಿಂದ ಮತ್ತು ಪ್ರತೀಕಾರದ ಉದ್ಧೇಶದಿಂದ ಎಂದು ಗೋಚರಿಸುತ್ತಿದ್ದು, ಮತ್ತು ಈ ಎಲ್ಲಾ ಕಾರಣಗಳಿಂದಾಗಿ ಆರೋಪಿಯ ವಿರುದ್ಧ ಅಪರಾಧ ಪ್ರಕ್ರಿಯೆಗಳನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಉಚ್ಛನ್ಯಾಯಲಯ ಹೇಳಿದೆ.
ದೂರುದಾರರು ದಿನಾಂಕ 29-10-2014 ರಂದು ತನಗೆ ಡಾ.ವೇದವ ಪಿ. ಯಿಂದ ಅನ್ಯಾಯವಾಗಿದೆ ಎಂದು ಮಂಗಳೂರು ವಿವಿಯ ವ್ಯವಹಾರ ಆಡಳಿತ ವಿಭಾಗದ ಎದುರು ಪ್ರತಿಭಟನೆಯನ್ನೂ ನಡೆಸಿದ್ದರು.

ಡಾ. ವೇದವ ಅವರ ಪರವಾಗಿ ಹೈಕೋರ್ಟ್ ನ್ಯಾಯವಾದಿ ರವಿಶಂಕರ್ ಕೊಡೆಂಕಿರಿ ವಾದಿಸಿದ್ದರು.