ಸುಳ್ಯ ಲಯನ್ಸ್ ಕ್ಲಬ್‌ನ ಸುವರ್ಣ ಸಂಭ್ರಮ ಸಮಾರಂಭ

0


50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಸುಳ್ಯ ಲಯನ್ಸ್ ಕ್ಲಬ್‌ನ ಸುವರ್ಣ ಸಂಭ್ರಮ ಸಮಾರಂಭವು ಮಾ. 5ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಿತು.


ಸುವರ್ಣ ವರ್ಷಾಚರಣೆಯ ಪ್ರಯುಕ್ತ ಸುಳ್ಯ ಲಯನ್ಸ್ ಸೇವಾ ಸದನವನ್ನು ಆಧುನಿಕ ಸ್ಪರ್ಶದೊಂದಿಗೆ ನವೀಕರಣಗೊಳಿಸಿದ್ದು, ಇದರ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲ. ಸಚಿತ್ ಶೆಟ್ಟಿಯವರು ನೆರವೇರಿಸಿದರು. ಬಳಿಕ ಬಂಟರ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಶಾಂತಾರಾಮ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಡಾ. ಶಾಂತಾರಾಮ ಶೆಟ್ಟಿಯವರನ್ನು ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಅತಿಥಿಗಳಾದ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲ. ಸಚಿತ್ ಶೆಟ್ಟಿ, ಮಲ್ಟಿಪಲ್ ಚಯರ್‌ಮೆನ್ ವಸಂತಕುಮಾರ್ ಶೆಟ್ಟಿ, ಮಾಜಿ ಜಿಲ್ಲಾ ರಾಜ್ಯಪಾಲ ಎಂ.ಬಿ.ಸದಾಶಿವ, ಪ್ರಥಮ ಉಪ ರಾಜ್ಯಪಾಲರಾದ ಮೆಲ್ವಿನ್ ಡಿಸೋಜಾ, ಅಲ್ಲದೆ ಪ್ರಾಂತ್ಯಾಧ್ಯಕ್ಷ ಸಂಧ್ಯಾ ಸಚಿತ್ ರೈ, ವಲಯಾಧ್ಯಕ್ಷ ಗಂಗಾಧರ ರೈ, ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಕಾವೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಶ್ರೀ ಜೆ. ರೈ. ಸಭಾಧ್ಯಕ್ಷತೆ ವಹಿಸಿದ್ದರು. ಸುವರ್ಣ ವರ್ಷಾಚರಣೆ ಸಮಿತಿ ಅಧ್ಯಕ್ಷ ವಿಲಿಯಂ ಲಸ್ರಾದೋ ಸ್ವಾಗತಿಸಿ, ಸಂಚಾಲಕ ಜಯಪ್ರಕಾಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.


ಲಯನ್ಸ್ ಸಂಸ್ಥೆಯ ಸ್ಥಾಪಕ ಸದಸ್ಯರನ್ನು, ಲಯನ್ಸ್, ಲಯನೆಸ್ ಪೂರ್ವಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಗಲಿದ ಪೂರ್ವಾಧ್ಯಕ್ಷರುಗಳಿಗೆ ನುಡಿನಮನ ಸಲ್ಲಿಸಲಾಯಿತು. ಸುಳ್ಯ ತಾಲೂಕಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತೀ ವರ್ಷ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ರೂ. 1೦,೦೦೦ ಗಳನ್ನು ನೀಡುವ ಸಲುವಾಗಿ 1,5೦,೦೦೦ ರೂ.ಗಳನ್ನು ಶಾಶ್ವತ ನಿಧಿಯಾಗಿ ಶಾಶ್ವತ ಯೋಜನೆಗೆ ಚಾಲನೆ ನೀಡಲಾಯಿತು. ಪಿ.ಎಂ. ರಂಗನಾಥ್‌ರವರ ಸಂಪಾದಕತ್ವದಲ್ಲಿ ಮೂಡಿಬಂದ ’ಸುವರ್ಣ ಲೇಖನ 5೦ ವರ್ಷಗಳ ನೆನಪು’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಲಯನ್ಸ್ ಸೇವಾ ಸದನದ ವೇದಿಕೆ ದಾನಿ ಆನಂದ ಪೂಜಾರಿ ಹಾಗೂ ವಿದ್ಯಾರ್ಥಿ ದತ್ತಿನಿಧಿ ಪ್ರಾಯಜಕರಾದ ಚಂದ್ರಶೇಖರ ಕೆ.ಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ನಡೆದ ಅಂಕಿತ ರೈಯವರ ಭರತನಾಟ್ಯ ಎಲ್ಲರ ಮೆಚ್ಚುಗೆ ಗಳಿಸಿತು. ತೇಜಸ್ವಿನಿ ಕಿರಣ್, ಕೋಶಾಧಿಕಾರಿ ಲಕ್ಷ್ಮೀಶರವರು ಕಾರ್ಯಕ್ರಮಕ್ಕೆ ಸಹಕರಿಸಿದರು. ದಿನೇಶ್ ಆಚಾರ್ಯ ಕಡಬ ಮತ್ತು ತಂಡದವರಿಂದ ಸುಮಧುರ ಗಾನ ಸಿಂಚನ ಕಾರ್ಯಕ್ರಮ ನಡೆಯಿತು.