ಯೇನೆಕಲ್ಲಿನ ಬಚ್ಚನಾಯಕ ದೈವದ ವ್ಯಕ್ತಿ ವಿಶೇಷತೆಗಳು

0

ಬಚ್ಚನಾಯಕ ದೈವವು ಯಾವ್ಯಾವ ರೀತಿಯಲ್ಲಿ ತುಳುನಾಡಿನ ಇತರೆ ದೈವಗಳಿಗಿಂತ ಭಿನ್ನವಾಗಿ ಕಾಣಿಸುತ್ತದೆಂಬುದು ಪ್ರಸ್ತುತ ಬರಹದ ಉzಶವಾಗಿದೆ. ಅಂದರೆ ಪ್ರಸುತ್ತ ಆರಾಧನಾ ರಂಗಭೂಮಿಯಲ್ಲಿ ವಿಶಿಷ್ಟ ರೀತಿಯಲ್ಲಿ ವಿಜ್ರಂಭಿಸುವ ಬಚ್ಚನಾಯಕ ದೈವದ ಮುಖವರ್ಣಿಕೆ, ಉಡುಪು ತೊಡುಪುಗಳ ವಿನ್ಯಾಸ, ಭೂತಕಟ್ಟುವಿಕೆ ಮತ್ತು ರಂಗ ನಿರೂಪಣೆಯು ಹತ್ತು ಹಲವು ರೀತಿಯಲ್ಲಿ ವಿಶಿಷ್ಟವಾಗಿದೆ.

ಇವೆಲ್ಲ ಒಟ್ಟಾಗಿ ಅದ್ಯಾವುದೋ ಕಾಲಘಟ್ಟದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪ್ರತಿನಿಧಿಸುವ ಅಂಶಗಳು ಆತನ ಕಾರುಬಾರುಗಳ ಮತ್ತು ತತ್ಸಂಬದ ಒಟ್ಟಾರೆ ಚರಿತ್ರೆಯ ಅನಾವರಣದ ವಿಚಾರವಾಗಿವೆ. ಯಾರೀ ಬಚ್ಚನಾಯಕ? ಯೇನೆಕಲ್ಲು ಮಾಗಣೆಯ ಮುನ್ನೂರು ಒಕ್ಕಲುಗಳಿಗೆ ಮಾತ್ರ ಸೀಮಿತಗೊಳ್ಳದ ಈತ ಘಟ್ಟದ ಮೇಲಣ ಕಾಗಿನಹರೆ ಪ್ರದೇಶದಲ್ಲಿ ಜನಿಸಿ ಪಂಜ ಸೀಮೆಯ ಜೈನ ಬಲ್ಲಾಳರ ಕಾರಣವಾಗಿ ಯೇನೆಕಲ್ಲಿನ ಬಾನಡ್ಕ ಎಂಬಲ್ಲಿ ಕೊಲ್ಲಲ್ಪಟ್ಟ ದುರಂತನಾಯಕ. ಆ ಸಾವಿನ ಬಳಿಕ ಆತ ದೈವವಾಗಿ ಆತನ ಸಾವಿಗೆ ಕಾರಣರಾದವರಿಂದಲೇ ಆರಾಧನೆಗೊಳಪಟ್ಟು ಇಂದು ಅತ್ಯಂತ ಕಾರಣಿಕದ ದೈವಗಳಲ್ಲೊಂದಾಗಿ ಪರಿಗಣಿಸಲ್ಪಡುತ್ತಾನೆ.ಭೂತ ಕಟ್ಟುವಿಕೆಯ ಪ್ರಕ್ರಿಯೆಯಲ್ಲಿ ಆತನ ತಲೆಸಿಂಗಾರವು ಇತರೇ ದೈವಗಳಂತಲ್ಲ. ತಲೆಗೆ ಸುಮಾರು ಅರವತ್ತು ಮೊಳದ ಹತ್ತಿಬಟ್ಟೆಯ, ಕೆಂಪು ಬಣ್ಣದ ರುಮಾಲನ್ನು ಸುತ್ತಲಾಗುತ್ತದೆ. ಅದರೊಂದಿಗೆ ಪಿಂಗಾರ ಮತ್ತು ಕಾಮಕಸ್ತೂರಿ ಎಲೆಯುಳ್ಳ ಎಳೆಯ ದಂಟನ್ನು ಸೇರಿಸುತ್ತಾರೆ.

ಔಷಧೀಯ ಗುಣವಿರುವ, ಸಾಮಾನ್ಯವಾಗಿ ಒಣಪ್ರದೇಶದಲ್ಲಿ ಬೆಳೆಯುವ ಈ ಕುರುಚಲು ಜಾತಿಯ ಗಿಡವು ಕಾಗಿನಹರೆ ಪ್ರದೇಶದಲ್ಲಿ ಇಂದಿಗೂ ಕಾಣಸಿಗುತ್ತದೆ. ವಣಗೂರು ಸಬ್ಬಮ್ಮದೇವಿಯ ನೆಲೆಯಲ್ಲಿ ಹಲವಾರು ಬಣ್ಣದ ತುಂಬೆಗಿಡಗಳಿವೆ. ವಿಶೇಷ ಪರಿಮಳ ಸೂಸುವ ಕಾಮಕಸ್ತೂರಿಯು ಆಹ್ಲಾದಕರವಾಗಿಯೂ, ಮಾದಕವಾಗಿಯೂ ಇದೆ. ಕಂದ್ರಪ್ಪಾಡಿಯ ಪುರುಷನು ಸುರಗಿ ಹೂವಿನ ಮಾಲೆಯನ್ನು ತನ್ನ ಮಣಿಗಂಟಿನಲ್ಲೂ ಕೊರಳಲ್ಲೂ ಧರಿಸುತ್ತಿದ್ದನು. ಹಾಗೆಯೇ ಶಿರಾಡಿಭೂತಕ್ಕೆ ಭಂಗಿ ಸೇವೆನೆಯು ಅತ್ಯಂತ ಪ್ರಿಯವಾದ ದ್ರವ್ಯ.

ಬಚ್ಚನಾಯಕನ ಆರಾಧನೆಯ ಅಂತ್ಯದಲ್ಲಿ ಪ್ರಸಾದರೂಪದಲ್ಲಿ ಇದೇ ಕಾಮಕಸ್ತೂರಿಯ ಎಲೆಗಳನ್ನು ಭಸ್ಮದೊಂದಿಗೆ ಬೆರೆಸಿ ನೀಡಲಾಗುತ್ತದೆ. ದೈವ ಆವಾಹನೆಯ ಸಂದರ್ಭದಲ್ಲಿ ಬಚ್ಚನಾಯಕನಿಗೆ ಮುಖವರ್ಣಿಕೆ ಇರುವುದಿಲ್ಲ. ನಂತರದ ಹಂತದಲ್ಲಿ ಬಜಂಟುಕರಿಯನ್ನು ತಾನೇ ಮುಖಕ್ಕೆ ಬಳಿದುಕೊಳ್ಳುತ್ತಾನೆ. ಈ ಬಂಜಟು ಎಂಬುದು ದನದ ಸೆಗಣಿಯನ್ನು ಚೆನ್ನಾಗಿ ಒಣಗಿಸಿ ಸುಟ್ಟ ಬಳಿಕ ದೊರೆಯುವ ಬೂದಿಯಾಗಿದೆ. ದೈವ ಆವಾಹನೆಯಾದ ಬಳಿಕ ಮುಖವರ್ಣಿಕೆ ಮಾಡುವುದು ಇಲ್ಲಿಯ ವಿಶೇಷ. ಅಲ್ಲದೇ ಇದೊಂದು ಸರಳ ಸಂಪ್ರದಾಯವಾಗಿದ್ದು ಬೇರಲ್ಲೂ ಕಾಣಸಿಗುವುದಿಲ್ಲಸಾಮಾನ್ಯವಾಗಿ ತುಳುನಾಡಿನ ದೈವಗಳು ಚಿರಿ ಅಥವಾ ತೆಂಗಿನಮರದ ಎಳೆಯಕುಡಿಯನ್ನು ತಮ್ಮ ಉಡುಪಾಗಿ ಧರಿಸುತ್ತವೆ. ಬಟ್ಟೆಯನ್ನೂ ಉಡುಪಾಗಿ ಬಳಸಲಾಗುತ್ತದೆ. ಬಚ್ಚನಾಯಕ ಬಳಸುವ ನಿಲುವಂಗಿ ನಿಮಗೆ ಬೇರೆ ಯಾವುದೇ ದೈವಗಳಲ್ಲಿ ಕಂಡುಬರುವುದಿಲ್ಲ. ಆತನ ಮೊಣಕಾಲಿನಿಂದಲೂ ಕೆಳಗೆ ಆವರಿಸಿಕೊಳ್ಳುವ ಉದ್ದಕೈಗಳುಳ್ಳ, ದಪ್ಪನೆಯ ಈ ಹೊದಿಕೆ ಆತನ ವಸ್ತ್ರ ವಿನ್ಯಾಸದ ವಿಶೇಷ ಮೈಸೂರು ಮಹಾರಾಜರು, ಹೈದರಬಾದಿನ ನಿಜಾಮರು ಇಂತಹz ನಿಲುವಂಗಿಯಲ್ಲಿರುವುದನ್ನು ನಾವು ಕಾಣಬಹುದು ಇದು ಸ್ಥಳಿಯ ವಸ್ತ್ರಧಾರಣಾ ಶೈಲಿಯಲ್ಲ. ಮಧ್ಯಕಾಲದಲ್ಲಿ ಭಾರತವನ್ನಾಳಿದ್ದ ಮೊಗಲ್‌ದೊರೆಗಳೂ ಇಂತಹ ಉಡುಪಿನಲ್ಲಿದ್ದರೆಂಬುದು ಆ ಕಾಲದ ವರ್ಣಚಿತ್ರಗಳಲ್ಲಿ ಕಾಣಬಹುದು. ತಥಾಕಥಿತವಾಗಿ ಅದು ಪರ್ಶಿಯನ್ನ ಶೈಲಿ. ಒಟ್ಟಿನಲ್ಲಿ ಬಚ್ಚನಾಯಕ ಒಬ್ಬ ರಾಜಕಳೆಯಲ್ಲಿ ಮಿಂಚುವಂತಹ ವ್ಯಕ್ತಿ ನಿರೂಪಣೆಯನ್ನು ಗಮನಿಸಬಹುದಾಗಿದೆ.

ಒಂದು ಹಂತದ ಭೂತ ಕಟ್ಟುವಿಕೆಯ ಬಳಿಕ ಆತ ಮಾವಿನ ಎಲೆಗಳನ್ನು ಸುರುಳಿಯಾಕಾರಾವಾಗಿ ಸುತ್ತಿ ತನ್ನ ದಿನಚರಿ ಆರಂಭ ಎಂಬಂತೆ ಹಲ್ಲು ಉಜ್ಜುತ್ತಾನೆ. ಸುದೀರ್ಘಕಾಲ ಹಲ್ಲು ಉಜ್ಯುತ್ತಾ ದೈವಸ್ಥಾನದ ಹತ್ತಾರು ಮೆಟ್ಟಿಲುಗಳನ್ನು ಇಳಿದು ಬರುವುದೇ ಒಂದು ಅದ್ಭುತ ಪ್ರಕ್ತಿಯೆ. ಹಲ್ಲು ಉಜ್ಜುವ ಒಂದು ಸಾಮಾನ್ಯ ಕೆಲಸವೂ ಶೈಂಗಾರಮಯವಾಗಿ ನೋಡಸಿಗುವುದು ಇಲ್ಲಿ ಮಾತ್ರ. ಆ ಬಳಿಕ ಆತನ ಕೆಲಸ ಬೈನೆಮರದಡಿಗೆ ಹೋಗಿ ಕಳ್ಳುಕುಡಿಯುವುದು. ಆ ಬಳಿಕವೇ ದಿನದ ಕಾರುಬಾರು ಶುರು.

ಹೆಚ್ಚಿನೆಲ್ಲಾ ದೈವಗಳು ಮಾಂಸ ಮತ್ತು ಮಧ್ಯಪ್ರಿಯ ಜಾಯಮಾನ ರೂಡಿಸಿಕೊಂಡಿರುವುದಕ್ಕೆ ಅವುಗಳನ್ನು ಆರಾಧಿಸುತ್ತಾ ಬಂದಿರುವ ಜನಸಮುದಾಯದ ಮನೋಭಾವಗಳೇ ಕಾರಣ. ಸಸ್ಯಹಾರ ದೈವಗಳನ್ನು ಸಸ್ಯಹಾರಿ ಜಾತಿಯವರೇ ನೆಲೆಗೊಳಿಸಿರುವುದೇ ಕಾರಣ. ಉದಾಹರಣೆಗೆ ಉಳ್ಳಾಕುಳು ದೈವ ಸಸ್ಯಹಾರಿಗಳಾದ ಜೈನರ ಪ್ರಭಾವದೊಳಗೆ ಬಂದಿರುವುದೇ ಕಾರಣವಾಗಿದೆ. ಬಚ್ಚನಾಯಕ ದೈವದ ವ್ಯಕ್ತಿತ್ವವು ಮೂಡಿಬರುವುದು ಆತನ ಚಾರಿತ್ರಿಕ ಹಿನ್ನಲೆಯ ಆತನ ಚಾರಿತ್ರಿಕ ಸಂಗತಿಗಳನ್ನು ತಿಳಿದುಕೊಳ್ಳದವರಿಗೆ ದೈವರಾದನೆಯ ಇನ್ನೊಂದು ಮುಖವೆಂಬುದು ಮಾತ್ರ ಪರಿಗಣನೆಯ ವಿಚಾರವಾಗುತ್ತದೆ.

ಘಟ್ಟದ ಮೇಲಿನಿಂದ ಬಂದಿರುವ ಆತನನ್ನು ಇಲ್ಲಿ ಯಾಕೆ ಆರಾಧಿಸಬೇಕು? ಆರಾಧನೆಯ ಪ್ರಕಾರದಲ್ಲಿ ಕಾಣಿಸಿಕೊಳ್ಳುವ ವಿವಿಧ ಪ್ರಕ್ರಿಯೆಗಳಿಗೆ ಕಾರಣ ಏನು? ಆತನ ಉಡುಪು, ತೊಡುಪು, ಹಾವಭಾವ, ನಟನಾ ಕ್ರಮಗಳು, ಘಟನಾ ನಿರೂಪಣೆ ಏನನ್ನು ಬಿಂಬಿಸುತ್ತವೆ ಎಂಬುದರ ಸಾಮಾನ್ಯ ತಿಳುವಳಿಕೆ ಇದ್ದಲ್ಲಿ ಮಾತ್ರ ಆರಾಧನೆಯ ಗಂಭೀರತೆ ಅರ್ಥವಾಗಬಲ್ಲದು, ಈ ದೃಷ್ಠಿಯಲ್ಲಿ ಬಚ್ಚನಾಯಕ ದೈವದ ಚರಿತ್ರೆಯನ್ನು ಸಮುದಾಯಕ್ಕೆ ತಿಳಿಸುವ ಅನಿವಾರ್‍ಯತೆ ಇದೆ.

-ಎ.ಕೆ.ಹಿಮಕರ

ಎ.ಕೆ.ಹಿಮಕರ