ಡಾ.ಹಿಮಕರ ಕೆ.ಎಸ್. ಸ್ವಯಂ ನಿವೃತ್ತಿ

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಅತ್ಯಂತ ಜನಪ್ರಿಯರಾಗಿದ್ದ ಡಾ.ಹಿಮಕರ ಕೆ.ಎಸ್. ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಅವರು ಹಲವು ವರ್ಷಗಳ ಹಿಂದೆ ಸ್ವಯಂ ನಿವೃತ್ತಿಗಾಗಿ ಸರ್ಕಾರಕ್ಕೆ ಅರ್ಜಿ ಹಾಕಿದ್ದರು. ಅದು ಇಂದು ಅನುಮೋದನೆಗೊಂಡು ಆದೇಶ ಬಂದಿರುವುದಾಗಿ ತಿಳಿದುಬಂದಿದೆ.


ಸುಳ್ಯದ ದಿ.ಕುರುಂಜಿ ಸಂಜೀವ ಗೌಡರ ಪುತ್ರರಾದ ಡಾ. ಹಿಮಕರರವರು 1993 ರಲ್ಲಿ ಗುತ್ತಿಗೆ ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದ್ದರು. 1999 ಅಕ್ಟೋಬರ್ 5 ರಂದು ಅವರು ಸರಕಾರಿ ವೈದ್ಯಾಧಿಕಾರಿಯಾಗಿ ಅಧಿಕೃತವಾಗಿ ನೇಮಕಗೊಂಡರು. 1993 ರಿಂದ 2000ನೇ ಇಸವಿಯವರೆಗೆ ಮೂಡಬಿದಿರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಅವರು 2000 ಇಸವಿಯಲ್ಲಿ ಗುತ್ತಿಗಾರು ಆಸ್ಪತ್ರೆಗೆ ವರ್ಗಾವಣೆಗೊಂಡು ಬಂದು 6 ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ ಎಂ.ಡಿ. ವಿದ್ಯಾಭ್ಯಾಸಕ್ಕಾಗಿ ಮೂರು ವರ್ಷ ಕೆ.ಎಂ.ಸಿ.ಯಲ್ಲಿದ್ದ ಅವರು ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆಯಾಗಿ ಹೋಗಿ 4 ವರ್ಷ ಸೇವೆ ಸಲ್ಲಿಸಿದ್ದರು. 2013 ರಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಯಾಗಿ ಬಂದ ಅವರು 10 ವರ್ಷ ಸೇವೆ ಸಲ್ಲಿಸಿ ಇದೀಗ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.


ಒಟ್ಟು 30 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಇಂದಿನಿಂದ ಸ್ವಯಂ ನಿವೃತ್ತಿಗೊಂಡ ಅವರು ಮುಂದೆ ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಸಂಗಮ್ ಬಿಲ್ಡಿಂಗ್‌ನ ತಮ್ಮ ಕ್ಲಿನಿಕ್‌ನಲ್ಲಿ ಪೂರ್ಣಾವಧಿ ಸೇವೆಗೆ ಜನರಿಗೆ ಲಭ್ಯರಿರುವರೆಂದು ತಿಳಿದುಬಂದಿದೆ.