*ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ, *ಪಕ್ಷದ ಅಭಿಮಾನ ಇರುವ ನಾವು ವ್ಯಕ್ತಿಯನ್ನು ನೋಡುವುದಿಲ್ಲ ; ಪಕ್ಷ ಸೂಚಿಸಿದವರ ಗೆಲುವೊಂದೇ ನಮ್ಮ ಗುರಿ : ಬ್ಲಾಕ್ ಕಾಂಗ್ರೆಸ್

0

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ಮತ್ತು ಕಡಬ ಬ್ಲಾಕ್‌ಗಳನ್ನೊಳಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಜಿ.ಕೃಷ್ಣಪ್ಪರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಪಕ್ಷದ ಅಭಿಮಾನ ಇರುವ ನಾವು ವ್ಯಕ್ತಿಯನ್ನು ನೋಡುವುದಿಲ್ಲ ಪಕ್ಷ ಸೂಚಿಸಿದವರ ಗೆಲುವೊಂದೇ ನಮ್ಮ ಗುರಿಯಾಗಿದೆ. ಎಲ್ಲರೂ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು” ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಹೇಳಿದ್ದಾರೆ.

ಎ.೧ರಂದು ಸುಳ್ಯ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಭ್ಯರ್ಥಿ ಆಯ್ಕೆಯಲ್ಲಿ ಸುಳ್ಯ ಬ್ಲಾಕ್ ಯಾವುದೇ ಶಿಫಾರಸ್ಸು ಮಾಡಿಲ್ಲ. ಸುಳ್ಯದಿಂದ ೬ ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಮೂರು ಹೆಸರನ್ನು ಬ್ಲಾಕ್ ನಿಂದ ಕಳುಹಿಸಿಕೊಡಬೇಕೆಂದು ಹೈಕಮಾಂಡ್ ಹೇಳಿದ್ದರಿಂದ ಸುಳ್ಯ ಬ್ಲಾಕ್‌ನಿಂದ ಸುಳ್ಯ ಬ್ಲಾಕ್‌ನ ಕೆ.ಪಿ.ಸಿ.ಸಿ. ಸಂಯೋಜಕರಾದ ಜಿ.ಕೃಷ್ಣಪ್ಪ, ಕಡಬ ಬ್ಲಾಕ್‌ನ ಕೆ.ಪಿ.ಸಿ.ಸಿ ಸಂಯೋಜಕ ಹೆಚ್.ಎಂ. ನಂದಕುಮಾರ್ ಹಾಗೂ ಶ್ರೀಮತಿ ಅಪ್ಪಿ ಅವರ ಹೆಸರನ್ನು ವೀಕ್ಷಕರಿಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾ ಸಮಿತಿಯು ಅರ್ಜಿ ಸಲ್ಲಿಸಿದ ಎಲ್ಲ ಆಕಾಂಕ್ಷಿಗಳನ್ನು ಕರೆಯಿಸಿ ಅಭಿಪ್ರಾಯ ಸಂಗ್ರಹಿಸಿ ಪಟ್ಟಿಯನ್ನು ರಾಜ್ಯ ಸಮಿತಿಗೆ ರವಾನಿಸಿದೆ. ಪ್ರಕ್ರಿಯೆಗಳು ನಡೆದು ಅಂತಿಮವಾಗಿ ಕೇಂದ್ರ ಚುನಾವಣಾ ಸಮಿತಿ ಹೆಸರನ್ನು ಪ್ರಕಟಿಸಿದೆ. ಇದರಿಂದ ಅಸಮಾಧಾನಗೊಂಡಿರುವ ಆಕಾಂಕ್ಷಿಗಳ ಪರವಾಗಿ ಕಾರ್ಯಕರ್ತರು ಈಗಾಗಲೇ ವರಿಷ್ಟರಿಗೆ ಅಹವಾಲು ಸಲ್ಲಿಸಿದ್ದಾರೆ.

ಇದಕ್ಕೆ ಹೈಕಮಾಮಡ್ ಸೂಕ್ತ ಪರಿಹಾರ ಕಂಡುಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ. ಮತ್ತು ಪಕ್ಷದ ಹೈಕಮಾಂಡ್ ನೀಡಿದ ಯಾವುದೇ ಅಭ್ಯರ್ಥಿಯ ಗೆಲುವಿಗೆ ನಾವು ದುಡಿಯುವುದು ನಿಷ್ಠಾವಂತ ಕಾಂಗ್ರೆಸ್ಸಿಗರಾದ ನಮ್ಮ ಕರ್ತವ್ಯ ಎಂದರಲ್ಲದೆ, ಕೃಷ್ಣಪ್ಪ ಹಾಗೂ ನಂದಕುಮಾರ್ ಇಬ್ಬರೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಸಮಾಜಸೇವೆ, ನಾಯಕರ ಸಂವಹನದಲ್ಲಿ ಕೆಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿಯೇ ವೀಕ್ಷಕರ ತಂಡಕ್ಕೆ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲ ಮಾಡಿಕೊಳ್ಳದೆ ಚುನಾವಣಾ ಪ್ರಕ್ರಿಯೆಲ್ಲಿ ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಬೇಕಾಗಿ ಅವರು ವಿನಂತಿಸಿಕೊಂಡರು.

*ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಗೆಲ್ಲುತ್ತದೆ : ಭರತ್ ಮುಂಡೋಡಿ*

ದ.ಕ. ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, “ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್ ಹಾಗೂ ಕೃಷ್ಣಪ್ಪ ಇಬ್ಬರೂ ಕೆಲಸ ಮಾಡಿದ್ದಾರೆ. ಇಬ್ಬರಿಗೂ ಅಭಿಮಾನಿಗಳಿದ್ದಾರೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಬಳಿಕ ಪ್ರೊಸೆಸ್ ನಡೆದು ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆ. ನಾವು ಅಭ್ಯರ್ಥಿಗಳ ಬಗ್ಗೆ ಚಿಂತನೆ ಮಾಡಿಲ್ಲ. ಪಕ್ಷದ ಸಿದ್ಧಾಂತ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸಿ ಪಕ್ಷದ ಮೇಲೆ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತೇವೆ ಎಂದು ಭರತ್ ಮುಂಡೋಡಿ ಹೇಳಿದರು. ಪಕ್ಷದಲ್ಲಿ ಈಗ ಯಾವುದೇ ಭಿನ್ನಮತ ಇಲ್ಲ. ಈಗ ಇರುವ ಗೊಂದಲ ಟಿಕೆಟ್ ಸಿಗದವರ ಅಭಿಮಾನಿಗಳ ತಕ್ಷಣದ ಪ್ರತಿಕ್ರಿಯೆಯಷ್ಟೆ. ಅದನ್ನು ನಾಯಕರು ಕಾರ್ಯಕರ್ತರೊಂದಿಗೆ ಮಾತನಾಡಿ ಬಗೆ ಹರಿಸುತ್ತಾರೆ. ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದು ಜನರು ಮನಸ್ಸು ಮಾಡಿದರೆ ಅಭ್ಯರ್ಥಿ ನಂದಕುಮಾರ್ ಆಗಲಿ – ಕೃಷ್ಣಪ್ಪ ಯಾರೇ ಆದರೂ ಗೆಲ್ಲುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ, ಬ್ಲಾಕ್‌ನಿಂದ ಮೂರು ಹೆಸರು ಹೋಗಿದೆ. ಮೇಲಿನವರ ಆಯ್ಕೆಗೆ ಬ್ಲಾಕ್ ಏನೂ ಮಾಡುವಂತಿಲ್ಲ. ಈಗ ಕೆಲವು ಕಾರ್ಯಕರ್ತರು ನಾಯಕರನ್ನು ಭೇಟಿಯಾಗಿ ಮನವಿ ಮಾಡಿಕೊಂಡದ್ದು ಮಾಧಮದ ಮೂಲಕ ಗೊತ್ತಾಗಿದೆ. ಪಕ್ಷ ಬಿ ಫಾರಂ ಕೊಡುವ ವರೆಗೆ ಪ್ರಯತ್ನಗಳು ನಡೆಯುತ್ತಾ ಇರುತ್ತದೆ. ಯಾರು ಬಿ ಫಾರಂ ತಂದರೂ ನಾವು ಅವರ ಪರ ಕೆಲಸ ಮಾಡುತ್ತೇವೆ. ವ್ಯಕ್ತಿ ಮುಖ್ಯ ಅಲ್ಲ. ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತೇವೆ. ಈಗ ಹೈಕಮಾಂಡ್ ಕೃಷ್ಣಪ್ಪರನ್ನು ಸೂಚಿಸಿದ್ದರಿಂದ ಅವರು ಪಕ್ಷದ ಅಭ್ಯರ್ಥಿ ಎಂದ ಅವರು, ಬ್ಲಾಕ್ ಮಟ್ಟದಲ್ಲೇ ನಂದಕುಮಾರ್‌ರ ಹೆಸರು ಬಿಟ್ಟಿದ್ದರೆ ಕಾರ್ಯಕರ್ತರು ಪ್ರಶ್ನಿಸಬಹುದಿತ್ತು. ಆದರೆ ನಾವು ಕಳುಹಿಸಿzವೆ. ಈಗ ಗೊಂದಲದಲ್ಲಿರುವ ಕಾರ್ಯಕರ್ತರನ್ನು ಕರೆದು ಮಾತನಾಡುತ್ತೇವೆ. ನಂದಕುಮಾರ್‌ರ ಬಳಿಯೂ ಮಾತನಾಡುತ್ತೇವೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದಕ್ಕಾಗಿ ಸುಳ್ಯ ಕ್ಷೇತ್ರದಿಂದಲೂ ಕೊಡುಗೆ ನೀಡಲು ನಾವು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿzವೆ” ಎಂದು ಹೇಳಿದರು.

ಪತ್ರಿಕಾಗೋಷ್ಠೀಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ನಾಯಕರಾದ ಡಾ| ರಘು ಬೆಳ್ಳಿಪ್ಪಾಡಿ, ಕೆ.ಎಂ.ಮುಸ್ತಫಾ, ಇಸ್ಮಾಯಿಲ್ ಪಡ್ಪಿನಂಗಡಿ, ಹಮೀದ್ ಕುತ್ತಮೊಟ್ಟೆ, ಎಸ್.ಸಂಶುದ್ದೀನ್, ಟಿ.ಎಂ.ಶಹೀದ್, ಶಾಫಿ ಕುತ್ತಮೊಟ್ಟೆ, ಚಂದ್ರ ಲಿಂಗಂ, ಸುರೇಶ್ ಎಂ.ಹೆಚ್., ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್, ಗಂಗಾಧರ ಮೇನಾಲ, ಜಯಪ್ರಕಾಶ್ ನೆಕ್ರೆಪ್ಪಾಡಿ ಇದ್ದರು.