ಎಲಿಮಲೆ : ತೆಂಗಿನ ಮರದಿಂದ ಬಿದ್ದು ಯುವಕ ದಾರುಣ ಮೃತ್ಯು

0

ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆಯ ಯುವಕನೋರ್ವ ತೆಂಗಿನ ಕಾಯಿ ತೆಗೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ದಿ| ಶಿವರಾಮ ಮಣಿಯಾಣಿಯವರ ಪುತ್ರ ಸತೀಶ ಮಣಿಯಾಣಿ (ಅಂದಾಜು 35 ವರ್ಷ ಪ್ರಾಯ) ಎಂಬವರೇ ಮೃತ ವ್ಯಕ್ತಿ.

ಸತೀಶರವರು ಇಂದು ಬೆಳಿಗ್ಗೆ ಎಂದಿನಂತೆ ದೇವಚಳ್ಳ ಗ್ರಾಮದ ಅಂಬೆಕಲ್ಲು ತೀರ್ಥರಾಮರವರ ಮನೆಗೆ ಕೆಲಸಕ್ಕೆ ಹೋಗಿದ್ದರೆನ್ನಲಾಗಿದೆ. ಮಧ್ಯಾಹ್ನ ಊಟ ಮುಗಿಸಿ ಎಲಿಮಲೆ ಬಳಿಯ ಪರ್ಲಡಿ ನಾರಾಯಣ ಎಂಬವರ ಮನೆ
ಯ ಬಳಿಯಿದ್ದ ಒಂದೆರಡು ತೆಂಗಿನ ಮರದಿಂದ ಊಟದ ಬಳಿಕ ಇದ್ದ ಸಮಯದಲ್ಲಿ ಬಂದು ತೆಂಗಿನ ಕಾಯಿ ತೆಗೆಯಲೆಂದು ಹತ್ತಿದ್ದರೆನ್ನಲಾಗಿದೆ.

ತೆಂಗಿನ ಕಾಯಿಯ ಗೊನೆ ಕಡಿಯುತ್ತಿದ್ದಂತೆ ಅವರು ಅಕಸ್ಮಾತ್ ಆಗಿ ತೆಂಗಿನ ಮರದಿಂದ ಬಿದ್ದರೆಂದೂ, ಈ ಸಂದರ್ಭ ಅವರು ಗಂಭೀರ ಗಾಯಗೊಂಡರೆಂದೂ ತಿಳಿದು ಬಂದಿದೆ. ತಕ್ಷಣ ಅಲ್ಲಿದ್ದವರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋದರೆಂದೂ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಸ್ತೆ ಮಧ್ಯೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ಅವಿವಾಹಿತರಾಗಿದ್ದು, ತಾಯಿ ಮತ್ತು ಸಹೋದರ ಗಣೇಶ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.

ಮೃತದೇಹ ಪೋಸ್ಟ್ ಮಾರ್ಟಂ ಪುತ್ತೂರು ಆಸ್ಪತ್ರೆಯಲ್ಲಿ ನಡೆಯಲಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಸತೀಶ ರವರ ತಂದೆ ಮತ್ತು ಓರ್ವ ಸಹೋದರ ದಿ| ಸತ್ಯನಾರಾಯಣ ಎಂಬವರು ತೆಂಗಿನ ಮರದಿಂದಲೇ ಬಿದ್ದು ಮೃತಪಟ್ಟಿದ್ದು, ಇದೀಗ ಅವರ ಇನ್ನೋರ್ವ ಪುತ್ರ ಸತೀಶ ಕೂಡಾ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿರುವುದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.