ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು

0

ಎಸ್.ಅಂಗಾರ, ಹರೀಶ್ ಕಂಜಿಪಿಲಿ, ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ ವಿಶ್ವಾಸ

ಜನರ ಸಮಸ್ಯೆಗೆ ಸ್ಪಂದಿಸುವೆ, ಇಲಾಖೆಗಳಲ್ಲಿ ಲಂಚ ನೀಡದೇ ಕೆಲಸ ಆಗುವಂತೆ ನೋಡಿಕೊಳ್ಳುವೆ : ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸುಳ್ಯ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಹೇಳಿದರೆ, ನನಗೆ ಪಕ್ಷ ಒಂದು ಅವಕಾಶ ನೀಡಿದೆ. ನಾನು ಶಾಸಕಿಯಾಗಿ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಇಲಾಖೆಗಳಲ್ಲಿ ಲಂಚ ನೀಡದೇ ಕೆಲಸ ಆಗುವಂತೆ ನೋಡಿಕೊಳ್ಳುವೆ ಎಂದು ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಹೇಳಿದ್ದಾರೆ.


ಎ.೧೪ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು, “ಸುಳ್ಯ ಮೀಸಲಾತಿ ಕ್ಷೇತ್ರ. ಕೂಲಿ ಕಾರ್ಮಿಕರಾಗಿದ್ದ ಅಂಗಾರರು ಶಾಸಕರಾಗಿ, ಇದೀಗ ಮಂತ್ರಿಯಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ. ಕಳೆದ ೬ ಅವಧಿಯಲ್ಲಿಯೂ ಅವರ ಮೇಲಿನ ಅಭಿಮಾನದಿಂದ, ಅವರ ಸರಳ ಸಜ್ಜನಿಕೆಯ ನಡೆಗಳು ಪ್ರಾಮಾಣಿಕ ಕೆಲಸ ನಿರಂತರವಾಗಿ ಈ ಕ್ಷೇತ್ರದಲ್ಲಿ ಆಯ್ಕೆಯಾಗುವಂತೆ ಮಾಡಿದೆ. ಈ ಬಾರಿ ಪಕ್ಷ ಕು.ಭಾಗೀರಥಿ ಮುರುಳ್ಯರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಅವರು ಕೂಡಾ 22 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಅವರು ಹೇಳಿದರು.


ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ಕ್ಷೇತ್ರದಲ್ಲಿ ಅವಕಾಶ ನೀಡಿದರೆ, ಕಾಂಗ್ರೆಸ್ ಇಲ್ಲಿಯವರಿಗೆ ಅವಕಾಶ ನೀಡದೆ ಹೊರಗಿನ ಉದ್ಯಮಿಯನ್ನು ಕರೆದುಕೊಂಡು ಬಂದು ಅವಕಾಶ ನೀಡಿದ್ದು, ಅದು ದಿವಾಳಿಯಾಗುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಎಂದು ಹೇಳಿಕೊಂಡು ಜನರ ಮುಂದೆ ಹೋಗುತ್ತಿದ್ದು, ಈ ಹಿಂದೆ ಕೆಲವು ರಾಜ್ಯಗಳಲ್ಲಿ ಇದೇ ರೀತಿ ಘೋಷಣೆ ಮಾಡಿ ಜನರಿಗೆ ಮಂಕುಬೂದಿ ಎರಚಿದೆ. ಆದರೆ ಇದುವರೆಗೂ ಆ ರಾಜ್ಯಗಳಲ್ಲಿ ಅವರು ಮಾಡಿದ ಘೋಷಣೆ ಈಡೇರಿಸಿಲ್ಲ. ಎಲ್ಲವೂ ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಕಂಜಿಪಿಲಿ ಹೇಳಿದರು.

ಸಮಸ್ಯೆಗೆ ಸ್ಪಂದಿಸುವೆ : ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಮಾತನಾಡಿ ನನಗೆ ಪಕ್ಷ ಮತ್ತು ಸಂಘಟನೆ ಈ ಅವಕಾಶ ನೀಡಿದೆ. ಎಲ್ಲರ ಆಶೀರ್ವಾದದಿಂದ ಸುಳ್ಯದಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಹೇಳಿದ ಭಾಗೀರಥಿಯವರು, ನಾನು ಜನರ ಸಮಸ್ಯೆಗೆ ಸ್ಪಂದಿಸುವೆ. ಮೂಲಭೂತ ಅವಶ್ಯಕತೆಗೆ ಆದ್ಯತೆ ನೀಡುತ್ತೇನೆ. ಸರಕಾರಿ ಇಲಾಖೆಯಲ್ಲಿ ಲಂಚ ನೀಡದೇ ಕೆಲಸ ಆಗುವಂತೆ ನೋಡಿಕೊಳ್ಳುವೆ. ಆ ರೀತಿಯ ಜಾಗೃತಿಯನ್ನು ಕೈಗೊಳ್ಳುವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.


ಬಿಜೆಪಿಯನ್ನು ಗೆಲ್ಲಿಸುತ್ತಾರೆ


`’ಸುಳ್ಯದಲ್ಲಿ ಅಂಬೇಡ್ಕರ್ ಭವನದ ಕೆಲಸ ನಿಂತಿಲ್ಲ. ಪ್ರಗತಿಯಲ್ಲಿದೆ. ಅನುದಾನವೂ ಬಂದಿದೆ ಎಂದು ಸಚಿವ ಎಸ್.ಅಂಗಾರರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತದಾರರು ಗೆಲ್ಲಿಸುತ್ತಾರೆ. ನಮ್ಮ ಅಭ್ಯರ್ಥಿ ಇಲ್ಲಿಯವರೇ – ಕಾಂಗ್ರೆಸ್‌ನವರು ಹೊರಗಿನವರನ್ನು ನಿಲ್ಲಿಸಿದ್ದಾರೆ ಇದೆಲ್ಲವನ್ನು ಮತದಾರರು ಗಮನಿಸುತ್ತಾರೆ ಎಂದು ಸಚಿವ ಎಸ್.ಅಂಗಾರ ಹೇಳಿದರು.


ಹಿರಿಯ ನೇತೃತ್ವದಲ್ಲೇ ಅಭ್ಯರ್ಥಿ ಆಯ್ಕೆ


ಮಾಜಿ ಜಿ.ಪಂ. ಸದಸ್ಯ ಎಸ್.ಎನ್.ಮನ್ಮಥ ಮಾತನಾಡಿ, ಸುಳ್ಯದ ಅಭ್ಯರ್ಥಿಯ ಆಯ್ಕೆ ಪ್ರಮುಖರ ಮುಂದಾಳತ್ವದಲ್ಲೇ ಆಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯ ವಿಚಾರ ಮುಗಿದ ಅಧ್ಯಾಯ. ನಾವೆಲ್ಲರೂ ಒಗ್ಗಟ್ಟಾಗಿzವೆ. ಜತೆಯಾಗಿಯೇ ಕೆಲಸ ಮಾಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

ಹಿರಿಯ ಬಿಜೆಪಿ ನಾಯಕ ಎನ್.ಎ. ರಾಮಚಂದ್ರ ಮಾತನಾಡಿ, ಕಾರ್ಯಕರ್ತರಿಂದಲೇ ಪಕ್ಷ ಗಟ್ಟಿಯಾಗಿ ಬೆಳೆದಿದೆ. ಈ ಬಾರಿಯ ಚುನಾವಣೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಒಟ್ಟಾಗಿ ದುಡಿದು ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ವಿನಯ ಕುಮಾರ್ ಕಂದಡ್ಕ, ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ ಮೇನಾಲ, ಕೃಷ್ಣ ಶೆಟ್ಟಿ ಕಡಬ, ಮಹೇಶ್ ರೈ ಮೇನಾಲ, ಮುಳಿಯ ಕೇಶವ ಭಟ್, ಸುನಿಲ್ ಕೇರ್ಪಳ, ಚಂದ್ರಾ ಕೋಲ್ಚಾರು, ರಾಧಾಕೃಷ್ಣ ಬೊಳ್ಳೂರು, ಶಿವಪ್ರಸಾದ್ ನಡುತೋಟ, ಜಯಪ್ರಕಾಶ್ ಕುಂಚಡ್ಕ, ಗುರುದತ್ ನಾಯಕ್, ಪ್ರಸಾದ್ ಕಾಟೂರು, ಕರುಣಾಕರ ಹಾಸ್ಪಾರೆ, ಅನೂಪ್ ಬಿಳಿಮಲೆ ಮೊದಲಾದವರಿದ್ದರು.