ಸಂಪಾಜೆಯಲ್ಲಿ ಭೀಕರ ಅಪಘಾತ : ಹಸುಗೂಸು, ಮಗು ಸಹಿತ ಆರು ಮಂದಿ ಮೃತ್ಯು

0

ಕೊಡಗು ಸಂಪಾಜೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಸುಗೂಸು, ಮಗು ಸಹಿತ ಆರು ಮಂದಿ ದಾರುಣವಾಗಿ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.


ಇಂದು ಅಪರಾಹ್ನ 2.30 ರ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಸುಳ್ಯದಿಂದ ಮಡಿಕೇರಿಯತ್ತ ತೆರಳುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಡಿಕೇರಿಯಿಂದ ಸುಳ್ಯದತ್ತ ಬರುತ್ತಿದ್ದ ಕೆಸ್‌ಆರ್‌ಟಿಸಿ ಬಸ್ ನಡುವೆ ಈ ಅಪಘಾ ಸಂಭವಿಸಿತು. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಸ್ಥಳೀಯರು ಕಾರಿನ ಒಳಗಿದ್ದವರನ್ನು ಪ್ರಯಾಸದಿಂದ ಹೊರತೆಗೆದು ಸ್ಥಳೀಯ ಮತ್ತು ಸುಳ್ಯ ಆಸ್ಪತ್ರೆಗಳಿಗೆ ಕೊಂಡೊಯ್ದರು. ಆದರೆ ಆ ವೇಳೆಗಾಗಲೇ 6 ಮಂದಿ ಪ್ರಾಣ ಕಳೆದುಕೊಂಡಿದ್ದರು. ಗಂಭೀರವಾಗಿ ಗಾಯಗೊಂಡ ಮಗು ಸಹಿತ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರು ಮಂಡ್ಯ ಜಿಲ್ಲೆಯ ಮಳವಳ್ಳಿಯವರು ಎಂದು ತಿಳಿದುಬಂದಿದೆ. ಮೃತಪಟ್ಟವರು ಮಳವಳ್ಳಿಯ ಬಿಮನಹಳ್ಳಿಯ ಮಹದೇವ, ಶಿಲಾ, ಎಸ್.ಎಸ್.ಗೌಡ, ಜಿ.ಎನ್. ಗೌಡ ಎಂದು ತಿಳಿದುಬಂದಿದೆ. ಮೃತಪಟ್ಟ ಇಬ್ಬರು ಮಕ್ಕಳಲ್ಲಿ ಒಂದು ಮಗು ಮೂರು ವರ್ಷದ್ದು ಹಾಗೂ ಮತ್ತೊಂದು ಮಗು ೬ ತಿಂಗಳಿನದ್ದೆಂದು ತಿಳಿದು ಬಂದಿದೆ. ಈ ಭಾಗದ ಯಾತ್ರೆಗೆ ಬಂದು ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.