ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪ ನಾಳೆ ನಾಮಪತ್ರ ಸಲ್ಲಿಕೆ

0


ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರವರು ತಿಳಿಸಿದ್ದಾರೆ.
ಅವರು ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸುಳ್ಯಕ್ಕೆ ಸಮರ್ಥ ಅಭ್ಯರ್ಥಿಯನ್ನು ನೀಡಿದ್ದು, ಅವರ ಗೆಲುವಿಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಕಾರ್ಯಪ್ರವೃತ್ತರಾಗಿ ದುಡಿಯುತ್ತೇವೆ ಎಂದು ಹೇಳಿದರು. ಸುಳ್ಯ ಕಾಂಗ್ರೆಸ್ ಪ್ರಚಾರ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರುಗಳೊಂದಿಗೆ ಅಭ್ಯರ್ಥಿ ಜಿ. ಕೃಷ್ಣಪ್ಪರವರನ್ನು ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಕೆಗೆ ತೆರಳುತ್ತಿದ್ದು, ೧೧ ಗಂಟೆಗೆ ಸುಳ್ಯದ ಕೆವಿಜಿ ಪುರಭವನದಲ್ಲಿ ಪ್ರಚಾರ ಸಭೆಯನ್ನು ಕೂಡಾ ಹಮ್ಮಿಕೊಳ್ಳಲಾಗಿದೆ. ಈ ಸಾರ್ವಜನಿಕ ಸಭೆಯಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಉಪಸ್ಥಿತರಿದ್ದು, ಕಾಂಗ್ರೆಸ್ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ. ಬಳಿಕ ಅಲ್ಲಿಂದ ತೆರಳಿ ಸರಿಯಾಗಿ ಮಧ್ಯಾಹ್ನ ೧೨ ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯ ಕೊಟ್ಟ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ. ಆ ಪಕ್ಷದ ಗೆಲುವಿಗಾಗಿ ಎಲ್ಲರೂ ಕೈಜೋಡಿಸಬೇಕೆಂದು ಅವರು ಕೇಳಿಕೊಂಡರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷದಲ್ಲಿ ಕೂಡಾ ಅಭ್ಯರ್ಥಿಯ ಆಯ್ಕೆ ಮತ್ತು ಆಕಾಂಕ್ಷಿಗಳ ವಿಷಯದಲ್ಲಿ ಚರ್ಚೆಗಳು, ಸಣ್ಣಪುಟ್ಟ ಗೊಂದಲಗಳು ಸಹಜ. ಅದೇ ರೀತಿಯ ಘಟನೆ ಸುಳ್ಯದಲ್ಲಿ ಕೂಡಾ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವೆಲ್ಲವೂ ಸರಿಯಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ನಿಮ್ಮ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಆದ್ದರಿಂದ ಯಾರೂ ಕೂಡಾ ಗೊಂದಲ ಪಡುವ ಅವಶ್ಯಕತೆ ಇಲ್ಲ. ನಂದಕುಮಾರ್ ಹಾಗೂ ಜಿ.ಕೃಷ್ಣಪ್ಪ ಇಬ್ಬರೂ ಕೂಡಾ ನಮ್ಮವರೇ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರೂ ಕೂಡಾ ಸುಳ್ಯದಲ್ಲಿ ಹಲವಾರು ರೀತಿಯ ಕಾರ್ಯಕ್ರಮ ಮತ್ತು ಸೇವೆಗಳನ್ನು ಜನತೆಗೆ ನೀಡಿದ್ದಾರೆ. ಆದರೆ ಚುನಾವಣೆಯ ಸಂದರ್ಭ ಬಂದಾಗ ಹೈಕಮಾಂಡ್‌ನಿಂದ ಅಭ್ಯರ್ಥಿಯ ಆಯ್ಕೆ ಮಾತ್ರ ಒಂದೇ ಆಗಿರುತ್ತದೆ. ಅದು ಜಿ.ಕೃಷ್ಣಪ್ಪರವರಿಗೆ ಒಲಿದಿದ್ದು, ಅವರ ಪರವಾಗಿ ನಾವೆಲ್ಲರೂ ಒಂದಾಗಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ದಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಇತ್ತೀಚೆಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗೊಂದಲ ಅನಾವಶ್ಯಕವಾಗಿತ್ತು. ಏಕೆಂದರೆ ಅಭ್ಯರ್ಥಿಗಳನ್ನು ಸುಳ್ಯಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಜಿ.ಕೃಷ್ಣಪ್ಪರವರ ಹೆಸರು ಹೈಕಮಾಂಡ್ ಸೂಚಿಸಿದಾಗ ನಂದಕುಮಾರ್‌ರವರ ಅಭಿಮಾನಿ ಬಳಗ ಮತ್ತು ಕೆಲವು ಕಾರ್ಯಕರ್ತರಲ್ಲಿ ಈ ವಿಷಯ ಚರ್ಚೆಗೊಂಡು ಇದನ್ನು ಪರಿಹರಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮಾತುಕತೆ ನಡೆದಿತ್ತು. ಆ ಸಂದರ್ಭದಲ್ಲಿ ಪರಸ್ಪರ ಮಾತುಕತೆ ನಡೆಸಿ ಅಲ್ಲಿಂದ ನಮ್ಮೆಲ್ಲರ ಎದುರಿನಲ್ಲಿಯೇ ಮಾಜಿ ಸಚಿವ ಬಿ. ರಮಾನಾಥ ರೈಯವರಿಗೆ ದೂರವಾಣಿ ಕರೆ ಮಾಡಿ ನಂದಕುಮಾರ್ ಅಭಿಮಾನಿ ಬಳಗದಲ್ಲಿರುವ ಕಾರ್ಯಕರ್ತರುಗಳು ರಮಾನಾಥ ರೈಯವರನ್ನು ಗೌರವಿಸುವವರಿದ್ದು, ಆದ್ದರಿಂದ ನೀವು ಸುಳ್ಯಕ್ಕೆ ತೆರಳಿ ಅವರನ್ನು ಮಾತನಾಡಿಸಿ, ಈ ವಿಷಯವನ್ನು ಸರಿಪಡಿಸಿಕೊಡಬೇಕೆಂದು ಹೇಳಿದ್ದರೇ ವಿನಃ ಅಭಿಪ್ರಾಯ ಸಂಗ್ರಹಣೆ ಕುರಿತು ಯಾವುದೇ ಸೂಚನೆ ನೀಡಿರಲಿಲ್ಲ. ಈ ಅಭಿಪ್ರಾಯ ಸಂಂಗ್ರಹದಿಂದಾಗಿ ಅಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ಇದಕ್ಕೆ ಮೊದಲು ಕೂಡಾ ಈ ಗೊಂದಲ ಸರಿಪಡಿಸಬೇಕೆಂದು ನಾವೆಲ್ಲರೂ ಪ್ರಯತ್ನಪಟ್ಟಿದ್ದೇವೆ. ಮುಂದೆಯೂ ಕೂಡಾ ಅದನ್ನೇ ನಾವೆಲ್ಲರೂ ಬಯಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತರು ನಂದಕುಮಾರ್‌ರವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ಸೋಲುಂಟಾಗಬಹುದಲ್ಲವೇ? ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಅವರು, ಆ ರೀತಿ ನಡೆಯಲು ಸಾಧ್ಯವಿಲ್ಲ. ಅದರ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಗೆ ನಾವು ಮನವರಿಕೆ ಮಾಡಿದ್ದೇವೆ. ಅದನ್ನು ಬಿಟ್ಟು ಆ ರೀತಿಯ ಕೆಲಸಕ್ಕೆ ಮುಂದಾದರೆ ಪಕ್ಷ ಕೈಗೊಳ್ಳುವ ಕ್ರಮಕ್ಕೆ ಅವರು ಬದ್ಧರಾಗಬೇಕೆಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ, ಕಳೆದ ೩೦ ವರ್ಷಗಳಿಂದ ಸುಳ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸುಳ್ಯದ ಜನತೆ ಈಗಲೂ ಕೂಡಾ ರಸ್ತೆ, ೧೧೦ ಕೆವಿ ವಿದ್ಯುತ್ ಮೊದಲಾದ ವಿಷಯಗಳ ಕುರಿತು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೇವಲ ಮಾತಿನಲ್ಲಿ ಮಾತ್ರ ೧೧೦ ಕೆವಿ ಯೋಜನೆ ಆಗಿದ್ದಲ್ಲದೆ ಇನ್ನೂ ಕೂಡಾ ಕಾರ್ಯರೂಪಕ್ಕೆ ಬರಲಿಲ್ಲ. ಕುಡಿಯುವ ನೀರಿನ ಯೋಜನೆಗಳು ಕೂಡಾ ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಬಿಜೆಪಿ ಸರಕಾರದ ಸಚಿವರಾಗಿದ್ದ ಅಂಗಾರರು ಅಥವಾ ಸಂಬಂಧಪಟ್ಟ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ಎಲ್ಲಾ ದೃಷ್ಟಿಯಿಂದ ೩೦ ವರ್ಷ ಸುಳ್ಯದ ಜನತೆ ಅನುಭವಿಸಿದ ಕಷ್ಟಕ್ಕೆ ಪರಿಹಾರವಾಗಿ ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸುಳ್ಯದ ಅಭಿವೃದ್ಧಿಗೆ ಜನ ಆಶೀರ್ವದಿಸಬೇಕೆಂದು ಹೇಳಿದರು.
ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್ ಮಾತನಾಡಿ, ಜಿ.ಕೃಷ್ಣಪ್ಪರವರ ಗೆಲುವು ಅವರದ್ದು ಮಾತ್ರವಲ್ಲ, ಇಡೀ ಪಕ್ಷದ ಗೆಲುವಾಗಿರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರು ಒಂದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್, ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತನ್ ಕೊಡಪಾಲ ಇದ್ದರು.