ಸುಳ್ಯದಲ್ಲಿ ಆಟೋ ಗ್ಯಾಸ್ ದರ ಇಳಿಕೆಯಾಗದ ಹಿನ್ನಲೆ

0

ದಿಢೀರ್ ಪ್ರತಿಭಟನೆಗಿಳಿದ ಎಲ್‌ಪಿಜಿ ಅಟೋ ಚಾಲಕರು

ದರ ಕಡಿತಗೊಳಿಸುವ ಭರವಸೆಯ ಮೇರೆಗೆ ಪ್ರತಿಭಟನೆ ಹಿಂತೆಗೆತ




ಕಳೆದ ಎರಡು ದಿನಗಳ ಹಿಂದೆ ಎಲ್‌ಪಿಜಿ ಅಟೋ ಗ್ಯಾಸ್‌ಗಳ ದರ ಕಡಿತಗೊಳಿಸಲಾಗಿದ್ದು, ದ.ಕ. ಜಿಲ್ಲೆಯ ಕೆಲವು ಬಂಕ್‌ಗಳಲ್ಲಿ ೫೮.೬೧ ಪ್ರಸ್ತುತ ದರದಲ್ಲಿ ಅಟೋ ಗ್ಯಾಸ್ ನೀಡಲಾಗುತ್ತಿದೆ. ಆದರೆ ಸುಳ್ಯದಲ್ಲಿ ದರ ಕಡಿತಗೊಳಿಸದೆ ಈ ಹಿಂದಿನ ದರ ೬೬.೧೯ರೂ. ಇದನ್ನೇ ಮುಂದುವರಿಸಿರುವುದನ್ನು ಖಂಡಿಸಿರುವ ಸುಳ್ಯದ ಎಲ್‌ಪಿಜಿ ಗ್ರಾಹಕ ಅಟೋ ಮಾಲಕರು ಮತ್ತು ಚಾಲಕರು ಪರಿವಾರನದಲ್ಲಿರುವ ಗ್ಯಾಸ್ ಫಿಲ್ಲಿಂಗ್ ಬಂಕ್‌ನಲ್ಲಿ ದಿಢೀರ್ ಪ್ರತಿಭಟನೆಗೆ ಮುಂದಾದರು.
ಸುಮಾರು ೩೦ಕ್ಕೂ ಹೆಚ್ಚು ಅಟೋಗಳನ್ನು ಗ್ಯಾಸ್ ಬಂಕ್ ಮುಂಭಾಗದಲ್ಲಿ ನಿಲ್ಲಿಸಿ ಗ್ಯಾಸ್ ದರ ಕಡಿಮೆ ಮಾಡುವಂತೆ ಆಗ್ರಹಿಸಿದರು. ಈ ಸದಂರ್ಭದಲ್ಲಿ
ಸುದ್ದಿಯೊಂದಿಗೆ ಮಾತನಾಡಿದ ಅಟೋ ಚಾಲಕರು “ಪುತ್ತೂರು ಬಂಕ್‌ನಲ್ಲಿ ನಿನ್ನೆ ೫೪.೨೫ ಪೈಸೆ ದರದಲ್ಲಿ ಗ್ಯಾಸ್ ಫಿಲ್ ಮಾಡಿದ್ದು, ಇದೀಗ ಸುಳ್ಯದಲ್ಲಿ ನೋಡಿದಾಗ ೬೬.೭೯ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಬಂಕ್‌ನ ಮಾಲಕರೊಂದಿಗೆ ಕೇಳಿದಾಗ ಈ ದರವು ಸುಳ್ಯಕ್ಕೆ ಇನ್ನೂ ಅನ್ವಯವಾಗದ ಕಾರಣ ನಮ್ಮಿಂದ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೇಲಿನ ಆದೇಶ ಬರುವ ತನಕ ನಮಗೆ ಕಾಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಇವರು ಗ್ಯಾಸ್‌ನ ಬೆಲೆ ಹೆಚ್ಚಿಸಬೇಕಾದರೆ ಆ ಕೂಡಲೇ ಹೆಚ್ಚಿಸುವ ಕೆಲಸ ಮಾಡುತ್ತಾರೆ. ಕಡಿಮೆಯಾಗಿದ್ದರೆ ಅದನ್ನು ಮಾಡಲು ನೀತಿ ನಿಯಮವನ್ನು ಹೇಳುತ್ತಿದ್ದಾರೆ. ಆದ್ದರಿಂದ ದರ ಕಡಿಮೆ ಮಾಡದಿದ್ದಲ್ಲಿ ನಾವು ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಸುಳ್ಯದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಎಲ್‌ಪಿಜಿ ಅಟೋ ಗ್ರಾಹಕರಿದ್ದು ಅವರನ್ನೆಲ್ಲಾ ಒಗ್ಗೂಡಿಸಿ ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಕೆ ನೀಡಿದರು.


ಈ ವೇಳೆ ಬಂಕ್‌ನ ಮಾಲಕರಾದ ಸುನಿಲ್‌ರವರೊಂದಿಗೆ ಸುದ್ದಿಯಿಂದ ಮಾತನಾಡಿದಾಗ, ದರ ಕಡಿಮೆಯಾಗಿರುವುದು ವಾಸ್ತವ ಸಂಗತಿಯಾಗಿದ್ದು, ಆದರೆ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಅಧಿಕೃತವಾಗಿ ಕಂಪೆನಿಯಿಂದ ಆದೇಶ ಬಂದಿರುವುದಿಲ್ಲ. ಆದ್ದರಿಂದ ನಾನು ಕೂಡಾ ಇಂದು ಬೆಳಿಗ್ಗಿನಿಂದಲೇ ಸಂಬಂಧಪಟ್ಟ ಕಂಪೆನಿಯ ಮುಖಂಡರ ಜೊತೆ ಸುಳ್ಯದ ಗ್ಯಾಸ್ ಬಂಕ್‌ನಲ್ಲಿ ದರ ಕಡಿಮೆ ಮಾಡಿ ಕೊಡಲು ಪ್ರಯತ್ನ ಮಾಡುತ್ತಿದ್ದೇನೆ. ಮತ್ತು ನನ್ನಿಂದಾಗುವ ಎಲ್ಲಾ ರೀತಿಯ ಒತ್ತಡವನ್ನು ಸಂಬಂಧಪಟ್ಟವರಿಗೆ ನೀಡುತ್ತಿದ್ದೇನೆ. ಈ ಹಿನ್ನಲೆಯಲ್ಲಿ ಮಧ್ಯಾಹ್ನ ಸುಮಾರು ೨ ಗಂಟೆಯ ವೇಳೆಗೆ ದರ ಕಡಿಮೆ ಮಾಡುವ ಭರವಸೆಯನ್ನು ಕಂಪೆನಿಯವರು ನೀಡಿದ್ದಾರೆ. ನಮಗೆ ಆದೇಶ ಬಂದ ಕೂಡಲೇ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದರು. ೨ ಗಂಟೆಗೆ ದರ ಕಡಿಮೆ ಮಾಡುವ ಭರವಸೆಯನ್ನು ಮಾಲಕರು ನೀಡಿದ ಹಿನ್ನಲೆಯಲ್ಲಿ ಅಟೋ ಚಾಲಕರು ಸ್ಥಳದಿಂದ ನಿರ್ಗಮಿಸಿದರು.


ಈ ಸಂದರ್ಭದಲ್ಲಿ ಅಟೋ ಚಾಲಕರಾದ ರಾಧಾಕೃಷ್ಣ ಪರಿವಾರಕಾನ, ಸುಂದರ್ ಪೆರಾಜೆ, ದಿನಕರ ಕೇರ್ಪಳ, ಭಾನುಪ್ರಕಾಶ್, ಪದ್ಮನಾಭ ಹರ್‍ಲಡ್ಕ, ಕಾರ್ತಿಕ್ ದಂಬೆಕೋಡಿ, ಕಾರ್ತಿಕ್ ನಾಗಪಟ್ಟಣ, ಅಜೇಶ್ ಗಾಂಧಿನಗರ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಅಟೋ ಚಾಲಕರು ಇದ್ದರು.