ಕೋವಿ ಡೆಪಾಸಿಟ್ : ರೈತರಿಗೆ ವಿನಾಯಿತಿ ನೀಡಲು ರೈತ ಸಂಘ ಆಗ್ರಹ

0

ವಿನಾಯಿತಿ ನೀಡದಿದ್ದರೆ ಮತದಾನದಲ್ಲಿ ಭಾಗವಹಿಸದಿರಲು ನಿರ್ಧಾರ

ಬೆಳೆ ರಕ್ಷಣೆಗಾಗಿ ಕೃಷಿಕರು ಹೊಂದಿರುವ ಕೋವಿಯನ್ನು ಚುನಾವಣೆ ಸಂದರ್ಭ ಡೆಪಾಸಿಟ್ ಇಡುವ ಕ್ರಮ ಸರಿಯಲ್ಲ. ಕಾಡು ಪ್ರಾಣಿಗಳಿಂದ ಆಗುವ ಸಮಸ್ಯೆಯ ವಿವರದೊಂದಿಗೆ ರೈತ ಸಂಘ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು ನಮ್ಮ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ಕೋವಿ ಡೆಪಾಸಿಟ್ ಇಡುವುದರಿಂದ ವಿನಾಯಿತಿ ಕೊಡಬೇಕು. ವಿನಾಯಿತಿ ನೀಡದಿದ್ದಲ್ಲಿ ರೈತರು ಮತದಾನದಲ್ಲಿ ಭಾಗವಹಿಸದೇ ಕಾನೂನು ಹೋರಾಟಕ್ಕೆ ಮುಂದಾಗಲಿzವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಶಾಖೆ ಆಗ್ರಹಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲುರವರು ಬೆಳೆ ರಕ್ಷಣೆಗಾಗಿ ರೈತರ ಬಂದೂಕನ್ನು ಡೆಪಾಸಿಟ್ ಮಾಡಬೇಕೆಂಬ ಆದೇಶ ಜಾರಿಯಾಯಿತು. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ರೈತರಿಗೆ ವಿನಾಯಿತಿ ನೀಡಬೇಕೆಂದು ಕೇಳಿದ್ದೆವು. ಸ್ಪಂದಿಸಿದ ಜಿಲ್ಲಾಧಿಕಾರಿಗಳು ದಾಖಲೆಯೊಂದಿಗೆ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಮಾಡಿದರೆ ಪರಿಶೀಲಿಸೋಣ ಎಂದಿದ್ದರು. ಇದರಂತೆ ರೈತರು ದಾಖಲೆಯೊಂದಿಗೆ ಹೋದಾಗ ಕೋವಿ ಡೆಪಾಸಿಟ್‌ಗೆ ಎ.೨೪ ಎಂದು ದಿನ ನಿಗದಿ ಮಾಡಲಾಗಿತ್ತು. ಬಳಿಕ ಆದೇಶ ತಿದ್ದು ಪಡಿ ಮಾಡಿ ಎ.೧೩ರೊಳಗೆ ಡೆಪಾಸಿಟ್ ಮಾಡಬೇಕೆಂದು ಹೇಳಿದ್ದಾರೆ. ನಮ್ಮ ಮನವಿಯನ್ನು ಸ್ವೀಕರಿಸಿದ ಜಿಲ್ಲಾಡಳಿತ ಕೆಲವೇ ಕೆಲವು ಜನರಿಗೆ ಮಾತ್ರ ಸಮಸ್ಯೆ ಇರುವುದೆಂದು ಹೇಳಿ ಅವರಿಗೆ ಕೋವಿ ಡೆಪಾಸಿಟ್ ನಿಂದ ವಿನಾಯಿತಿ ನೀಡಿದ್ದಾರೆ. ನಿಜವಾದ ರೈತರಿಗೆ ಇದರಿಂದ ಅನ್ಯಾಯವಾಗಿದೆ. ಆದ್ದರಿಂದ ಈಗಾಗಲೇ ಠೇವಣಿ ವಿನಾಯಿತಿಗೆ ಅರ್ಜಿ ಸಲ್ಲಿಸದವರಿಗೆ ವಿನಾಯಿತಿ ತಡೆ ಹಿಡಿದಿದ್ದನ್ನು ಮರು ಪರಿಶೀಲಿಸಿ ವಿನಾಯಿತಿ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ. ನಮ್ಮ ಸಮಸ್ಯೆಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಚುನಾವಣೆಯ ಸಮಯದಲ್ಲಿ ಕೋವಿ ಪರವಾನಿಗೆ ಹೊಂದಿದ ಎಲ್ಲಾ ರೈತರಿಗೆ ಠೇವಣಿ ಇಡುವುದನ್ನು ಸಂಪುರ್ಣ ವಿನಾಯಿತಿ ನೀಡಬೇಕು. ನೀಡದಿದ್ದಲ್ಲಿ ರೈತರು ಮತದಾನದಲ್ಲಿ ಭಾಗವಹಿಸದೇ ಕಾನೂನು ಹೋರಾಟಕ್ಕೆ ಮುಂದಾಗಲಿzವೆ ಎಂದು ಅವರು ತಿಳಿಸಿದರು.


ರೈತ ಸಂಘದ ಉಪಾಧ್ಯಕ್ಷ ಉಳುವಾರು ತೀರ್ಥರಾಮರು ತೊಡಿಕಾನ, ಬಾಳೆಕಜೆಯಲ್ಲಿ ಹಾಗೂ ತಾಲೂಕಿನಾದ್ಯಂತ ಕಾಡು ಪ್ರಾಣಿಗಳ ಹಾವಳಿ ಕುರಿತು ವಿವರ ನೀಡಿದರು. ರೈತ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಐವರ್ನಾಡು, ಕೋಶಾಧಿಕಾರಿ ದೇವಪ್ಪ ಗೌಡ ಕುಂದಲ್ಪಾಡಿ, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ, ಉಪಾಧ್ಯಕ್ಷ ಮಾಧವ ಗೌಡ ಉಪಸ್ಥಿತರಿದ್ದರು.