ಬೆಳ್ಳಾರೆಯಲ್ಲಿ ಬಿಜೆಪಿ ವತಿಯಿಂದ ಭರ್ಜರಿ ರೋಡ್ ಶೋ

0

ಬಸ್ಸು ತಂಗುದಾಣದ ಬಳಿ ಸಾರ್ವಜನಿಕ ಪ್ರಚಾರ ಸಭೆ

ಸುಳ್ಯದಲ್ಲಿ ಈ ಬಾರಿ ನಲವತ್ತು ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವು: ಜಗದೀಶ್ ಶೇಣವ

ಪಕ್ಷದ ತಳಮಟ್ಟದ ಸಂಘಟನೆ ಹಾಗೂ ಕಾರ್ಯಕರ್ತರ ಶ್ರಮವೇ ಬಿಜೆಪಿ ಅಭ್ಯರ್ಥಿಗೆ ಗೆಲುವು ತಂದುಕೊಡಲಿದೆ: ಶ್ರೀಮತಿ ಕಸ್ತೂರಿ ಪಂಜ

ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಭರ್ಜರಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯು ಬೆಳ್ಳಾರೆ ಬಸ್ಸು ತಂಗುದಾಣದ ಬಳಿ ಎ.25ರಂದು ಸಂಜೆ ಜರುಗಿತು.

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಪ್ರಾರಂಭಗೊಂಡ ರೋಡ್ ಶೋ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರ ಮೆರವಣಿಗೆಯ ಮೂಲಕ ಮೇಲಿನ ಪೇಟೆಯ ಪೆಟ್ರೋಲ್ ಪಂಪ್ ತನಕ ಸಾಗಿ ಹಿಂತಿರುಗಿ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು.

ಬಳಿಕ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ ಅವರು ಮಾತನಾಡಿ ಮತಾಂದ ಶಕ್ತಿಗಳಿಂದ ಹತ್ಯೆಗೀಡಾದ ‘ ದಿ. ಪ್ರವೀಣ್ ನೆಟ್ಟಾರು ಅವರ ಮನೆಯವರನ್ನು ಬಿಜೆಪಿ ಎಂದಿಗೂ ಕೈಬಿಡಲಿಲ್ಲ. ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಶಾಸಕ ಅಂಗಾರರು ಶಾಸಕರಾಗಿ ಆರು ಅವಧಿಯಲ್ಲಿ ಸಲ್ಲಿಸಿದ ಸೇವೆ ಹಾಗೂ ಸಚಿವರಾದ ಬಳಿಕ ಎಲ್ಲಾ ಇಲಾಖೆಗಳಿಗೆ ಸೇರಿ ಸುಮಾರು ಎರಡೂವರೆ ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.


ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತದಾರರು ಈ ಬಾರಿ ಯೋಚಿಸಿ ಮತಚಲಾಯಿಸಬೇಕು ಎಂದು ಹೇಳಿದರು.


ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಯನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ತಿಳಿಸಬೇಕಾಗಿದೆ ಎಂದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ವಿದೇಶಗಳಲ್ಲಿ ಭಾರತಕ್ಕೆ ಸಿಗುವ ಗೌರವವನ್ನು ಜನರು ಗಮನಿಸುತ್ತಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಲ್ಲಿ ಅಂಗಾರರು 26 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರನ್ನು ಸುಮಾರು ನಲವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.

ಬಿಜೆಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಅವರು ಮಾತನಾಡಿ ‘ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪಕ್ಷದ ಸಾಮಾನ್ಯ ಕಾರ್ಯಕರ್ತೆ ಹಾಗೂ ಒಬ್ಬ ಸಾಮಾನ್ಯ ಹೆಣ್ಣುಮಗಳನ್ನು ಅಭ್ಯರ್ಥಿಯಾಗಿಸಿದ್ದು, ಪಕ್ಷದ ತಳಮಟ್ಟದ ಸಂಘಟನೆ ಹೊಂದಿರುವ ಸುಳ್ಯ ಕ್ಷೇತ್ರದ ಕಾರ್ಯಕರ್ತರು ಸುಳ್ಯದಲ್ಲಿ ಈ ಬಾರಿ ಭಾಗೀರಥಿ ಮುರುಳ್ಯ ಅವರನ್ನು ಐವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಅಭ್ಯರ್ಥಿ ಸಿಗದೇ ಹೊರಗಿನವರನ್ನು ತಂದು ಈ ಬಾರಿ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಹೇಳಿದರು.

ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ‘ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಕ್ತಿಯುತ ಬಿಜೆಪಿ ಕಾರ್ಯಕರ್ತರ ಪಡೆ ಇದೆ. ನನಗೆ ಈ ಬಾರಿ ಪಕ್ಷ ಅಭ್ಯರ್ಥಿಯಾಗುವ ಅವಕಾಶ ನೀಡಿದ್ದು, ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ವಿನಂತಿಸಿಕೊಂಡರು.

ವೇದಿಕೆಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯ, ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಎ.ವಿ. ತೀರ್ಥರಾಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ಬಿಜೆಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದರ್ಶಿ ಕೇಶವ ಭಟ್ ಮುಳಿಯ, ಜಿ.ಪಂ. ಮಾಜಿ ಸದಸ್ಯ ಎಸ್.ಎನ್. ಮನ್ಮಥ, ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಹರೀಶ್ ಕಂಜಿಪಿಲಿ ಸ್ವಾಗತಿಸಿ, ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಾರೆ ಬಿಜೆಪಿ ಮಹಾಶಕ್ತಿಕೇಂದ್ರದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.