ನಾಗಪಟ್ಟಣ ಕಿಂಡಿಅಣೆ ಕಟ್ಟಿನಿಂದ ನೀರು ಬಿಡುಗಡೆ

0

ನೀರು ಶೇಖರಣೆಗೊಂಡಿದ್ದ ಭಾಗದ ಕೃಷಿ ಭೂಮಿಗೆ ಹಾನಿ, ಮಣ್ಣು ಸಮೇತ ಕುಸಿದು ಬೀಳುವ ಮರಗಳು

ನಾಗಪಟ್ಟಣ ಕಿಂಡಿ ಅಣೆಕಟ್ಟಿನ ಮುಚ್ಚಿದ್ದ ಬಾಗಿಲುಗಳನ್ನು ತೆರೆದು ಬಿಡಲಾಗಿದ್ದು ಶೇಖರಣೆಗೊಂಡಿದ್ದ ನೀರು ಖಾಲಿ ಮಾಡಲಾಗಿದೆ.


ಕಳೆದ ಬೇಸಿಗೆಕಾಲ ಆರಂಭವಾದೊಡನೆ ನಗರಕ್ಕೆ ನೀರು ಸರಬರಾಜಿಗಾಗಿ ಅಣೆಕಟ್ಟಿನ‌ ತಳ ಹಂತದ ಗೇಟುಗಳನ್ನು ಮುಚ್ವುವ ಮೂಲಕ ನೀರಿನ ಶೇಖರಣೆ ಮಾಡಲಾಗಿತ್ತು.

ಅಣೆಕಟ್ಟಿನಲ್ಲಿ ಸುಮಾರು 10- 15 ಫೀಟ್ ಎತ್ತರದಲ್ಲಿ ನೀರು ನಿಂತಿದ್ದು ನದಿಯ ಎರಡು ಬದಿಗಳಲ್ಲಿರುವ ಕೃಷಿ ತೋಟಗಳು ಕಳೆದ 6 ತಿಂಗಳ ಕಾಲ ಪೂರ್ಣ ಪ್ರಮಾಣದಲ್ಲಿ ಜಲಾವೃತಗೊಂಡಿದ್ದವು.


ನೀರು ನಿಲ್ಲಿಸಿ ಶೇಖರಣೆ ಮಾಡಿರುವುದರಿಂದ ಸುಳ್ಯ ನಗರ ನಿವಾಸಿಗಳಿಗೆ ಈ ಬಾರಿ ಬಿರು ಬಿಸಿಲಿನ ತಾಪಮಾನ ಜಾಸ್ತಿ ಕಂಡು ಬಂದರೂ ಕುಡಿಯಲು ನೀರು ಇಲ್ಲವೆಂಬ ಸಮಸ್ಯೆ ತಲೆದೋರಲಿಲ್ಲ.

ನಾಗಪಟ್ಟಣದಿಂದ ಮೇಲ್ಗಡೆಯ ನದಿಯ ಆಸು ಪಾಸಿನ ಕೃಷಿಕರಿಗೂ ನೀರಿನ ಅಭಾವ ಕಾಣಲಿಲ್ಲ. 24 ಗಂಟೆಗಳ ಕಾಲ ತೋಟಗಳಿಗೆ ನೀರು ಹಾಯಿಸಲು ಅವಕಾಶವಾಗಿತ್ತು.

ನಾಗಪಟ್ಟಣದಿಂದ ಮೇಲೆ
ಅರಂಬೂರು ಪೆರಾಜೆ ಯವರೆಗೆ ಇರುವ ನದಿಯ ಬದಿಯಿದ್ದ ತೋಟವು ನೀರಿನಲ್ಲಿ ಮುಳುಗಿದ್ದವು. ಆದರೆ ಈಗ ಜೋರಾದ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಶುರುವಾಗಿದೆ. ಹಾಗಾಗಿ ಕಿಂಡಿ ಅಣೆಕಟ್ಟಿನಿಂದ ಇಂದು ಬೆಳಗ್ಗೆ ಎಲ್ಲಾ ಗೇಟುಗಳನ್ನು ತೆರೆದು ನೀರನ್ನು ಕೆಳಗಡೆ ಹರಿಯಬಿಡಲಾಗಿದೆ.


ಇದರಿಂದಾಗಿ
ಇಷ್ಟು ತಿಂಗಳು ನೀರಿನಲ್ಲಿ ಮುಳುಗಿದ್ದ ತೋಟಗಳಿಗೆ ಹಾನಿಯುಂಟಾಗಿದೆ. ಜಲಾವೃತಗೊಂಡಿದ್ದ
ಕೃಷಿ ಭೂಮಿ ಕುಸಿಯತೊಡಗಿದ್ದು ಮಣ್ಣಿನ ಸಮೇತ ಮರಗಳು ಮಗುಚಿ ನದಿಗೆ ಬಿದ್ದಿವೆ. ಬದಿಯಲ್ಲಿ ಇನ್ನೂ ಜರಿತಗೊಂಡು ಮರಗಳು ಬೀಳುವ ಸ್ಥಿತಿಯಲ್ಲಿ ಇದೆ.

ಮುಂದೆ ಬರುವ ಮುಂಗಾರು ಮಳೆಯಲ್ಲಿ ಮತ್ತೆ ನದಿಯು ಉಕ್ಕಿ ಹರಿದಾಗ ಕುಸಿತಗೊಂಡ ಮಣ್ಣು ಸಮೇತ ಮರಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದು ಅಣೆಕಟ್ಟಿಗೆ ಬಡಿದು ಬ್ಲಾಕ್ ಆಗುವ ಸಾಧ್ಯತೆ ಇದೆ.

ಕೃಷಿಕರು ಬಹಳ ವರ್ಷಗಳಿಂದ ಕಷ್ಟ ಪಟ್ಟು ಮಾಡಿದ ಕೃಷಿ ಬೆಳೆಗಳಿಗೆ ‌ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅವಘಡಗಳು ಸಂಭವಿಸುವ ಮುಂಚಿತವಾಗಿ ಸಂಬಂಧ ಪಟ್ಟ ಇಲಾಖೆಯ ಇಂಜಿನಿಯರ್ಸ್ ಅಥವಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಅನಾಹುತಗಳು‌ ಸಂಭವಿಸದಂತೆ ಮುಂಜಾಗೃತ ಕ್ರಮ ವಹಿಸುವುದು ಅತೀ ಅಗತ್ಯವಾಗಿದೆ‌ ಎಂದು
ಈ ಭಾಗದ ಕೃಷಿಕರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.