ಶ್ರೀಮತಿ ತಾರಿಣಿ ಚಿದಾನಂದ ಕೊಳಂಬೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

0

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಘಟಿಕೋತ್ಸವವು ಜು. 10 ರಂದು ನಡೆದಿದ್ದು, ಕಲಾ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ತಾರಿಣಿ ಚಿದಾನಂದ ಕೊಳಂಬೆಯವರು ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕರ್ನಾಟಕದ ರಾಜ್ಯಪಾಲ ಥಾವರ್‌ಛಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಕರ್ನಾಟಕದ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರ ಪುತ್ರಿಯಾಗಿರುವ ಶ್ರೀಮತಿ ತಾರಿಣಿ ಚಿದಾನಂದರವರು ಗೃಹವಿಜ್ಞಾನದಲ್ಲಿ ತಮ್ಮ ಪದವಿ ವಿಜ್ಞಾನವನ್ನು ಪೂರ್ಣಗೊಳಿಸಿದ ನಂತರ ಸಂಗೀತದಲ್ಲಿ ಆಸಕ್ತಿಯನ್ನು ಅನುಸರಿಸಿ, ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಲಲಿತಕಲಾ ಸಂಗೀತ ಕಾಲೇಜಿನಲ್ಲಿ ಸಂಗೀತದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದು ಮೊದಲ ರ್‍ಯಾಂಕ್ ಮತ್ತು ಕರ್ನಾಟಕ ಸರಕಾರದ ನಗದು ಬಹುಮಾನ ಪಡೆದವರು.

ತಮ್ಮ ಸಾಧನೆಗಾಗಿ 2008 ರಲ್ಲಿ ಕುವೆಂಪು ಪ್ರಶಸ್ತಿ, 2016 ರಲ್ಲಿ ಕೆ. ಸಿಂಗಾರಿ ಗೌಡ ಪುಸ್ತಕ ಪ್ರಶಸ್ತಿ, 2017 ರಲ್ಲಿ ವಿಶ್ವಮಾನವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮೈಸೂರು ಆಕಾಶವಾಣಿ ಮತ್ತು ಭದ್ರಾವತಿ ಆಕಾಶವಾಣಿಯಲ್ಲಿ ಧ್ವನಿಯಾಗಿದ್ದಾರೆ. ಅಮೇರಿಕಾ ಮತ್ತು ಫ್ರಾನ್ಸ್‌ನ ಕನ್ನಡ ಸಂಘಟನೆಗಳಿಂದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. “ಮಗಳು ಕಂಡ ಕುವೆಂಪು” ಸೇರಿದಂತೆ ಅನೇಕ ಸಾಹಿತ್ಯ ಕೃತಿಗಳನ್ನು ಇವರು ರಚಿಸಿದ್ದಾರೆ.

ಮೂಲತಃ ಚೊಕ್ಕಾಡಿಯ ಚಿದಾನಂದ ಕೊಳಂಬೆಯವರ ಧರ್ಮಪತ್ನಿಯಾಗಿರುವ ತಾರಿಣಿಯವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಇವರ ಪುತ್ರಿ ಪ್ರಾರ್ಥನಾ ಅಮೇರಿಕಾದಲ್ಲಿ ನೆಲೆಸಿದ್ದಾರೆ.