ಗೌಟ್ (ಕೀಲೂರ) ರೋಗದ ಲಕ್ಷಣಗಳು

0

“ಗೌಟ್” ಎನ್ನುವುದು ಕೀಲುಗಳಿಗೆ ಸಂಬಂದಿಸಿದ ಉರಿವಾತದ ರೋಗವಾಗಿದ್ದು ಅಚ್ಚಕನ್ನಡದಲ್ಲಿ, ಸಂಧಿವಾತ, ಕೀಲೂರ ಎಂದು ಕರೆಯುತ್ತಾರೆ. ದೇಹದಲ್ಲಿನ ಕೀಲುಗಳು ಊದಿಕೊಂಡು ಉರಿವಾತದಿಂದ ನರಳುವ ಕಾರಣದಿಂದಲೂ ಕೀಲೂರ ಎಂದು ಹೆಸರು ಬಂದಿರಬಹುದು. ಸಾಮಾನ್ಯವಾಗಿ ಈ ರೋಗದಿಂದ ಬಳಲುತ್ತಿರುವವರಲ್ಲಿ ರಕ್ತದಲ್ಲಿ “ಯೂರಿಕ್ ಆಸಿಡ್” ಎಂಬ ರಾಸಯನಿಕದ ಅಂಶ ಜಾಸ್ತಿಯಿರುತ್ತದೆ. ಹೆಚ್ಚಾಗಿ ಪುರುಷರಲ್ಲಿ ಕಾಣುವ ಈ ರೋಗ ಮಹಿಳೆಯರನ್ನು ಋತುಬಂಧದ (ಋತುಚಕ್ರ ನಿಂತ) ಬಳಿಕ ಕಾಣಿಸಿಕೊಳ್ಳಬಹುದು. ತನ್ನಿಂತಾನೇ ಕೀಲುಗಳಲ್ಲಿ ಜೋರಾದ ನೋವು, ಉರಿತ ಬಂದು ಕೆಂಪಾಗಿ ಊದಿಕೊಳ್ಳಬಹುದು. ಸಾಮಾನ್ಯವಾಗಿ ಕಾಲಿಗಳ ಹೆಬ್ಬೆರಿಳಿನ ಕೀಲುಗಳಲ್ಲಿ ಹೆಚ್ಚು ಕಂಡುಬರುತ್ತದೆ. ಕಾಲಿನ ಸಣ್ಣ ಸಣ್ಣ ಕೀಲುಗಳಲ್ಲಿಯೂ ಅಸಾಧ್ಯ ನೋವು ಇರುತ್ತದೆ. ಕ್ರಮೇಣ ಇತರ ಎಲ್ಲಾ ಕೀಲುಗಳಿಗೆ ಹರಡಬಹುದು. “ಯೂರಿಕ್ ಆಸಿಡ್” ಎಂಬ ವಸ್ತುವಿನ ಮೆಟಾಬಾಲಿಸಮ್ (ಜೀರ್ಣ ಪ್ರಕ್ರಿಯೆ)ನಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಹೆಚ್ಚಾದ ಯೂರಿಕ್ ಆಸಿಡ್ ರಕ್ತದಲ್ಲಿ ಮತ್ತು ಕೀಲುಗಳಲ್ಲಿ ಸಂಯುಕ್ತ ರೂಪವಾಗಿ ಶೇಖರಣೆಯಾಗುತ್ತದೆ. ಮತ್ತು ಕೀಲುಗಳ ಸರಾಗ ಚಲನೆಗೆ ಅಡ್ಡಿ ಪಡಿಸುತ್ತದೆ.

ಗೌಟ್ ತುಂಬಾ ಪುರಾತನ ಕಾಯಿಲೆಯಾಗಿದ್ದು, ಹಿಪ್ಲೋಕ್ರೇಟ್ಸ್‍ನ ಕಾಲದಿಂದಲೂ ಮನುಕುಲವನ್ನು ಕಾಡಿದೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ರಾಜ ವಂಶದ ರಾಜ ವiಹಾರಾಜರನ್ನು. ಕಾಡಿದ ಕಾರಣದಿಂದಲೇ ಈ ರೋಗಕ್ಕೆ ಈಗಲೂ ರಾಜ ಮರ್ಯಾದೆ ಉಳಿದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಸರ್ವೆಯ ಪ್ರಕಾರ 65 ಶೇಕಡಾ ಮಧ್ಯಮ ವರ್ಗದ ಜನರನ್ನೇ ಗೌಟ್ ಹೆಚ್ಚು ಕಾಡುತ್ತದೆ. ಜೀನ್‍ಗಳ ಮುಖಾಂತರ (ವರ್ಣ ತಂತುಗಳು) ಕೆಲವೊಂದು ಸಂದರ್ಭಗಳಲ್ಲಿ ವಂಶವಾಹಕ ರೂಪದಲ್ಲಿ ತಂದೆ ತಾಯಿಯಂದಿರಿಂದ ಮಕ್ಕಳಿಗೆ ಬಳಿವಳಿಯಾದರೂ ಹರಡುವ ಸಾಧ್ಯತೆ ಇದೆ.

ರೋಗದ ಲಕ್ಷಣಗಳು

 1. ಕೀಲುಗಳಲ್ಲಿ ನೋವು, ಉರಿಯೂತ ಮತ್ತು ಕೀಲುಗಳು ಊದಿಕೊಳ್ಳಬಹುದು. ವಿಪರೀತ ನೋವಿನಿಂದಾಗಿ ಕೀಲುಗಳನ್ನು ಮುಟ್ಟಲು ಸಾಧ್ಯವಾಗದ ಸ್ಥಿತಿಬರಬಹುದು. ಹೆಚ್ಚಾಗಿ ಕಾಲಿನ ಹೆಬ್ಬರೆಳಿನ ಗಂಟುಗಳಲ್ಲಿ ಮೊದಲು ಕಾಣುತ್ತದೆ.
 2. ಕೀಲುಗಳ ಮೇಲ್ಬಾಗದ ಚರ್ಮ ಕೆಂಪಾಗಿ ಊದಿಕೊಂಡಿರುತ್ತದೆ.
 3. ಕೀಲುಗಳ ಚಲನೆಯಲ್ಲಿ ಕಷ್ಟವಾಗುತ್ತದೆ.
 4. ಕೆಲವೊಮ್ಮೆ ಚರ್ಮದಲ್ಲಿ ತುರಿಕೆ ಬರುತ್ತದೆ ಮತ್ತು ಚರ್ಮ ತನ್ನಿಂತಾನೆ ಕಿತ್ತು ಬರಬಹುದು.

ಕಾರಣಗಳು ಏನು?

 1. ಅನುವಂಶಿಕ ಕಾರಣಗಳಿಂದ ವರ್ಣತಂತುಗಳ ಮುಖಾಂತರ ಹೆತ್ತವರಿಂದ ಮಕ್ಕಳಿಗೆ ಹರಡುತ್ತದೆ.
 2. ಅತಿಯಾದ ದೇಹದ ತೂಕ ಅಥವಾ ಬೊಜ್ಜು
 3. ಅಧಿಕ ರಕ್ತದ ಒತ್ತಡ
 4. ಅತಿಯಾದ ಮಧ್ಯಪಾನ ಸೇವನೆ
 5. ಇನ್ಸುಲಿನ್ ನಲ್ಲಿ ಇರುವ ದೋಷಗಳಿಂದಾಗಿಯೂ ಗೌಟ್ ಬರಬಹುದು
 6. ಕಿಡ್ನಿಗಳ ಕಾರ್ಯ ವ್ಯೆಫಲ್ಯದಿಂದಲೂ “ಯೂರಿಕ್ ಆಮ್ಲ” ರಕ್ತದಲ್ಲಿ ಜಾಸ್ತಿಯಾಗುತ್ತದೆ.
 7. ಅತಿಯಾದ ಪ್ಯೂರೈನ್ ಇರುವ ಆಹಾರ ಹೆಚ್ಚು ಸೇವನೆ.
 8. ಕೆಲವೊಂದು ಔಷಧಿ ಕೂಡಾ ಗೌಟ್ ಗೆ ಕಾರಣವಾಗಬಹುದು.
 9. ಥೈರಾಯ್ಡ್ ರಸದೂತ ಕಡಿಮೆಯಾಗಿ ಹೈಪೋಥೈರಾಯ್ಡಿನಿಂದಲೂ ಗೌಟ್ ಬರುವ ಸಾಧ್ಯತೆ ಇರುತ್ತದೆ.
 10. ಅತಿಯಾಗಿ ಹಸಿವೆಯಾದಾಗ ದೇಹದಲ್ಲಿ ಪ್ಯೂರೈನ್ ಅಂಶ ಜಾಸ್ತಿಯಾಗಿ ಪರೋಕ್ಷವಾಗಿ ಗೌಟ್‍ಗೆ ಕಾರಣವಾಗುತ್ತದೆ.
  ಒಟ್ಟಿನಲ್ಲಿ ದೇಹದಲ್ಲಿ ಅತಿಯಾದ ಯೂರಿಕ್ ಆಮ್ಲ ಉತ್ಪಾದನೆ ಆದಾಗ ಅಥವಾ ಯೂರಿಕ್ ಆಮ್ಲ ದೇಹದಿಂದ ಸಮರ್ಪಕವಾಗಿ ಕಿಡ್ನಿಯ ಮೂಲಕ ಹೊರಹೋಗದೇ ಇದ್ದಾಗ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಜಾಸ್ತಿಯಾಗಿ “ಗೌಟ್” ಬರಬಹುದು.

ಏನಿದು ಪ್ಯುರೈನ್?

ಕೆಲವೊಂದು ಆಹಾರದಲ್ಲಿ ಈ “ಪ್ಯುರೈನ್” ಅಂಶ ಜಾಸ್ತಿ ಇರುತ್ತದೆ. ಪ್ರತಿ ಬಾರಿ ಈ ಪ್ಯುರೈನ್ ಇರುವ ಆಹಾರ ಸೇವಿಸಿದಾಗಲೂ ಪ್ಯುರೈನ್‍ನ್ನು ದೇಹದಲ್ಲಿ ಕಿಣ್ವಗಳು ಜೀರ್ಣಿಸಿದಾಗ “ಯೂರಿಕ್ ಆಮ್ಲದ” ಉತ್ಪಾದನೆ ಆಗುತ್ತದೆ. ಸಮುದ್ರ ಜನ್ಯ ಆಹಾರಗಳು ಮತ್ತು ಮಾಂಸಾಹಾರದಲ್ಲಿ ಹೆಚ್ಚು ಪ್ಯುರೈನ್ ಇರುತ್ತದೆ. ದೇಹದಲ್ಲಿ ಉತ್ಪತಿಯಾದ ಯೂರಿಕ್ ಆಮ್ಲ ರಕ್ತದಲ್ಲಿ ಕಾಣುತ್ತದೆ. ಮತ್ತು ಮೂತ್ರಪಿಂಡಗಳಿಗೆ ತಲುಪುತ್ತದೆ. ಹಾಗೂ ಮೂತ್ರದ ಮೂಲಕ ದೇಹದಿಂದ ಹೊರಹಾಕಲ್ಪಡುತ್ತದೆ. ಮೂತ್ರಪಿಂಡದ ವೈಫಲ್ಯವಿರುವವರಲ್ಲಿ ಈ “ಯೂರಿಕ್ ಆಮ್ಲ” ದೇಹದಿಂದ ಹೊರಹೋಗದೆ ರಕ್ತದಲ್ಲಿ ಶೇಖರಣೆ ಆಗುತ್ತದೆ. ಇದನ್ನೆ “ಹೈಪರ್ ಯೂರಿಸೋಮಿಯಾ” ಎನ್ನುತಾರೆ. ರಕ್ತದಲ್ಲಿ ಹೆಚ್ಚಿದ ಯೂರಿಕ್ ಆಮ್ಲದಿಂದಾಗಿ ಗೌಟ್ ರೋಗ ಉಂಟಾಗುತ್ತದೆ. ಮತ್ತು ಕಿಡ್ನಿಗಳಿಗೆ ಮತ್ತಷ್ಟು ಹಾನಿ ಮಾಡುತ್ತದೆ. ಜಾಸ್ತಿ ಹಸಿವೆಯಾದಾಗಲೂ, ಬಹಳ ಹೊತ್ತು ಆಹಾರ ಸೇವಿಸದೇ ಇದ್ದಾಗ, ಉಪವಾಸ ಮಾಡಿದಾಗ ದೇಹ ತನ್ನ ಅಗತ್ಯದ ಶಕ್ತಿಗಾಗಿ ದೇಹದಲ್ಲಿನ ಅಂಗಾಂಶಗಳಲ್ಲಿ ಶೇಖರಣೆಗೊಂಡು ಪ್ಯೂರೈನ್‍ನ್ನು ಜೀರ್ಣಿಸಿಕೊಂಡು ಶಕ್ತಿಯನ್ನು ಪಡೆಯುತ್ತದೆ. ಈ ಸಂಧರ್ಬದಲ್ಲಿ ಯೂರಿಕ್ ಆಮ್ಲ ಉತ್ಪತಿಯಾಗಿ ರಕ್ತದಲ್ಲಿ ಹೆಚ್ಚು “ಯೂರಿಕ್ ಆಮ್ಲ” ಕಂಡುಬರುತ್ತದೆ. ಅದೇ ರೀತಿ ಹಸಿವೆಯಾದಾಗ ದೇಹದಲ್ಲಿ ಕೀಟೋನುಗಳ ಅಂಶವೂ ಜಾಸ್ತಿಯಾಗುತ್ತದೆ. ಕಿಡ್ನಿಗಳು ಈ ಕೀಟೋನುಗಳನ್ನು ದೇಹದಿಂದ ಹೊರಹಾಕುವ ಯತ್ನದಲ್ಲಿ ಹೆಚ್ಚು ಕಾರ್ಯೋನ್ಮುಖವಾಗಿ ಪರೋಕ್ಷವಾಗಿ ಯೂರಿಕ್ ಆಮ್ಲ ಜಾಸ್ತಿಯಾಗುವಂತೆ ಮಾಡುತ್ತದೆ. ಈ ಕಾರಣದಿಂದ ಹೆಚ್ಚು ಹೆಚ್ಚು ಉಪವಾಸ ಮಾಡುವುದರಿಂದ ಪರೋಕ್ಷವಾಗಿ ಗೌಟ್‍ಗೆ ಕಾರಣವಾಗಬಹುದು. ಕಾಲ ಕಾಲಕ್ಕೆ ಸರಿಯಾಗಿ ಆಹಾರ ಸೇವನೆ ಅಗತ್ಯ ಎಂದು ಇದರಿಂದ ಸಾಬೀತಾಗಿದೆ.

ಯಾವ ಆಹಾರ ಸೇವಿಸಬೇಕು?

 1. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಬೇಕು. ದಿನವೊಂದರಲ್ಲಿ 3 ರಿಂದ 4 ಲೀಟರ್ ನೀರು ಸೇವನೆಯಿಂದ “ಗೌಟ್” ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
 2. ಸಂಕೀರ್ಣವಾದ ಶರ್ಕರಪಿಷ್ಠಗಳನ್ನು ಜಾಸ್ತಿ ಸೇವಿಸಬೇಕು. ಹಸಿ ತರಕಾರಿಗಳು ಹಣ್ಣುಗಳು ಮತ್ತು ಸಿರಿ ಧಾನ್ಯಗಳನ್ನು ಜಾಸ್ತಿ ಸೇವಿಸಬೇಕು. ಚೆರ್ರಿ ಹಣ್ಣುಗಳನ್ನು ಜಾಸ್ತಿ ಸೇವಿಸತಕ್ಕದು.
 3. ವೈಟ್ ಬ್ರೆಡ್‍ಗಳು, ಕೇಕ್‍ಗಳು, ಕ್ಯಾಂಡಿಗಳು, ಕೃತಕ ಸಕ್ಕರೆ ಪೇಯಗಳು, ಮತ್ತು ಹೆಚ್ಚು ಸುಕ್ರೋಸ್ ಇರುವ ಕೃತಕ ಪಾನೀಯಗಳನ್ನು ಸೇವಿಸಬಾರದು. ಇವೆಲ್ಲವೂ ರಕ್ತದಲ್ಲಿ ಯೂರಿಕ್ ಆಮ್ಲ ಜಾಸ್ತಿಯಾಗಲು ಕಾರಣವಾಗುತ್ತದೆ.
 4. ಮಾಂಸಾಹಾರ, ಸಮುದ್ರಜನ್ಯ ಮಾಂಸಾಹಾರಗಳನ್ನು ತಿನ್ನಲೇ ಬಾರದು. ಹೆಚ್ಚು ಸಾಚುರೇಟೆಡ್ ಕೊಬ್ಬು ಇರುವ ರೆಡ್ ಮೀಟ್‍ಗಳು, ಕೊಬ್ಬಿನ ಆಹಾರಗಳು ಮತ್ತು ಹೆಚ್ಚು ಕೊಬ್ಬು ಇರುವ ಡೈರಿ ಉತ್ಪನ್ನಗಳನ್ನು ತಿನ್ನಲೇಬಾರದು.
 5. ಪೋಟಾಸಿಯಂ ಜಾಸ್ತಿ ಇರುವ ಆಹಾರಗಳಾದ ಎಳನೀರು, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಖರ್ಜೂರ ಮತ್ತು ಕಿತ್ತಳೆ ಹಣ್ಣು ಜಾಸ್ತಿ ಸೇವಿಸಬೇಕು. ಈ ಹಣ್ಣುಗಳಲ್ಲಿ ಇರುವ ಪೋಟಾಸಿಯಂ ರಕ್ತದಲ್ಲಿನ ಯೂರಿಕ್ ಆಮ್ಲಗಳ ಜೊತೆ ಸ್ಪರ್ದಿಸಿ, ಯೂರಿಕ್ ಆಮ್ಲ ದೇಹದಿಂದ ಹೊರ ಹೋಗುವಂತೆ ಮಾಡುತ್ತದೆ. ಗೌಟ್ ಮತ್ತು ಕಿಡ್ನಿಯಲ್ಲಿ ಕಲ್ಲು ಇರುವ ರೋಗಿಗಳಿಗೆ ಪೊಟಾಸಿಯಂ ಜಾಸ್ತಿ ಇರುವ ಹಣ್ಣುಗಳು ರಾಮ ಬಾಣ ವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
 6. ಹೆಚ್ಚುನಾರುಯುಕ್ತ ಹಸಿ ತರಕಾರಿಗಳು ರಕ್ತದಲ್ಲಿ ಯೂರಿಕ್ ಆಮ್ಲ ಪ್ರಮಾಣವನ್ನು ತಗ್ಗಿಸುವ ಸಾಮಥ್ರ್ಯ ಹೊಂದಿದೆ. ನಾರುಯುಕ್ತ ಆಹಾರದ ದೇಹದ ಆಮ್ಲತೆಯನ್ನು ಕಡಿಮೆಯಾಗಿಸಿ ಕ್ಷಾರೀಯ ವಾತಾವರಣ ನಿರ್ಮಿಸಿ ಯೂರಿಕ್ ಆಮ್ಲ ಜಾಸ್ತಿಯಾಗದಂತೆ ತಡೆಯುತ್ತದೆ. ಆದರೆ ಕೆಲವೊಂದು ಹಸಿ ತರಕಾರಿಗಳಾದ ಕಾಲಿಪ್ಲವರ್ (ಹೂಕೋಸ್) ಬದನೆ, ಹರಿವೆ, ಸ್ಪಿನಾಚ್,(ಪಾಲಕ್ ಸೊಪ್ಪು) ಮುಂತಾದ ಆಹಾರಗಳಲ್ಲಿ ಹೆಚ್ಚು ಪುರೈನ್ ಇರುವ ಕಾರಣದಿಂದ ಈ ಆಹಾರವನ್ನು ಹೆಚ್ಚು ಸೇವಿಸಬಾರದು. ಬೇರೆ ಎಲ್ಲಾ ನಾರುಯುಕ್ತ ತರಕಾರಿಗಳನ್ನು ಯಾವುದೇ ನಿರ್ಬಿತಿಯಿಲ್ಲದೆ ಸೇವಿಸಬಾರದು.
 7. ಪ್ರೊಟೀನ್ ಸೇವನೆಯನ್ನು ದಿನವೊಂದಕ್ಕೆ 110 ರಿಂದ 170 ಗ್ರಾಂಗಳಿಗೆ ಸೀಮಿತಗೊಳಿಸತಕ್ಕದು. ಮೀನಿನ ಖಾದ್ಯಗಳು, ಡೈರಿ ಉತ್ಪನ್ನಗಳಲ್ಲಿ ಮತ್ತು ಮಾಂಸಗಳಲ್ಲಿ ಪ್ರೊಟೀನ್ ಅಂಶ ಜಾಸ್ತಿ ಇರುತ್ತದೆ. ಕಡಿಮೆ ಕೊಬ್ಬು ಇರುವ ಅಥವಾ ಕೊಬ್ಬು ರಹಿತ ಡೈರಿ ಉತ್ಪನ್ನಗಳಾದ ಕಡಿಮೆ ಕೊಬ್ಬಿನ ಯೋಗರ್ಟ ಮತ್ತು ಸ್ಕಿಮ್ ಹಾಲುಗಳನ್ನು ಜಾಸ್ತಿ ಸೇವಿಸಿದಲ್ಲಿ ಯೂರಿಕ್ ಆಮ್ಲದ ಅಂಶ ರಕ್ತದಲ್ಲಿ ಹೆಚ್ಚುವುದೇ ಇಲ್ಲ.
  ಪುರುಷರಿಗೆ ಸಾಮಾನ್ಯವಾಗಿ ರಕ್ತದಲ್ಲಿ ಯಾರಿಕ್ ಆಮ್ಲ 3.5 ರಿಂದ 7.00 ಮಿ.ಗ್ರಾಂ ಪ್ರತಿ ಡೆಸಿ ಲೀಟರ ಗೆ ಮತ್ತು ಮಹಿಳೆಯರಲ್ಲಿ 2.5 ರಿಂದ 6 ಮಿ.ಗ್ರಾಂ ಪ್ರತಿ ಡೆಸಿ ಲೀಟರ್ ಗೆ ಇರತಕ್ಕದ್ದು. ಮಕ್ಕಳಲ್ಲಿ 2.5 ರಿಂದ 5.5 ಮಿ.ಗ್ರಾಂ ಪ್ರತಿ ಡೆಸಿಲೀಟರ್‍ಗೆ ಇರತಕ್ಕದ್ದು. ಕಾರಣಾಂತರಗಳಿಂದ ಈ ಯೂರಿಕ್ ಆಮ್ಲದ ಅಂಶ ಜಾಸ್ತಿಯಾದಲ್ಲಿ ಗೌಟ್ ರೋಗ ಬರುತ್ತದೆ.

ಕೊನೆ ಮಾತು

ಗೌಟ್ ಎನ್ನುವ ರೋಗ ಮಾರಣಾಂತಿಕ ರೋಗವಲ್ಲದಿದ್ದರೂ ತನ್ನ ರೋಗದಲಕ್ಷಣಗಳಿಂದ ಕ್ಷಣ ಕ್ಷಣಕ್ಕೂ ರೋಗಿಯ ಜೀವನವನ್ನು ಯಾತನಾಮಯವಾಗಿ ಮಾಡುವ ಸಾಮಥ್ರ್ಯ ಹೊಂದಿದೆ. ಉತ್ತಮ ಆಹಾರ ಪದ್ದತಿ, ದೈಹಿಕ ವ್ಯಾಯಾಮದಿಂದ ಕೂಡಿದ ಜೀವನಶೈಲಿ ರೂಡಿಸಿಕೊಂಡು ಬೊಜ್ಜು ಕರಗಿಸಿ ದೇಹದ ತೂಕ ಹತೋಟಿಯಲ್ಲಿರಿಸಿ, ಆಲ್ಕೋಹಾಲ್ ಸೇವನೆಯನ್ನು ವರ್ಜಿಸಿದಲ್ಲಿ ಖಂಡಿತವಾಗಿಯೂ ಗೌಟ್ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ರೋಗಬಂದ ಬಳಿಕ ನೋವುಯಾತನೆ ಅನುಭವಿಸಿ ಚಿಕಿತ್ಸೆ ಪಡೆಯುವುದರ ಬದಲು ರೋಗ ಬರದಂತೆ ಮುಂಜಾಗರೂಕತೆ ವಹಿಸಿ ಉತ್ತಮ ಆರೋಗ್ಯಪೂರ್ಣ ಜೀವನ ಪದ್ದತಿ ಮತ್ತು ಆಹಾರ ಶೈಲಿ ಅಳವಳಿಸಿಕೊಂಡಲ್ಲಿ ಆರಾಮದಾಯಕ ಮತ್ತು ಆರೋಗ್ಯವಂಥ ಜೀವನ ನಡೆಸಬಹುದು. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಹಿತ ಅಡಗಿದೆ.

||ಡಾ ಮುರಲಿ ಮೋಹನ್ ಚೂಂತಾರು