ಪರಂಪರಾಗತ ಸಂಸ್ಕಾರದಿಂದ ಉತ್ತಮ ಜೀವನ : ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು

0

ಮನೆಯೇ ಸಂಸ್ಕಾರದ ಕೇಂದ್ರ :ರವಿಶಂಕರ್ ನಲ್ಲೂರಾಯ

ಭಗವಂತನಲ್ಲಿರುವ ನಮ್ಮ ನಂಬಿಕೆ, ನಮ್ಮ ಸಾಧನೆಗೆ, ಮುಕ್ತಿಗೆ ಕಾರಣ :ಸುಹಾಸ್ ಉಪಾದ್ಯಾಯ

ವಿದ್ಯಾಪ್ರಸನ್ನ ಶ್ರೀಗಳ ೨೭ನೇ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮ

ನಾವು ದೈನಂದಿನ ಬದುಕಿನಲ್ಲಿ ಭಕ್ತಿ, ನಿಷ್ಠೆಯಿಂದ ಪಾಲಿಸಿಕೊಂಡು ಬರುವ ಪರಂಪರಾಗತ ಸಂಸ್ಕಾರಯುತ ಚಟುವಟಿಕೆಗಳಿಂದ ಉತ್ತಮ ಜೀವನ ನಮ್ಮದಾಗಲಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

ಅವರು ಅವರ ೨೭ನೇ ಚಾತುರ್ಮಾಸ್ಯ ವ್ರತದ ಪ್ರಯುಕ್ತ ಮಠದ ನವಗ್ರಹ ಮಂಟಪದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೆರವೇರಿದ ಬಳಿಕ ಆಶೀರ್ವಚನ ನಡೆಸುತ್ತಾ ತಿಳಿಸಿದರು. ಯಾರ ಮನೆಯಲ್ಲಿ ಧರ್ಮ ಮತ್ತ ಸಂಸ್ಕಾರ ಸುರಕ್ಷಿತವೋ ಆ ಮನೆಯಲ್ಲಿ ಎಲ್ಲರೂ ಸುರಕ್ಷಿತರು. ಪ್ರಾಚೀನರು ಆಚರಿಸಿಕೊಂಡು ಬಂದ ಎಲ್ಲಾ ಪದ್ಧತಿಗಳು ಕೂಡ ಒಬ್ಬ ಮನುಷ್ಯನನ್ನು ನೈತಿಕ ಉನ್ನತಿಗೆ ಇರುವುದಾಗಿದೆ ಎಂದರು.

ಸಂಸ್ಕಾರ ವಿಷಯದ ಬಗ್ಗೆ ಉಪನ್ಯಾಸ ನೀಡಿದ ರವಿಶಂಕರ ನಲ್ಲೂರಾಯ ಅವರು
ಒಳ್ಳೆಯದನ್ನು ಪಡೆದುಕೊಳ್ಳಲು ಇರುವ ಅವಕಾಶವೇ ಸಂಸ್ಕಾರ. ಮನೆಯೇ ಸಂಸ್ಕಾರದ ಕೇಂದ್ರ ಎಂದು ಹೇಳಿದರು.
ಜಗತ್ತಿಗೆ ನಾವು ಕೊಟ್ಟಂತಹ ಅತ್ಯಂತ ದೊಡ್ಡ ಕೊಡುಗೆ ಕುಟುಂಬ ಜೀವನ. ಈ ಕುಟುಂಬ ಜೀವನದಿಂದಲೇ ಸಂಸ್ಕಾರಯುತ ಜೀವನ ಸಾಧ್ಯ. ಮಕ್ಕಳಿಗೆ ವಿಶೇಷವಾಗಿ ಸಂಸ್ಕಾರ ಕಲಿಸುವ ಅಗತ್ಯವಿದೆ. ಸಂಸ್ಕೃತಿ ಮತ್ತು ಸಂಸ್ಕಾರ ಒಂದಕ್ಕೊಂದು ಪೂರಕಾಗಿದ್ದು, ಸಂಸ್ಕೃತಿ ಬೆಳೆಯಬೇಕಿದ್ದರೆ ಸಂಸ್ಕಾರವಂತ ಸಮಾಜ ನಿರ್ಮಾಣವಾಗಬೇಕು ಎಂದರು.

‘ನಂಬಿಕೆ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಸಿಕೊಟ್ಟ ಸುಹಾಸ್ ಉಪಧ್ಯಾಯ ಅವರು, ಭಗವಂತನಲ್ಲಿರುವ ನಮ್ಮ ನಂಬಿಕೆ ನಮ್ಮ ಸಾಧನೆಗೆ, ಮುಕ್ತಿಗೆ ಕಾರಣ. ನಮ್ಮ ಶಕ್ತಿ, ಕೆಲಸ, ಗುರಿಯಲ್ಲಿ ನಂಬಿಕೆ ಬೇಕು. ನಮಗಿಂತಲೂ ದೊಡ್ಡ ಶಕ್ತಿ ಇದೆ ಎಂಬ ನಂಬಿಕೆಯಲ್ಲಿ ಜೀವಿಸಬೇಕು ಎಂದರು.


ಬಳಿಕ ಶಂಕರನಾರಾಯಣ ಅಡಿಗ ಅವರಿಂದ ಹರಿಕಥೆ ಜರುಗಿತು.

ಆ.13 ರಂದು ಸಂಜೆ ಶ್ರೀಗಳಿಂದ ದೀಪ ದೀಪೋಜ್ವಲನೆ ಗೊಳಿಸಿ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಚಾತುರ್ಮಾಸ್ಯ ವೃತದ ಕಟ್ಟುಪಾಡು ಹಾಗೂ ಅಧಿಕ ಮಾಸದ ಮಹತ್ವ ಬಗ್ಗೆ ಶ್ರೀಗಳಿಂದ ಆಶೀರ್ವಚನ ನಡೆಯಿತು. ಬಳಿಕ ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು ಇವರಿಂದ “ಭೂಮಿಂಜಯ” ಯಕ್ಷಗಾನ ತಾಳಮದ್ದಳೆ ನಡೆಯಿತು.

ಆ. 14 ರಂದು ‘ಆಧ್ಯಾತ್ಮ ಚಿಂತನೆ’ ಕಾರ್ಯಕ್ರಮ ಶ್ರೀ ಶ್ರೀಗಳವರಿಂದ ನಡೆಯಿತು ಬಳಿಕ ಕೆ.ವಿ.ರಮಣ್ ಮಂಗಳೂರು ಮತ್ತು ವಿದುಷಿ ಅಯನಾ ವಿ.ರಮಣ್ ಮೂಡಬಿದಿರೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಆ.15 ರ ಸಂಜೆ ಸೌರಭ ಕೆ.ಭಟ್ ಕಡೆ ಶಿವಾಲಯ ಮತ್ತು ಬಳಗದಿಂದ ಲಘು ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳ ಗಾಯನ
ನಡೆಯಿತು. ಬಳಿಕ ನಾವು ನಿಜವಾಗಿಯೂ ಸ್ವತಂತ್ರರೇ, ಎಂಬ ವಿಷಯದ ಬಗ್ಗೆ ಚಿಂತನ ಮಂಥನ ನಡೆಯಿತು.
ಡಾ.ಎಚ್.ಮಾಧವ ಭಟ್,
ಡಾ.ಶ್ರೀಶಕುಮಾರ್,
ಪ್ರೊlಸುಬ್ಬಪ್ಪ ಕೈಕಂಬ,
ರಾಕೇಶ್‌ ಕುಮಾರ್ ಕಮ್ಮಜೆ,
ಪ್ರಕಾಶ ಮೂಡಿತ್ತಾಯ ಭಾಗವಹಿಸಿದ್ದರು. ಆ. 16 ರ ಸಂಜೆ ವಿದ್ಯಾಪ್ರಸನ್ನ ಶ್ರೀಗಳವರಿಂದ ಪ್ರವಚನ ನಡೆಯಿತು. ಬಳಿಕ ವಿದ್ವಾನ್ ಕಾಂಚನ ಈಶ್ವರ ಭಟ್‌ರವರ ಶಿಷ್ಯೆಯರಾದ ವಿದುಷಿ ಶಿಲ್ಪಾ ಸಿ.ಎಚ್ ಹಾಗೂ ಕುl ಶ್ರೀಲಕ್ಷ್ಮೀ ದೇವಮಣಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು. ಆ. 18 ರಂದು ವಿದ್ಯಾಪ್ರಸನ್ನ ಶ್ರೀಗಳವರಿಂದ ಪ್ರವಚನ ನಡೆದು ಬಳಿಕ ರವೀಂದ್ರ ಪ್ರಭು ಮುಲ್ಕಿ ಅವರಿಂದ ದಾಸರವಾಣಿ ನಡೆಯಿತು.