ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುವ ನೀರು – ವಾಹನ ಅಪಘಾತಕ್ಕೆ ಮತ್ತೆ ಹೆಸರುವಾಸಿಯಾಗುತ್ತಿದೆ ಅಡ್ಕಾರು

0

ಆರು ದಿನದ ಅಂತರದಲ್ಲಿ ಜೀವ ಕಳೆದುಕೊಂಡ ನಾಲ್ವರು ಬಡ ಕೂಲಿ ಕಾರ್ಮಿಕರು

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಕಳೆದೊಂದು ವಾರದಲ್ಲಿ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು ನಾಲ್ಕು ಅಮಾಯಕ ಜೀವಗಳು ಬಲಿಯಾಗಿದ್ದು, ಅವ್ಯವಸ್ಥಿತ ಚರಂಡಿ ವ್ಯವಸ್ಥೆ ಹಾಗೂ ಪಾದಾಚಾರಿಗಳಿಗೆ ನಡೆದಾಡಲು ಕಷ್ಟಕರ ಪರಿಸ್ಥಿತಿಯಿದ್ದು, ಇದರಿಂದಲೇ ಅಪಘಾತವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ವಾಹನ ಅಪಘಾತಗಳಿಗೆ ಕಳೆದ ಆರು ದಿನಗಳ ಅಂತರದಲ್ಲಿ ಕೆಲಸ ಅರಸಿ ಬಂದ ಉತ್ತರ ಕರ್ನಾಟಕ ಮೂಲದ ಒಟ್ಟು ನಾಲ್ಕು ಮಂದಿ ಬಡ ಕೂಲಿ ಕಾರ್ಮಿಕರು ತಮ್ಮ ಜೀವ ಕಳೆದುಕೊಂಡಿದ್ದು, ಅಡ್ಕಾರು ಮತ್ತೆ ವಾಹನ ಅಪಘಾತಕ್ಕೆ ಹೆಸರುವಾಸಿಯಾಗುತ್ತಿದೆ.

ಅಡ್ಕಾರಿನಿಂದ ಜಾಲ್ಸೂರಿನವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಅಡಿಕೆ ತೋಟವಿದ್ದು, ರಸ್ತೆಯ ಬದಿಯಲ್ಲಿ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆನೀರು ಮುಖ್ಯರಸ್ತೆಯಲ್ಲೇ ಹರಿಯುತ್ತಿದ್ದು, ಪಾದಾಚಾರಿಗಳಿಗೆ ರಸ್ತೆ ಬದಿ ನಡೆದಾಡಲೂ ಕಷ್ಟಕರ ಪರಿಸ್ಥಿತಿ ಇದೆ.


ಒಂದೆರಡು ಕಡೆಗಳಲ್ಲಿ ಮಳೆನೀರು ಮುಖ್ಯರಸ್ತೆಯನ್ನೇ ಆವರಿಸಿಕೊಂಡಿದ್ದು, ಅಡ್ಕಾರಿನಿಂದ ಕಾಳಮನೆಯವರೆಗೆ ರಸ್ತೆ ನೇರವಾಗಿದ್ದು, ವಾಹನಗಳು ಅತೀ ವೇಗವಾಗಿ ಬರುತ್ತಿದ್ದು, ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ.

ಈ ಪರಿಸರದ ಕೆಲವೆಡೆಗಳಲ್ಲಿ ಸಾರ್ವಜನಿಕರು ತಮಗೆ ಬೇಕಾದ ಕಡೆಗಳಲ್ಲಿ ಮುಖ್ಯರಸ್ತೆಯ ಬದಿಗೆ ಮಣ್ಣು ಹಾಕಿ ಎತ್ತರಿಸಿದ್ದು, ಮಳೆ ನೀರು ರಸ್ತೆಯಲ್ಲೇ ಹರಿಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಜೊತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಗಿಡ, ಕಾಡುಪೊದೆಗಳು ತುಂಬಿಕೊಂಡಿರುವುದೂ, ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಡ್ಕಾರಿನಿಂದ ರಸ್ತೆ ನೇರವಾಗಿ ಇರುವುದರಿಂದ ಸಂಬಂಧಪಟ್ಟವರು ರಸ್ತೆಯ ಎರಡೂ ಬದಿ ಚರಂಡಿ ನಿರ್ಮಾಣ ಮಾಡಿ, ಪುಟ್ ಪಾತ್ ವ್ಯವಸ್ಥೆ ನಿರ್ಮಾಣ ಮಾಡಬೇಕು ಇದರಿಂದ ಮಳೆನೀರು ಹರಿದು ಹೋಗಲು ಮತ್ತು ಪಾದಾಚಾರಿಗಳಿಗೆ ನಡೆದಾಡಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.