ಕೇನ್ಯದಲ್ಲಿ ಕಾಡುಕೋಣಗಳ ಹಾವಳಿ, ಅರಣ್ಯ ಇಲಾಖೆಯಿಂದ ದಾರಿಹೋಕರಿಗೆ ಭದ್ರತೆ

0

ಕೇನ್ಯ ಗ್ರಾಮದ ವಿಷ್ಣುನಗರದ ಬಳಿ ಕಾಡುಕೋಣಗಳ ಹಿಂಡು ಪ್ರತೀ ದಿನ ದಾರಿಹೋಕರಿಗೆ ಕಾಣಸಿಗುತ್ತಿದ್ದು, ಇತ್ತೀಚೆಗಿನ ಕೆಲವು ದಿನಗಳಿಂದ ಜನರಿಗೆ ಹಾಯಲು ಬರುತ್ತಿರುವುದಾಗಿ ತಿಳಿದುಬಂದಿದೆ.

ಸೆ. 15 ರಂದು ಪಂಜ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿಯವರು ದ್ವಿಚಕ್ರ ವಾಹನದಲ್ಲಿ ಈ ದಾರಿಯಲ್ಲಿ ಬರುತ್ತಿರುವಾಗ 10 ಕ್ಕಿಂತಲೂ ಹೆಚ್ಚು ಕೋಣಗಳಿದ್ದ ಗುಂಪು ಇವರ ಮೇಲೆ ದಾಳಿ ಮಾಡಲು ಮುಂದಾದಾಗ ಇವರು ವಾಹನ ತಿರುಗಿಸಿ ಹಿಂದಕ್ಕೆ ಬಂದರೆನ್ನಲಾಗಿದೆ. ಬಳಿಕ ಪಂಜ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಇಲಾಖಾ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ಬೆಳಿಗ್ಗೆ ಮತ್ತು ಸಂಜೆ‌ ಶಾಲಾ ವಿದ್ಯಾರ್ಥಿಗಳು ಹೋಗುವ ಸಮಯದಲ್ಲಿ ಈ ಜಾಗದಲ್ಲಿ ಬಂದು ಮೊಕ್ಕಾಂ ಹೂಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿ ಮತ್ತು ಮಹಿಳೆಯೊಬ್ಬರಿಗೂ ಹಾಯಲು ಬಂದಿರುವುದಾಗಿ ತಿಳಿದುಬಂದಿದೆ.

ಕೇನ್ಯ ರವೀಂದ್ರನಾಥ ಶೆಟ್ಟಿಯವರೂ ಈ ಬಗ್ಗೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ರೈಯವರಿಗೆ ವಿಷಯ ತಿಳಿಸಿರುವುದಾಗಿ ತಿಳಿದುಬಂದಿದೆ. ಇಲಾಖಾ ಸಿಬ್ಬಂದಿಗಳು ಹಲವು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿರುವುದಲ್ಲದೆ, ಕಾಡುಕೋಣಗಳ ಹಿಂಡನ್ನು ಈ ಭಾಗದಿಂದ ಓಡಿಸಲು ಇಲಾಖೆಯ ಮೂಲಕ ಕ್ರಮ ಕೈಗೊಳ್ಳುವ ಭರವಸೆಯನ್ನು ಇಲಾಖಾಧಿಕಾರಿಗಳು ನೀಡಿರುವುದಾಗಿ ರಘುನಾಥ ರೈಯವರು ಸುದ್ದಿಗೆ ತಿಳಿಸಿದ್ದಾರೆ