ಸುಳ್ಯ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಗೆ ಟೆಂಡರ್ ದಾರರಿಗೆ ವರ್ಕ್ ಅವಾರ್ಡೇ ಆಗಿಲ್ಲ. ಮತ್ತೆ ಹೊಸ ಸರಕಾರ ಕಾಮಗಾರಿ ಸ್ಥಗಿತಗೊಳಿಸುವುದು ಹೇಗೆ ? : ರಿಯಾಜ್ ಕಟ್ಟೆಕಾರ್ ಪ್ರಶ್ನೆ

0

ಸುಳ್ಯದ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯನ್ನು ಹೊಸ ಸರಕಾರ ಸ್ಥಗಿತಗೊಳಿಸಿದ್ದು, ಅದನ್ನು ವಾರದೊಳಗೆ ಆರಂಭಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಬಿ.ಜೆ.ಪಿ. ನೀಡಿರುವ ಹೇಳಿಕೆ ನೋಡಿದೆ. ನಿಜವಾಗಿಯಾದರೆ ಆ ಕಾಮಗಾರಿ ಗುತ್ತಿಗೆದಾರರಿಗೆ ವರ್ಕ್ ಅವಾರ್ಡೇ ಆಗಿಲ್ಲ. ಮತ್ತೆ ಸರಕಾರ ಕೆಲಸ ನಿಲ್ಲಿಸುವುದು ಹೇಗೆ ? ಕಳೆದ ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಸಚಿವರು ಬಂದು ಗುದ್ದಲಿ ಪೂಜೆ ಮಾಡಿ, ಒಂದು ವಾರದಲ್ಲಿ ಕೆಲಸ ಆರಂಭಗೊಳ್ಳುತ್ತದೆ ಎಂದು ಹೇಳಿ ಹೋಗಿದ್ದರು. ಆಗ ಯಾವ ಚುನಾವಣಾ ನೀತಿಸಂಹಿತೆಯೂ ಇರಲಿಲ್ಲ.

ಆದರೂ ಗುದ್ದಲಿ ಪೂಜೆ ಕಳೆದು ಚುನಾವಣೆಯ ವರೆಗೆ ನಾಲ್ಕು ತಿಂಗಳು ಇದ್ದರೂ ಕೆಲಸ ಆರಂಭಿಸದಿದ್ದುದು ಯಾಕೆ ಎಂದು ಯಕ್ಷ ಪ್ರಶ್ನೆ ಎಂದು ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಒಮ್ಮೆ ಟೆಂಡರ್ ಆಗಿ ಗುತ್ತಿಗೆದಾರರಿಗೆ ಕೆಲಸ ವಹಿಸಿಕೊಟ್ಟರೆ ಮತ್ತೆ ಸರಕಾರದ ಹಸ್ತಕ್ಷೇಪ ಇರುವುದಿಲ್ಲ. ಯಾಕೆಂದರೆ ಅದು ನಿಗಮದ ಕೆಲಸ. ಕಾಮಗಾರಿಗೆ ಬೇಕಾದ ಹಣದ ವ್ಯವಸ್ಥೆ ಮಾಡಿಯೇ ಅದು ಕಾಮಗಾರಿಗೆ ಟೆಂಡರ್ ಕರೆಯುವುದು. ಕಳೆದ ಜನವರಿಯಲ್ಲಿ ಸಚಿವ ಸುನಿಲ್ ಕುಮಾರ್ ಬಂದು ಶಿಲಾನ್ಯಾಸ ಮಾಡಿದಾಗ ಜನರಿಗೆಲ್ಲ ಖುಶಿಯಾಗಿತ್ತು. ಆದರೆ ತಿಂಗಳು ಕಳೆದರೂ ಕೆಲಸ ಆರಂಭಗೊಳ್ಳದಿದ್ದಾಗ ಅನುಮಾನಗೊಂಡು ನಾನು ವಿಚಾರಿಸಿದಾಗ ಅದರ ನಿಜವಾದ ವಿಷಯ ತಿಳಿಯಿತು.

ಆಗಲೇ ನಾನು ಪತ್ರಿಕಾ ಹೇಳಿಕೆ ನೀಡಿದ್ದೆ. ಬಿ.ಜೆ.ಪಿ.ಯವರು ಚುನಾವಣೆಯ ಸಂದರ್ಭದಲ್ಲಿ ಜನರನ್ನು ಮರುಳು ಮಾಡಲು ಶಿಲಾನ್ಯಾಸ ಮಾಡಿದ್ದಾರೆ ಎಂದು. ಮೊನ್ನೆ ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳ ಹೇಳಿಕೆ ಅಚ್ಚರಿ ತಂದಿದೆ. ಅವರು ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕಾಗಿದೆ. ಇನ್ನಾದರೂ ಈ ವಿಷಯದಲ್ಲಿ ಪರ ವಿರೋಧ ಹೇಳಿಕೆ ನೀಡದೆ ಬಿ.ಜೆ.ಪಿ.ಯವರು ಶಾಸಕರ ಮೂಲಕ, ಕಾಂಗ್ರೆಸ್ ಮುಖಂಡರು ರಾಜ್ಯ ಸರಕಾರದ ಸಚಿವರ ಮೂಲಕ, ಕಾಮಗಾರಿ ಅನುಷ್ಠಾನಗೊಳ್ಳಲು ಪರಸ್ಪರ ಜತೆಯಾಗಿ ಕಾರ್ಯನಿರ್ವಹಿಸಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆ.ಪಿ.ಟಿ.ಸಿ.ಎಲ್. ಮೇಲೆ ಒತ್ತಡ ಹಾಕಿ ಟೆಂಡರ್ ದಾರರ ವ್ಯವಸ್ಥೆ ಸರಿಯಾಗುವಂತೆ ಮಾಡಬೇಕು. ಗುತ್ತಿಗೆದಾರರಿಗೆ ವರ್ಕ್ ಅವಾರ್ಡ್ ಆಗುವಂತೆ ಮಾಡಬೇಕು ” ಎಂದು ರಿಯಾಜ್ ಕಟ್ಟೆಕಾರ್ ಒತ್ತಾಯಿಸಿದ್ದಾರೆ.