














ಮುಪ್ಪೇರ್ಯ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ತಿಂಗಳ ಸಂಕ್ರಮಣ ಪೂಜೆ ಸೆ. 17ರಂದು ನಡೆಯಿತು.
ಕ್ಷೇತ್ರದ ಗುರುಸ್ವಾಮಿ ದಾಮೋದರ ಕಲ್ಕಲ ಪೂಜಾ ಕಾರ್ಯ ನೆರವೇರಿಸಿದರು. ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂಜೆಯ ಬಳಿಕ ಪುತ್ತಿಲ ಪರಿವಾರದ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೆ ಪುಸ್ತಕ, ಕಲಿಕಾ ಸಾಮಾಗ್ರಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಧರ್ಮ ಉಳಿದರೆ ಮಾತ್ರ ನಾವೆಲ್ಲ ಈ ಭೂಮಿಯಲ್ಲಿ ಬದುಕುವುದಕ್ಕೆ ಸಾಧ್ಯ. ಈ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ವಿಚಾರಧಾರೆಗಳು, ನಂಬಿಕೆಗಳಿಂದಲೇ ಈ ಕ್ಷೇತ್ರವನ್ನು ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿದೆ. ಇಂದು ಸಮಾಜದಲ್ಲಿ ಎದುರಾಗುತ್ತಿರುವ ನಾನಾ ತೊಡಕುಗಳನ್ನು ಎದುರಿಸಿ ಮತ್ತೆ ಧರ್ಮ ಜಾಗೃತಿಯನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ. ಧರ್ಮದ ವಿಚಾರದಲ್ಲಿ ಏನೇ ತೊಂದರೆಗಳು ನಿಮಗಾದರೂ ನಿಮ್ಮ ಜೊತೆಗೆ ನಾನಿದ್ದೇನೆ ಎಂದರು. ಸಮಿತಿಯ ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ ಅರ್ಚನಾ ಅರುಣ್ ಕುಮಾರ್ ಪುತ್ತಿಲರನ್ನು ಸನ್ಮಾನಿಸಿದರು. ಮಂದಿರದ ಸಂಚಾಲಕರಾದ ರಾಜೇಶ್ ಅಯ್ಯನಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಜೆ ಶ್ರೀರಾಮ ಭಜನಾ ಮಂಡಳಿ ಕಿಲಂಗೋಡಿ ಇವರಿಂದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.









