ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರೀ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

0

ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರೀ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಅ. 27ರಂದು ಶ್ರೀಕ್ಷೇತ್ರದ ತಂತ್ರಿಗಳಾದ ಕುನ್ನತ್ತಿಲ್‌ ಬ್ರಹ್ಮಶ್ರೀ ಮುರಳಿಕೃಷ್ಣ ನಂಬೂದರಿಯವರ ನೇತೃತ್ವದಲ್ಲಿ ನಡೆಯಿತು. ಶ್ರೀಕ್ಷೇತ್ರದ ಶಿಲ್ಪಿಗಳಾದ ರಮೇಶ್ ಕಾರಂತ ಕಾಸರಗೋಡುರವರ ಮಾರ್ಗದರ್ಶನದಲ್ಲಿ ಜಗದ್ಗುರು ಆದಿಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠಾಧೀಶ ಶ್ರೀ ಕೇಶವಾನಂದಭಾರತೀ ಕರಸಂಜಾತರಾದ ಪರಮಪೂಜ್ಯ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಮಠ ಹಾಗೂ ಪರಮಪೂಜ್ಯ ಕೌಸ್ತುಭ ಕರ್ಮಯೋಗಿ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲ ಇವರ ದಿವ್ಯ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆಯಿತು.


ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪುರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್‌ ಕಟೀಲು, ಮಾಜಿ‌ ಸಚಿವ ಎಸ್. ಅಂಗಾರ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್. ರೈ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಮತ್ತು ಗೋಪಾಲಕೃಷ್ಣ ಭಟ್ ವಾಣಿ ನಗರ ಅತಿಥಿಗಳಾಗಿ ಭಾಗವಹಿಸಿದ್ದರು. ಗಣ್ಯ ಉಪಸ್ಥಿತಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಬೆಳ್ಳಾರೆ ಇದರ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಮಣಿಕ್ಕಾರ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯ.ಸ.ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿ ನರಸಿಂಹ ಭಟ್ ಕೆದಿಲ, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿ ಪರಮೇಶ್ವರಯ್ಯ ಕಾಂಚೋಡು, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವ್ಯ.ಸ.ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರಾದ ನೇಮಿರಾಜ್ ಪಾಂಬಾರು, ಕಾಟುಕುಕ್ಕೆ, ಮೊಗೇರು, ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷರಾದ
ಜಯಂತ ನಾಯಕ್‌ ಕುಂಡೇರಿ ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಂ.ಪಿ. ಉಮೇಶ್, ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪಂಜಿಗಾರು, ಪೊಸವಳಿಗೆ ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಶ್ರೇಯಾ, ಕು. ಕೀರ್ತನಾ ಮತ್ತು ಕು. ಶಿವಾನಿ ಪ್ರಾರ್ಥಿಸಿದರು. ವಿ.ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.

ದುರುಳರ ದುಶ್ಕೃತ್ಯಗಳನ್ನು ಕೊನೆಗಾಣಿಸಿ ಧರ್ಮದ ಸಂಸ್ಥಾಪನೆಗಾಗಿ ಶ್ರೀ ದೇವಿ ಬೇರೆ ಬೇರೆ ಅವತಾರಗಳನ್ನು ಎತ್ತಿ ಬಂದಿದ್ದಾಳೆ. ಧರ್ಮದ ಮೇಲೆ ಆಕ್ರಮಣ ನಡೆದಾಗ ಅದನ್ನು ಎದುರಿಸಬೇಕಾದರೆ ಈ ರೀತಿಯ ಶ್ರದ್ಧಾಕೇಂದ್ರಗಳ ನಿರ್ಮಾಣ ಆಗಬೇಕು. ಈ ದೇವಾಲಯದ ನಿರ್ಮಾಣಕ್ಕೆ ಎಲ್ಲಾ ಭಗವದ್ಭಕ್ತರು ತನುಮನಧನ ಸಹಕಾರವನ್ನು ನೀಡಿ. ಆದಷ್ಟು ಶೀಘ್ರದಲ್ಲಿ ಈ ದೇವಾಲಯ ನಿರ್ಮಾಣ ಆಗಿ ದೇವಿಯ ಅನುಗ್ರಹ ಪಡೆಯುವಂತಾಗಿ – ಸಚ್ಚಿದಾನಂದ ಭಾರತೀ ಸ್ವಾಮೀಜಿ

ಹಿಂದೂ ಧರ್ಮದ ಮೇಲೆ ಆಕ್ರಮಣ ಈ ಹಿಂದೆಯೂ ಆಗಿದೆ. ಈಗಲೂ ಆಗಿದೆ. ಮತಾಂತರ, ಡ್ರಗ್ಸ್ ಮಾಫಿಯಾಂತ ಪಿಡುಗುಗಳಿಂದ ದೂರ ಇರಿ. ಅಂತಹ ಕೆಟ್ಟ ವ್ಯವಸ್ಥೆಯಿಂದ ನಾವು ಹೊರಬರಬೇಕಾದರೆ ಈ ರೀತಿಯ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಯಿಂದ ಸಾಧ್ಯ. ಭಕ್ತಿ ಮಾರ್ಗವೊಂದೇ ಸಂತುಷ್ಟ ಜೀವನಕ್ಕೆ ದಾರಿ – ಮೋಹನದಾಸ ಪರಮಹಂಸ ಸ್ವಾಮೀಜಿ

ಇನ್ನೊಂದು ಧರ್ಮದ ಮೇಲೆ, ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡದ ಧರ್ಮ ಎಂದರೆ ಅದು ಹಿಂದೂ ಧರ್ಮ, ಭಾರತ ದೇಶ. ಇಲ್ಲಿಯ ನೀರು, ಗಾಳಿ, ಶಿಲೆ ಎಲ್ಲದರಲ್ಲೂ ನಾವು ದೇವರನ್ನು ಕಾಣುತ್ತೇವೆ. ನಮ್ಮೆಲ್ಲರ ಸಂಕಲ್ಪದಂತೆ ದೇವಿಯ ಅನುಗ್ರಹದಿಂದ ಈ ಕ್ಷೇತ್ರ ಶ್ರೀ ರಾಜರಾಜೇಶ್ವರಿ ಕ್ಷೇತ್ರವಾಗಿ ಶೀಘ್ರದಲ್ಲಿ ಬೆಳಗಲಿ – ನಳೀನ್ ಕುಮಾರ್ ಕಟೀಲು

ನಮ್ಮ ಮನೆಯ ಮುಂದೆ ಭಗವಧ್ವಜವನ್ನು ಹಾರಿಸುವಂತಿಲ್ಲ.
ಧರ್ಮವಿರೋಧಿ ಚಟುವಟಿಕೆಗಳನ್ನು ಎದುರಿಸುವಂತ ಶಕ್ತಿ ನಮಗೆ ಬರಬೇಕಾಗಿದೆ. ಈ ಶ್ರದ್ಧಾಕೇಂದ್ರ ಹಿಂದೂ ಧರ್ಮಕ್ಕೆ ಶಕ್ತಿ ತುಂಬುವ ಕೇಂದ್ರವಾಗಿ ಬೆಳೆಯಲಿದೆ. ನಮ್ಮ ಪುತ್ತೂರು ಭಾಗದಿಂದ ಆದಷ್ಟು ಸಂಪನ್ಮೂಲ ಸಂಗ್ರಹ ಮಾಡುವ ಕಾರ್ಯವನ್ನು ಮಾಡುತ್ತೇನೆ – ಅರುಣ್ ಕುಮಾರ್ ಪುತ್ತಿಲ