ಕಲಾ ಸಾಹಿತ್ಯ ಸಾಧಕ ಯು. ಬಿ. ಗೋವಿಂದಯ್ಯ

0

ಕಲಾರಾಧನೆ ಮತ್ತು ಕಲೋಪಾಸನೆ ಎಂಬೆರಡು ಪದಗಳು ಕೂಡ ಸಮಾನಾರ್ಥಕವಾಗಿ ಬಳಕೆಯಲ್ಲಿರುವುದನ್ನು ನಾವು ಸರ್ವೇ ಸಾಮಾನ್ಯವಾಗಿ ಕಾಣುತ್ತೇವೆ .ಒಂದು ಕಲಾ ಪ್ರಕಾರದಲ್ಲಿ ವ್ಯಸ್ತನಾದ ಸಾಧಕನೋರ್ವ ಸಾಹಿತ್ಯದ ಮತ್ತೊಂದು ಮಗ್ಗುಲಲ್ಲಿ ಸಹ ತನ್ನ ಛಾಪು ಬೀರಿದರೆ ಅದೊಂದು ಅಸಾಧಾರಣ ಸಂಗತಿಯಾಗುತ್ತದೆ. ಕಲಾವಿದನಾಗಿ ಸಾಹಿತ್ಯಕ ಒಲವುಗಳನ್ನು, ಜೊತೆಗೆ ಆಡಳಿತಾತ್ಮಕ ನೆಲೆಯಲ್ಲಿ ತನ್ನ ವಿಶಿಷ್ಟತೆಯನ್ನು ತೋರಿದ ಮಹನೀಯರ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಯತ್ನವಿದು.


ಯು ಬಿ ಗೋವಿಂದಯ್ಯ ಅಥವಾ ಯು ಬಿ ಗೋವಿಂದ ಭಟ್ಟ ಓರ್ವ ಅಪ್ರತಿಮ ಕಲಾವಿದ, ಸಂಘಟಕ. ಇವರು ಜನಿಸಿದ್ದು ಕಾಸರಗೋಡು ಜಿಲ್ಲೆಯ ದೇಲಂಪಾಡಿ ಯಲ್ಲಿ. ದಿನಾಂಕ 29.07 1928ರಂದು. ಅಜ್ಜನವರಾದ ಲಕ್ಷ್ಮೀನಾರಾಯಣ ಕಾಟೂರಾಯ ಅವರ ಮನೆಯಲ್ಲಿ. ಇವರ ತಂದೆ ಉಬರಡ್ಕ ಭೀಮಯ್ಯ, ತಾಯಿ ವೆಂಕಟಲಕ್ಷ್ಮಿ. ಇವರು ಪ್ರಾಥಮಿಕ ಶಿಕ್ಷಣವನ್ನು ಉಬರಡ್ಕ ಮತ್ತು ದೇಲಂಪಾಡಿಗಳಲ್ಲಿ ಪಡೆದರು. ಯಕ್ಷಗಾನ ಕಲೆಯ ಕುರಿತು ಇವರಿಗೆ ಅತೀವವಾದ ಅಭಿಮಾನವಿತ್ತು .ಯಕ್ಷಗಾನ ಆಚಾರ್ಯ ಪುರುಷರಾದ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಶಿಷ್ಯರಾಗಿ ಬೆಳಕಿಗೆ ಬರುತ್ತಾರೆ. 15ರ ಎಳೆ ಹರೆಯದಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಶ್ರೀಯುತರು ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥ ಧಾರಿಯಾಗಿ ಯಕ್ಷಗಾನ ನಾಟಕಗಳಲ್ಲಿ ವೇಷಧಾರಿಯಾಗಿ ನೆಗಳ್ತೆಯನ್ನು ಪಡೆದವರು . ತಾಳಮದ್ದಳೆಯಲ್ಲಿ ಖ್ಯಾತನಾಮ ಕಲಾವಿದರಾದ ಕೀರಿಕ್ಕಾಡುಮಾಸ್ಟರ್ ವಿಷ್ಣು ಭಟ್ ,ದೇರಾಜೆ ಸೀತಾರಾಮಯ್ಯ ,ಶೇಣಿ ಗೋಪಾಲಕೃಷ್ಣ ಭಟ್, ಕೊಳಂಬೆ ಪುಟ್ಟಣ್ಣಗೌಡ ಗೋಪಣ್ಣ ಪುಣಿಚತ್ತಾಯ, ಕೋಟೆ ಕುಂಜ ನಾರಾಯಣಶೆಟ್ಟಿ ಮುಂತಾದ ಅಗ್ರಮಾನ್ಯ ಕಲಾವಿದರೊಂದಿಗೆ ಕಾಣಿಸಿಕೊಂಡವರು, ಪ್ರಭುದ್ಧ ಅರ್ಥ ದಾರಿಯಾಗಿ ಪಾತ್ರ ಗೌರವಕ್ಕೆ ಇಂಬು ನೀಡಿದವರು. ಶ್ರೀಯುತರ ಅರ್ಥಗಾರಿಕೆ ಶ್ರೋತೃಗಳ ಅಭಿಮಾನಕ್ಕೆ ಪಾತ್ರವಾದದ್ದು ಮಾತ್ರವಲ್ಲ ಪಾತ್ರೋಚಿತವಾದ ವಾದ ವಿವಾದಗಳ ಸಂದರ್ಭದಲ್ಲಿ ಓರ್ವ ಅಪ್ರತಿಮ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.ಶ್ರೀಯುತರ ಕಾರ್ಯ ವ್ಯಾಪ್ತಿ ವಿಸ್ತೃತವಾಗಿದೆ. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿ 1945ನೇ ಇಸವಿಯಿಂದ 1973ರ ತನಕ ಕಾರ್ಯ ನಿರ್ವಹಿಸಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ ಮಾತ್ರವಲ್ಲ ,ಸಾಹಿತ್ಯಕ ನೆಲೆಯಲ್ಲೂ ಕೂಡ ಇವರ ಕೊಡುಗೆ ಗಣನೀಯವಾಗಿದೆ ಎಂಬುದು ಇಲ್ಲಿ ಗಮನಿಸತಕ್ಕ ಅಂಶ. ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಪ್ರಸಂಗ ಮತ್ತಿತರ ಸಾಹಿತ್ಯ ಪ್ರಕಾರಗಳು ಮುಖ್ಯವಾಗುತ್ತವೆ. ‘ಪರಿಮಳಾ ಪರಿಣಯ’ ಎಂಬುದು ಇವರ ಲೇಖನಿಯಿಂದ ಹೊರಹೊಮ್ಮಿದ ಐತಿಹಾಸಿಕ ಯಕ್ಷಗಾನ ಪ್ರಸಂಗ . ಮರುತಾಶ್ವಮೇಧ ಪ್ರಕಟಿತ ಯಕ್ಷಗಾನ ಪ್ರಸಂಗ ಯಕ್ಷಗಾನ ರಾತ್ರಿ ಶಾಲೆ (ಯಕ್ಷಗಾನ ಸಾಮಾಜಿಕ ಪ್ರಸಂಗ) ಪ್ರಕಟಿತ. ಬನಾರಿ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕುರಿತಾಗಿ 24 ಕಂದಪದ್ಯಗಳ ರಚನೆ ಒಂದು ವಿಶಿಷ್ಟ ಸಾಹಿತ್ಯ ಕೈಂಕರ್ಯ. ಇದರೊಂದಿಗೆ ವಿಶಿಷ್ಟ ಪ್ರಯತ್ನವಾಗಿ ವಾರ್ಧಿಕ ಮತ್ತು ಭಾಮಿನಿ ಷಟ್ಪದಿಯಲ್ಲಿ ಭಗವದ್ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ. ಗೋವಿಂದಯ್ಯನವರ ಸಾಹಿತ್ಯಕ ಕೊಡುಗೆಗಳನ್ನು ಈ ಕೆಳಗಿನಂತೆ ಕಾಣುವುದು ವಿಹಿತ. ನವ ಯುಗ—ಕವನ ಸಂಗ್ರಹ, ಆನಂದವೆಲ್ಲಿ ವಿನೋದಾತ್ಮಕ ನಾಟಕ, ಸುಗಮದ ಹಾದಿಯಲ್ಲಿ ಹಾಸ್ಯ ಕಥೆ, ಮಾನಿನಿ ರತ್ನ ಶೋಬಾನೆ ಹಾಡುಗಳು, ಪರಮಾತ್ಮ ಭಜನಾ ಗೀತೆಗಳು, ಪಯಣವೆತ್ತ ಭಾವಗೀತೆಗಳು, ವಿನೋದ ವಿಹಾರ ಲೇಖನ ಮಾಲೆಗಳು, ಬೇಕೇ ?ಆಧ್ಯಾತ್ಮಿಕ ಶಾರ್ದೂಲ ವಿಕ್ರೀಡಿತ ವೃತ್ತದೊಳಗೆ ದೇಲಂಪಾಡಿ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕಿದವರು. ಕಾಸರಗೋಡು ಕರ್ನಾಟಕ ಏಕೀಕರಣ ಸಮಿತಿಯಲ್ಲಿ ಮುತುವರ್ಜಿ ವಹಿಸಿ ಶ್ರಮಪಟ್ಟು ಭಾಗವಹಿಸಿದವರು.

ಆ ಸಮಿತಿಯ ಉನ್ನತ ಪದಾಧಿಕಾರಿಗಳೊಂದಿಗೆ ಇವರು ಒಬ್ಬರಾಗಿ ಗುರುತಿಸಿಕೊಂಡಿದ್ದರು ಎಂಬುದು ಅಭಿಮಾನದ ಸಂಗತಿ. ಈ ಬಗ್ಗೆ ಹಲವು ಪ್ರತಿಭಟನಾ ಸಭೆಗಳನ್ನು ಸಂಘಟಿಸಿದ ಹಿರಿಮೆ ಇವರದ್ದಾಗಿದೆ.

ಶ್ರೀಯುತರು ಶ್ರೀನಿಲಯ, ಸಾಹಿತ್ಯ ನಿಲಯ ಪ್ರಕಾಶನಾಲಯವನ್ನು ಸ್ಥಾಪಿಸಿ ಆ ಮೂಲಕ ಹಲವಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದವರು.
ಯಕ್ಷಗಾನ ಮತ್ತು ಸಾಹಿತ್ಯ ಎಂಬ ಸಶಕ್ತ ಮಾಧ್ಯಮವನ್ನು ಅತ್ಯಂತ ಆಪ್ತವಾಗಿ ಕಂಡುಂಡು ಸಾಧನಾ ಪಥದಲ್ಲಿ ಮುನ್ನಡೆದ ಶ್ರೀಯುತರು ತನ್ನ ಅಲ್ಪಾವಧಿಯ ಜೀವನ ಪಯಣದಲ್ಲಿ ಸಮಾಜಮುಖಿಯಾದ ಕಾರ್ಯ ಶೈಲಿಯನ್ನು ರೂಢಿಸಿಕೊಂಡಿದ್ದರು.ಆಮೂಲಕ ಸಾರಸ್ವತ ಲೋಕಕ್ಕೆವಿಶಿಷ್ಟ ಕೊಡುಗೆಯನ್ನು ನೀಡಿದ ಪ್ರತಿಭಾನ್ವಿತರಾಗಿ ಸಾಧಕರಿಗೆ ಸ್ಪೂರ್ತಿದಾಯಕ ರಾಗಿದ್ದಾರೆ.

ಇದೇ ತಿಂಗಳ 28 ನೇ ತಾರೀಖಿನಂದು ಬನಾರಿಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದಲ್ಲಿ ಶ್ರೀಯುತರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.ಶ್ರೀಯುತರ ಸಂಸ್ಮರಣೆಯನ್ನು ಪ್ರಸಿದ್ದ ವೈದ್ಯ ಸಾಹಿತಿಗಳೂ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ರಮಾನಂದ ಬನಾರಿಯವರು ನೆರವೇರಿಸಿ ಕೊಡಲಿದ್ದಾರೆ .ಸಾಹಿತಿ, ಯಕ್ಷಗಾನ ಅರ್ಥ ಧಾರಿ ಶ್ರೀ ವೆಂಕಟರಾಮ್ ಭಟ್ ಸುಳ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಗೋವಿಂದಯ್ಯನವರ ಬಂಧುಗಳು ನಿಕಟವರ್ತಿಗಳು ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ.ನಂತರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ನುರಿತ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ.

  • – ನಾರಾಯಣ ತೋರಣಗಂಡಿ
  • ಸಪ್ತಸ್ವರ ಪೈಲೂರು ಕುಕ್ಕುಜಡ್ಕ