ಮೆಸ್ಕಾಂ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿಲ್ಲ

0

ಹಲ್ಲೆ ಆರೋಪ ನಿರಾಕರಿಸಿದ ಹೋಟೆಲ್ ಮಾಲಕ

ವಿದ್ಯುತ್ ಬಿಲ್ ಕಟ್ಟಿಲ್ಲವೆಂಬ ಕಾರಣಕ್ಕೆ ಸಂಪರ್ಕ ತುಂಡರಿಸಹೋದ ಮೆಸ್ಕಾಂ ಸಿಬ್ಬಂದಿಯ ಮೇಲೆ ಓಡಬಾಯಿಯ ಹೋಟೆಲ್ ಮಾಲಕರು ಹಲ್ಲೆ ನಡೆಸಿದರೆಂಬ ಘಟನೆಗೆ ಸಂಬಂಧಿಸಿ ಆಸ್ಪತ್ರೆಯಲ್ಲಿ ದಾಖಲಾದ ಸಿಬ್ಬಂದಿಯೊಡನೆ ಮಾತನಾಡಲೆಂದು ಪತ್ರಕರ್ತರು ಆಸ್ಪತ್ರೆಗೆ ಹೋದಾಗ ಅವರು ಅಲ್ಲಿ ಅಡ್ಮಿಟ್ ಆಗದಿರುವ ವಿಚಾರ ಕಂಡುಬಂದಿದೆ.


ಹಲ್ಲೆಯ ಬಗ್ಗೆಅಹಿತಿ ಬಂದ ಕೂಡಲೇ ಪತ್ರಕರ್ತರು ಮೆಸ್ಕಾಂ ಎ.ಇ. ಸುಪ್ರೀತ್ ರನ್ನು ಸಂಪರ್ಕಿಸಿ ವಿಚಾರಿಸಿದ್ದರು. ಘಟನೆ ನಡೆದಿರುವುದನ್ನು ದೃಢಪಡಿಸಿದ ಅವರು ಗಾಯಗೊಂಡಿರುವ ಸಿಬ್ಬಂದಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲು ತೆರಳಿರುವುದಾಗಿ ತಿಳಿಸಿದ್ದರು. ಅದರ ಆಧಾರದಲ್ಲಿ ಹಲ್ಲೆಯ ವರದಿ ಮಾಡಿದ ವರದಿಗಾರರು ಗಾಯಾಳುವಿನಿಂದ ಹೆಚ್ಚಿನ ಮಾಹಿತಿ ಪಡೆಯಲೆಂದು ಆಸ್ಪತ್ರೆಗೆ ಹೋದಾಗ ಅಲ್ಲಿಗೆ ಮೆಸ್ಕಾಂ ಸಿಬ್ಬಂದಿ ಬಂದಿಲ್ಲವೆಂಬ ಮಾಹಿತಿ ದೊರೆಯಿತು.

ಈ ಬಗ್ಗೆ ಮತ್ತೆ ಮೆಸ್ಕಾಂ ಎ ಇ ಸುಪ್ರೀತ್ ರವರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ರಾಮಪ್ಪರನ್ನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಹೇಳಿಕೆ ನೀಡುವಂತೆ ತಿಳಿಸಲಾಗಿತ್ತು. ಆದರೆ ಅವರ ಪತ್ನಿ ವಿಷಯ ತಿಳಿದು ಆಸ್ಪತ್ರೆಗೆ ಬಂದು ಮನೆಯಲ್ಲಿ ಸಣ್ಣ ಮಕ್ಕಳು ಇರುವ ಕಾರಣ ಪತಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿದರೆ ನನಗೆ ಇಲ್ಲಿ ಇರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಇವರನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ” ಎಂದು ಹೇಳಿ ರಾಮಪ್ಪರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ” ಎಂದು ಸುದ್ದಿಗೆ ಮಾಹಿತಿ ನೀಡಿದ್ದಾರೆ.

ನಾನು ಹೊಡೆದಿಲ್ಲ : ಸಂತೋಷ್

ಓಡಬಾಯಿ ಹೋಟೆಲ್ ಮಾಲಕ ಸಂತೋಷ್ ರವರು ಸುದ್ದಿಯನ್ನು ಸಂಪರ್ಕಿಸಿ ” ನಮ್ಮ ವಾಣಿಜ್ಯ ಸಂಕೀರ್ಣದ ಒಂದು ಮೀಟರ್ ಬಿಲ್ ಮೆಸ್ಕಾಂಗೆ ಪಾವತಿಸಲು ಬಾಕಿ ಇದ್ದುದು ಹೌದು.‌ ನಾವು ಯಾವತ್ತೂ ಬಾಕಿ ಇಟ್ಟವರಲ್ಲ. ಬಾಕಿ ಇರುವ ಮೀಟರ್ ನ ಸಂಪರ್ಕ ಕಡಿತ ಮಾಡಿದರೆ ಪರವಾಗಿರಲಿಲ್ಲ. ಅದು ಅವರ ಕರ್ತವ್ಯ. ಆದರೆ ನಮ್ಮಲ್ಲಿಗೆ ಬಂದ ಮೆಸ್ಕಾಂ ಸಿಬ್ಬಂದಿ ನಮ್ಮ ಇಡೀ ವಾಣಿಜ್ಯ ಸಂಕೀರ್ಣದ ವಿದ್ಯುತ್ ಸಂಪರ್ಕವನ್ನೇ ಕಡಿತ ಮಾಡಿದರು. ಅದು ಸರಿಯಲ್ಲ. ಅದಕ್ಕಾಗಿ ನಾನು ಅವರನ್ನು ಪ್ರಶ್ನಿಸಿದ್ದೇನೆ. ಹಲ್ಲೆಯ ರೀತಿಯ ಘಟನೆಯೇ ನಡೆದಿಲ್ಲ. ಆ ಸಿಬ್ಬಂದಿ ನಡೆದುಕೊಂಡ ರೀತಿಯ ಕುರಿತು ಆಗಲೇ ಸುಳ್ಯ ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ರಿಗೂ ತಿಳಿಸಿದ್ದೇನೆ ” ಎಂದು ತಿಳಿಸಿದ್ದಾರೆ.