ಹಿರಿಯ ಅಟೋಚಾಲಕ ಬಾಬು ಪಾಟಾಳಿ ಅವರ ಪಾರ್ಥಿವ ಶರೀರದ ಮೆರವಣಿಗೆ

0

ಮೆರವಣಿಗೆಗೆ ಸಾಥ್ ನೀಡಿದ ಜಾಲ್ಸೂರು ಘಟಕದ ರಿಕ್ಷಾ ಚಾಲಕರು ಹಾಗೂ ಊರವರು

ನಿನ್ನೆ ರಾತ್ರಿ ಹಳೆಗೇಟು ಸಮೀಪ ನಡೆದ ಅಟೋರಿಕ್ಷಾ – ಓಮ್ನಿ ಅಪಘಾತದಲ್ಲಿ ಮೃತಪಟ್ಟ ಹಿರಿಯ ರಿಕ್ಷಾ ಚಾಲಕ ಜಾಲ್ಸೂರಿನ ಎಸ್. ಬಾಬು ಪಾಟಾಳಿ ಅರಿಯಡ್ಕ ಅವರ ಪಾರ್ಥಿವ ಶರೀರದ ಮೆರವಣಿಗೆಯು ಇಂದು ಸುಳ್ಯದಿಂದ ಜಾಲ್ಸೂರಿನ ತನಕ ಸಾಗಿದ್ದು, ಜಾಲ್ಸೂರು ಘಟಕದ ಅಟೋರಿಕ್ಷಾ ಚಾಲಕರು ಹಾಗೂ ಊರವರು ಸಾಥ್ ನೀಡಿದ್ದರು. ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಸುಳ್ಯದಿಂದ ಅಟೋರಿಕ್ಷಾ ಚಾಲಕರ ಮೆರವಣಿಗೆಯ ಮೂಲಕ ಜಾಲ್ಸೂರಿನ ಪೆಟ್ರೋಲ್ ಪಂಪ್ ತನಕ ಸಾಗಿ ಬಳಿಕ ಮೃತರ ಸ್ವಗೃಹವಾದ ಅರಿಯಡ್ಕಕ್ಕೆ ಕೊಂಡೊಯ್ಯಲಾಯಿತು.

ಅಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.ಜಾಲ್ಸೂರಿನ ಪೆಟ್ರೋಲ್ ಪಂಪ್ ಜಾಲ್ಸೂರು ಅಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಗೋಪಾಲ ಅಡ್ಕಾರು, ಬಾಬು ಪಾಟಾಳಿ ಅವರ ಆತ್ಮೀಯರಾಗಿರುವ ಜಯರಾಮ ರೈ ಜಾಲ್ಸೂರು, ಮಾದವ ಗೌಡ ಕಾಳಮನೆ, ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಸೇರಿದಂತೆ ಎಲ್ಲಾ ಅಟೋರಿಕ್ಷಾ ಚಾಲಕರು, ಜಾಲ್ಸೂರು ಹಾಗೂ ಕನಕಮಜಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿ ಅಂತಿಮ ನಮನ ಸಲ್ಲಿಸಿದರು.

ಬಾಬು ಪಾಟಾಳಿ ಅವರು ಅಟೋರಿಕ್ಷಾ ಚಾಲಕರಾಗಿ ಸುಮಾರು ನಲವತ್ತು ವರ್ಷಗಳ ಕಾಲ ದುಡಿದಿದ್ದು, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷರಾಗಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅವರಿಗೆ 69 ವರ್ಷ ವಯಸ್ಸಾಗಿದ್ದು, ಪತ್ನಿ ವೇದಾವತಿ, ಪುತ್ರರಾದ ಪ್ರವೀಣ್ ಅರಿಯಡ್ಕ, ನವೀನ್ ಅರಿಯಡ್ಕ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.