ಸುಳ್ಯದಲ್ಲಿ ನ.17,18,19 ರಂದು ನಡೆಯಲಿರುವ ಕಬಡ್ಡಿ ಉತ್ಸವಕ್ಕೆ ಭರದ ಸಿದ್ಧತೆ

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಇದರ 8 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನ.17,18 ಮತ್ತು 19 ರಂದು ನಡೆಯಲಿರುವ ಅದ್ದೂರಿಯ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟದ ಪೂರ್ವ ಸಿದ್ಧತೆಯು ಭರದಿಂದ ನಡೆಯುತ್ತಿದೆ.

ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ವ್ಯವಸ್ಥಿತವಾಗಿ ಪೆಂಡಾಲ್ ನಿರ್ಮಾಣ ಕಾರ್ಯ ಹಾಗೂ ಸುಮಾರು 4 ಸಾವಿರ ಮಂದಿ ಕುಳಿತು ಕೊಳ್ಳಲು ಸುಸಜ್ಜಿತ ಗ್ಯಾಲರಿ ನಿರ್ಮಿಸಲಾಗುತ್ತಿದೆ. ಸಂಪೂರ್ಣ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟವು ಸುಂದರವಾದ ಇಂಡೋರ್ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ 12 ತಂಡ ಹಾಗೂ ಮಹಿಳೆಯರ 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿರುವುದು. ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾಟದ ವೀಕ್ಷಣೆಗೆ ಮಳೆಯಿಂದ ಅಡ್ಡಿಯಾಗದಂತೆ ಶೀಟ್ ಅಳವಡಿಸಿ ಪೆಂಡಾಲ್ ನಿರ್ಮಿಸಲಾಗುತ್ತಿದೆ.

ಪಂದ್ಯಾಟ ನಡೆಯುವ ಸ್ಟೇಡಿಯಂನ ಹೊರ ಭಾಗದಲ್ಲಿ ಫುಡ್ ಫೆಸ್ಟಿವಲ್ ಸ್ಟಾಲ್ ಗಳನ್ನು ಹಾಕಲಾಗುವುದು. ಪಂದ್ಯಾಟ ವೀಕ್ಷಿಸಲು ಬರುವಕ್ರೀಡಾಭಿಮಾನಿಗಳಿಗೆ ವಿಶೇಷ ಆಹಾರ ಖಾದ್ಯಗಳನ್ನು ಸವಿಯಲು ಅವಕಾಶವಿರುವುದು. ರಾಜ್ಯ ,ಜಿಲ್ಲೆಯ ಹಾಗೂ ತಾಲೂಕು ಮಟ್ಟದ ನಾಯಕರುಗಳು,ಜನಪ್ರತಿನಿಧಿಗಳು,ಚಿತ್ರ ನಟರು, ಸಾಧಕರು ಪಂದ್ಯಾಟದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರೇಕ್ಷಕರಿಗೆ ತಲಾ ಒಬ್ಬರಿಗೆ ಒಂದು ದಿನದ ಪಂದ್ಯಾಟ ವೀಕ್ಷಿಸಲು ರೂ . 200/-ರಂತೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಕಬಡ್ಡಿ ಪಂದ್ಯಾಟದ ಸಂಘಟನಾ ಸಮಿತಿ ಅಧ್ಯಕ್ಷ ಭಾರತ್ ಶಾಮಿಯಾನ ಮಾಲಕ ಸಂಶುದ್ದೀನ್ ಜಿ.ಎ ತಿಳಿಸಿದರು.