ಆಲೆಟ್ಟಿ ಪಂಚಾಯತಿಗೆ ಭೇಟಿ ನೀಡಿದ ಲೋಕಾಯುಕ್ತರ ತಂಡ

0

ಕಾಮಗಾರಿ ಕಡತಗಳ ಮಾಹಿತಿ ಸಂಗ್ರಹ ಹಾಗೂ ಪರಿಶೀಲನೆ

ಆಲೆಟ್ಟಿ ಗ್ರಾಮದ ನಾಗರಿಕರು ಸಲ್ಲಿಸಿದ ದೂರಿನ ಮೇರೆಗೆ ಕಾಮಗಾರಿ ಕೆಲಸಗಳ ಕಡತಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಲು ಮಂಗಳೂರಿನಿಂದ ಲೋಕಾಯುಕ್ತರ ತಂಡ ಇಂದು ಸಂಜೆ ಆಲೆಟ್ಟಿ ಪಂಚಾಯತ್ ಗೆ ಭೇಟಿ ನೀಡಿದ ಘಟನೆ ವರದಿಯಾಗಿದೆ.

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಮರ್ಧು ಕೊಡಂಬಾರೆ ಎಂಬಲ್ಲಿ ಸೇತುವೆ ನಿರ್ಮಿಸಲು ಬಿಡುಗಡೆಯಾದ ಅನುದಾನದಲ್ಲಿ ಸೇತುವೆ ನಿರ್ಮಿಸಿಲ್ಲವೆಂಬ ಆರೋಪದ ಮೇಲೆ ಹಾಗೂ ರಂಗತ್ತಮಲೆ ಎಂಬಲ್ಲಿ ಕುಡಿಯುವ ನೀರಿಗಾಗಿ ಬಿಡುಗಡೆಯಾದ ಅನುದಾನದಲ್ಲಿ ಬೋರ್ ವೆಲ್ ತೆಗೆಯಲಿಲ್ಲ ಎಂಬ ದೂರಿನನ್ವಯ ಪರಿಶೀಲಿಸಲು ಪಂಚಾಯತ್ ಗೆ ಅಧಿಕಾರಿಗಳು ಆಗಮಿಸಿದ್ದರು.

ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿ ಇದಾಗಿದ್ದು ಮಂಜೂರುಗೊಂಡಿರುವ ಅನುದಾನದಲ್ಲಿ ಅದೇ ಪರಿಸರದಲ್ಲಿ ಬೇರೆ ಕಡೆ ಸೇತುವೆ ನಿರ್ಮಿಸಲಾಗಿದೆ ಎಂಬ ಮಾಹಿತಿಯನ್ನು ಪಿ.ಡಿ.ಒ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.

ಈ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.

ರಂಗತ್ತಮಲೆ ಎಂಬಲ್ಲಿ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಪಂಚಾಯತ್ ನಿಂದ ಟ್ಯಾಂಕ್ ಹಾಗೂ ಪಂಚಾಯತ್ ನಿಂದ ಬೋರ್ ವೆಲ್ ನಿರ್ಮಿಸಲು ಅನುದಾನ ಮಂಜೂರುಗೊಂಡಿದ್ದು ಬೋರ್ ವೆಲ್ ನಿರ್ಮಿಸದೆ ಅವ್ಯವಹಾರ ನಡೆದಿದೆಯೆಂಬ ಆರೋಪದಡಿಯಲ್ಲಿ ಸಲ್ಲಿಸಿರುವ ದೂರಿನ ಕುರಿತು ಕಡತಗಳನ್ನು ಲೋಕಾಯುಕ್ತ ಅಧಿಕಾರಿ ಗಳು ಪರಿಶೀಲಿಸಿದರು. ಹಿಂದಿನ ಸಾಲಿನ ಆಡಳಿತ ಮಂಡಳಿಯ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಪಂಚಾಯತ್ ನಿಂದ ರೂ 4. ಲಕ್ಷ ಅನುದಾನ ಮಂಜೂರುಗೊಂಡಿದ್ದು ಪೈಪ್ ಲೈನ್ ಅಳವಡಿಸಿ ಬೋರ್ ವೆಲ್ ತೆಗೆಯಲಾಗಿತ್ತು. ಬೋರ್ ವೆಲ್ ನಲ್ಲಿ ನೀರಿಲ್ಲದ ಕಾರಣದಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಇದೀಗ ಪರ್ಯಾಯವಾಗಿ ಪಂಚಾಯತ್ ವತಿಯಿಂದ ಬೋರ್ ವೆಲ್ ತೆಗೆಸಿ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಪಿ.ಡಿ.ಒ ರವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಎರಡು ವಿಚಾರಕ್ಕೆ ಸಂಬಂಧಿಸಿದಂತೆ
ದೂರಿನ ಮೇರೆಗೆ ಆಗಮಿಸಿದ ಲೋಕಾಯುಕ್ತರು ಇದಕ್ಕೆ ಸಂಬಂಧಿಸಿದ ತನಿಖೆಗೆ ಮುಂದಿನ ದಿನಗಳಲ್ಲಿ ಸೂಚನೆ ನೀಡುವ ಸಂದರ್ಭದಲ್ಲಿ ಹಾಜರಾಗುವಂತೆ ಪಿ.ಡಿ.ಒ ರವರಿಗೆ ಸೂಚಿಸಿದರು.
ಲೋಕಾಯುಕ್ತರು ಪಂಚಾಯತ್ ಗೆ ಭೇಟಿ ನೀಡುವ ಬಗ್ಗೆ ಪಿ.ಡಿ.ಒ ರವರಿಗೆ ಖಚಿತ ಮಾಹಿತಿ ಇತ್ತೆನ್ನಲಾಗಿದೆ.
ಲೋಕಾಯುಕ್ತರ ಭೇಟಿಯ
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ ಹಾಗೂ ಪ್ರಭಾರ ಪಿ.ಡಿ.ಒ ಸೃಜನ್ ಎ.ಜಿ ಮತ್ತು ಸಿಬ್ಬಂದಿ ವರ್ಗದವರಿದ್ದರು.