ಸುಳ್ಯದ ಗುರುಂಪು ಗ್ಯಾರೇಜಿನಿಂದ ಹಣ ಎಗರಿಸಿ‌ ಪರಾರಿಯಾದ ಕಳ್ಳರು

0

ಸುಳ್ಯದಿಂದ ಆಲೆಟ್ಟಿ ರಸ್ತೆಯ ಗುರುಂಪು ಬಳಿ‌ಯಿರುವ ಆನಂದ ರವರ ಮಾಲಕತ್ವದ ವೃಂದಾ ಅಟೋ ವರ್ಕ್ಸ್ ಗ್ಯಾರೇಜಿನಲ್ಲಿ ಇರಿಸಿದ ಹಣವನ್ನು ಹಾಡು ಹಗಲೇ ಕಳ್ಳರು ಎಗರಿಸಿರುವ ಘಟನೆ ವರದಿಯಾಗಿದೆ.


ನಿನ್ನೆ ಸಂಜೆ ಸಮಯದಲ್ಲಿ ಆನಂದ ರವರು ಗ್ಯಾರೇಜಿನಲ್ಲಿ ದುರಸ್ತಿ ಮಾಡಿದ ಬೈಕೊಂದನ್ನು ಟ್ರಯಲ್ ನೋಡಲು ಹೋಗಿ ಬರುವಷ್ಟರಲ್ಲಿ ಹೊಂಚು ಹಾಕಿ ಕಾದು ಕುಳಿತಿದ್ದ ಖದೀಮರು ಡ್ರಾವರಲ್ಲಿ ಇರಿಸಿದ ನಗದು ರೂ.13,200 ನ್ನು ಎಗರಿಸಿದ್ದಾರೆ.


ಆನಂದರವರು ಸಂಘದ ಹಣವನ್ನು ಸಂಗ್ರಹಿಸಿ ಲೆಕ್ಕ ಮಾಡಿ ಪುಸ್ತಕ ಸಮೇತ ಡ್ರಾವರಲ್ಲಿ ಇರಿಸಿದ್ದರು. ಟ್ರಯಲ್ ಹೋಗಿ ಬರುವಷ್ಟರಲ್ಲಿ ‌ಘಟನೆ ನಡೆದಿದೆ. ಈ ಕುರಿತು ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿ ಕೊಂಡಿರುವುದಾಗಿ ತಿಳಿದು ಬಂದಿದೆ.