ಅಮರಮುಡ್ನೂರು ಗ್ರಾಮದ ಪೈಲೂರಿನ ರಂಜಿತ್ (24) ಎಂಬ ಯುವಕ ಕಳೆದ ಡಿ.25 ರಂದು ನಾಪತ್ತೆಯಾಗಿದ್ದು ಡಿ.30 ರಂದು ಬೆಳಗ್ಗೆ ಆತನ ಮೃತ ದೇಹ ಪೈಲಾರಿನ ರಬ್ಬರ್ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.















ಕುಕ್ಕುಜಡ್ಕದಲ್ಲಿ ಶಾಮಿಯಾನ ಕೆಲಸ ಮಾಡಿಕೊಂಡಿದ್ದ ಯುವಕ ರಂಜಿತ್ ಡಿ.25 ರಂದು ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೊರಟು ಬಂದವನು ರಾತ್ರಿಯಾದರೂ ಮನೆಗೆ ಬರಲಿಲ್ಲ. ಇದರಿಂದ ಮನೆ ಯವರು ವಿಚಲಿತರಾಗಿ ಶಾಮಿಯಾನದ ಮಾಲಕರಿಗೆ ವಿಷಯ ತಿಳಿಸಿದರು. ಕೆಲಸಕ್ಕೆಂದು ಹೊರಟು ಬಂದಿರುವ ರಂಜಿತ್ ಆ ದಿವಸ ಕೆಲಸಕ್ಕೆ ಬಾರದೆ ನಾಪತ್ತೆ ಯಾಗಿರುತ್ತಾನೆ. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರ ಹಾಗೂ ಗೆಳೆಯರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ರಂಜಿತ್ ನ ತಂದೆ ಬಾಬು ರವರು ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಹಲವಾರು ಕಡೆಗಳಲ್ಲಿ ಹುಡುಕಾಟದ ಪ್ರಯತ್ನ ಮಾಡಲಾಯಿತಾದರೂ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಪೈಲಾರಿನಲ್ಲಿರುವ ಕೆ.ಎಫ್.ಡಿ.ಸಿ.ಯವರ ರಬ್ಬರ್ ಪ್ಲಾಂಟೇಷನ್ ನಲ್ಲಿ ಕೆಲಸ ಮಾಡುವ ರಬ್ಬರ್ ಟ್ಯಾಪರ್ಸ್ ದುರ್ವಾಸನೆ ಕಂಡು ಬಂದ ಕಾರಣದಿಂದ ಹುಡುಕಾಟ ನಡೆಸಿದಾಗ ಅಲ್ಲೆ ಇದ್ದ ನೆಲ್ಲಿಕಾಯಿ ಮರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಕಂಡು ಬಂದಿತು.
ಯುವಕ ನಾಪತ್ತೆಯಾಗಿರುವ ವಿಷಯ ತಿಳಿದಿದ್ದ ಅವರು ಸಂಶಯಗೊಂಡು ವಿಷಯವನ್ನು ಶಾಮಿಯಾನದ ಮಾಲಕರಿಗೆ ತಿಳಿಸಿದರು. ಬಳಿಕ ಯುವಕನ ಮನೆಯವರು ಬಂದು ನೋಡಿದಾಗ ರಂಜಿತ್ ನ ದೇಹವೆಂಬುದು ದೃಢ ಪಟ್ಟಿತ್ತು. ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಇದ್ದು ದುರ್ವಾಸನೆ ಬೀರುತ್ತಿದ್ದದರಿಂದ ನೇಣು ಹಾಕಿಕೊಂಡು ನಾಲ್ಕೈದು ದಿನ ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಈ ಕುರಿತು ಶಾಮಿಯಾನದ ಮಾಲಕರು ಬೆಳ್ಳಾರೆ ಪೋಲಿಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಪೋಲಿಸರು ಆಗಮಿಸಿ ಮಹಜರು ನಡೆಸಿದರು.
ಮೃತ ಯುವಕ ಅವಿವಾಹಿತರಾಗಿದ್ದು ತಂದೆ ಬಾಬು,ತಾಯಿ ಲಲಿತಾ ಹಾಗೂ ಓರ್ವ ಸಹೋದರ ರೋಹಿತ್ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.









