ಕೊಡಿಯಾಲ : ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

0

ಕ್ರೀಡಾಕೂಟ ಎಲ್ಲರನ್ನು ಒಗ್ಗೂಡಿಸುತ್ತದೆ – ಮಾಧವ ಬಿ.ಕೆ

“ಗ್ರಾಮೀಣ ಪ್ರದೇಶದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯುತ್ತಿದೆ. ಇಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣವಾಗಿದೆ. ಸತತ ಪ್ರಯತ್ನ ಹಾಗೂ ನಿರಂತರ ಶ್ರಮದಿಂದ 4ರಿಂದ 5 ವರ್ಷಗಳ ಸತತ ಪ್ರಯತ್ನದಿಂದ ಒಬ್ಬ ಉತ್ತಮ ಕ್ರೀಡಾಪಟು ಆಗಲು ಸಾಧ್ಯ. ಕ್ರೀಡಾಕೂಟವು ಜಾತಿ, ಧರ್ಮ, ರಾಜಕೀಯ ಇಲ್ಲದೆ ಎಲ್ಲರೂ ಬೆರೆಯುವ ಮುಖಾಂತರ ನಡೆಯುತ್ತದೆ. ಇದರಿಂದ ಕ್ರೀಡಾಕೂಟವು ಎಲ್ಲರನ್ನೂ ಒಗ್ಗೂಡಿಸುತ್ತದೆ” ಎಂದು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಷನ್ ಅಧ್ಯಕ್ಷ ಮಾಧವ ಬಿ.ಕೆ.ಹೇಳಿದರು.

ಅವರು ಕೊಡಿಯಾಲ ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಸಹಭಾಗಿತ್ವದಲ್ಲಿ ಪುರುಷರ 62 ಕೆ.ಜಿ. ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನನಾ ಕಾರ್ಯಕ್ರಮವನ್ನು ಡಿ.31ರಂದು ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕ್ರೀಡಾಪಟು ಜೀವನದಲ್ಲಿ ಶಿಸ್ತು,ಸಮಯಪ್ರಜ್ಞೆ ಯನ್ನು ಪಾಲಿಸಿಕೊಂಡು ಗುರುಹಿರಿಯರಿಗೆ ಗೌರವ ಕೊಡಬೇಕು ಎಂದು ಅವರು ಹೇಳಿ , ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು. ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ.ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಬೆಳ್ಳಾರೆ ಡಿ.ಸಿ.ಸಿ.ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಮರಕ್ಕಡ, ಬೆಳ್ಳಾರೆ ಪ್ರಾ.ಕೃ.ಪ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಸುಳ್ಯ ತಾಲೂಕು ಕ್ರೀಡಾಭಾರತಿ ಅಧ್ಯಕ್ಷ ಎ.ಸಿ.ವಸಂತ್, ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಹರ್ಷನ್ ಕೆ.ಟಿ, ಉಪಾಧ್ಯಕ್ಷೆ ಶ್ರೀಮತಿ ಚಿತ್ರಾ ದಿನೇಶ್, ಮೂವಪ್ಪೆ ಶಾಲಾ ಶಿಕ್ಷಕಿ ಕಾಣಿಯೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಮಲೆಕೆರ್ಚಿ, ಶಾಲಾ ಶಿಕ್ಷಕಿ ಶ್ರೀಮತಿ ಪುಷ್ಪಾ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ,ಬೆಳ್ಳಾರೆ ಸಹಕಾರಿ ಬ್ಯಾಂಕ್ ನಿರ್ದೇಶಕ ಸುಂದರ ಗೌಡ ಪೋಳಾಜೆ,ಪದ್ಮಯ್ಯ ಗೌಡ ತೋಟ ಕಲ್ಪಡ,ಮೂವಪ್ಪೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ ಕಣಿಲೆಗುಂಡಿ ಉಪಸ್ಥಿತರಿದ್ದರು.

ಶ್ರೀಮತಿ ಪುಷ್ಪಾರವರು ಪ್ರಾರ್ಥಿಸಿ, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ.ಸ್ವಾಗತಿಸಿ, ಗಣೇಶ ನಡುವಾಲ್ ಕಾರ್ಯಕ್ರಮ ನಿರೂಪಿಸಿ, ಶೇಖರ ಕೆ.ಪಿ.ವಂದಿಸಿದರು.
ಟ್ರಸ್ಟ್ ನ ಕೋಶಾಧಿಕಾರಿ ಜಯಂತ್ ಕಾಯರ್ತಡ್ಕ,ಉಪಾಧ್ಯಕ್ಷ ಕೊರಗಪ್ಪ ಕೆ.ಕೆ,ಜೊತೆ ಕೋಶಾಧಿಕಾರಿ ಭಾಸ್ಕರ ತೋಟ,ಜೊತೆ ಕಾರ್ಯದರ್ಶಿ ಗಣೇಶ್ ಪೆರ್ಲೋಡಿ ಹಾಗೂ ಸರ್ವಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.