ಕೆಎಸ್ಆರ್ ಟಿಸಿ ಗುತ್ತಿಗೆ ಆಧಾರಿತ ಬಸ್ ಚಾಲಕರ ದಿಢೀರ್ ಮುಷ್ಕರ: ಬಸ್ ಸ್ಥಗಿತ

0

ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಸಂಕಷ್ಟ

ಕೆ ಎಸ್ ಆರ್ ಟಿ ಸಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರಿಗೆ ಕೆಲಸ ನಿಲ್ಲಿಸುವಂತೆ ಅವರನ್ನು ನೇಮಕ ಮಾಡಿದ ಸಂಸ್ಥೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರವಾಗಿರುವ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಕೆಲಸ ನಿಲ್ಲಿಸಿದ್ದು, ಸುಳ್ಯ ತಾಲೂಕಿನ ಗ್ರಾಮೀಣ ಬಸ್ ರೂಟ್ ಗಳು ಸ್ಥಗಿತಗೊಂಡು ಜನರು ಸಂಕಷ್ಟಕ್ಕೆ ಒಳಗಾಗುವ ಸಂದರ್ಭ ಬಂದಿದೆ.

ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್ ರೂಟ್ ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕ ಮಾಡಲಾಗಿದೆ. ಈ ನೇಮಕದ ಅವಧಿ ಎರಡು ವರ್ಷ ಇರುತ್ತದೆ. ಈ ನೇಮಕಾತಿಯ ಜವಾಬ್ದಾರಿಯನ್ನು ಮೈಸೂರಿನ ಪನ್ನಗ ಎಂಬ ಸಂಸ್ಥೆಗೆ ನೀಡಲಾಗಿತ್ತು. ಸುಳ್ಯ ಡಿಪೋ ಒಂದರಲ್ಲಿ ಪನ್ನಗ ಮೂಲಕ ನೇಮಕವಾದ 35 ಮಂದಿ ಚಾಲಕರಿದ್ದಾರೆ.
ದ. 30 ರಂದು ರಾತ್ರಿ ಅವರಿಗೆಲ್ಲ ಪನ್ನಗ ಸಂಸ್ಥೆ ಮೆಸೇಜ್ ಮಾಡಿ ಜನವರಿ ಒಂದರಿಂದ ಕೆಲಸ ನಿಲ್ಲಿಸುವಂತೆ ತಿಳಿಸಿತು. ಈ 35 ಚಾಲಕರಲ್ಲಿ ನಾಲ್ಕು ತಿಂಗಳು, ಆರು ತಿಂಗಳು ಮಾತ್ರ ಆದ ಚಾಲಕರೂ ಇದ್ದಾರೆ. ಇದು ಚಾಲಕರಲ್ಲಿ ಅತಂತ್ರ ಭಾವನೆ ಮೂಡಿಸಿತು. ಡಿಸೆಂಬರ್ 31 ರಂದು ಸಂಜೆಯ ವೇಳೆಗೆ ಮತ್ತೆ ಮೆಸೇಜ್ ಮಾಡಿದ ಪನ್ನಗ ಸಂಸ್ಥೆ ಜನವರಿ 1ರಿಂದ ಪುನಃ ಕೆಲಸ ಆರಂಭಿಸುವಂತೆ ತಿಳಿಸಿತೆನ್ನಲಾಗಿದೆ.

ಚಾಲಕರನ್ನು ಕೈಬಿಟ್ಟರೆ ಬಸ್ ಓಡಿಸಲು ಸಮಸ್ಯೆಯಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುವುದನ್ನು ಮನಗಂಡ ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಪನ್ನಗ ಸಂಸ್ಥೆಯ ಕಾಂಟ್ರಕ್ಟ್ ಅನ್ನು ನವೀಕರಿಸುವ ವ್ಯವಸ್ಥೆ ಮಾಡುವುದಾಗಿ ಪನ್ನಗ ಸಂಸ್ಥೆಗೆ ತಿಳಿಸಿದರೆನ್ನಲಾಗಿದೆ. ಆ ಬಳಿಕ ಪನ್ನಗ ಸಂಸ್ಥೆಯವರು ಚಾಲಕರಿಗೆ ಪುನಃ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡುವ ನೀಡಿದ್ದರೆಂದು ಹೇಳಲಾಗುತ್ತಿದೆ.


ಆದರೆ ‘ಒಮ್ಮೆ ಬೇಡ ಒಮ್ಮೆ ಮಾಡು’ ಎಂಬ ಸೂಚನೆ ನೀಡಿ ಅತಂತ್ರಗೊಳಿಸುವುದಿದ್ದರೆ ನಮಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಏನಿದ್ದರೂ ಲಿಖಿತ ಆದೇಶ ಕೊಡಿ’ ಎಂದು ಆಗ್ರಹಿಸಿ ಸುಳ್ಯ ಡಿಪೋದ 35 ಮಂದಿ ಚಾಲಕರು ಕೂಡ ದಿಡೀರ್ ಮುಷ್ಕರಕ್ಕೆ ನಿರ್ಧರಿಸಿದರು.


ನಿನ್ನೆ ಸಂಜೆ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಹೋಗಬೇಕಾದ ಮೂರು ರೂಟ್ಗಳಲ್ಲಿ ಬಸ್ ಓಡಿಸದೆ ಕುಳಿತರು. ನಂತರ ಡಿಪೋ ಅಧಿಕಾರಿಗಳು ಕೆ ಎಸ್ ಆರ್ ಟಿ ಸಿ ಯ ಪರ್ಮನೆಂಟ್ ಡ್ರೈವರ್ ಗಳು ಮತ್ತು ಕಂಡಕ್ಟರ್ ಗಳ ಸಹಕಾರ ಪಡೆದು ಕೊಲ್ಲಮೊಗ್ರ ರೂಟ್ ಗೆ ಬಸ್ ಓಡಿಸಿದ್ದಾರೆ.


ಇಂದು ಬೆಳಿಗ್ಗೆ ಎಂಟು ಗಂಟೆಯವರೆಗೆ ಪನ್ನಗದಿಂದ ನೇಮಿತರಾದ ಚಾಲಕರು ಕೆಲಸಕ್ಕೆ ಬಂದಿಲ್ಲ. ಇದರಿಂದ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಬಸ್ ಹೋಗಲಾಗದೆ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ಬವಣೆ ಪಡುವುದಂತೂ ಖಂಡಿತ.


ರೂಟ್ ಗಳಿಗೆ ಬಸ್ ಕಳುಹಿಸಲು ಪರ್ಮನೆಂಟ್ ವರ್ಕರ್ ಗಳನ್ನು ಅಡ್ಜಸ್ಟ್ ಮಾಡಿಕೊಂಡು ಸುಮಾರು 80 ಶೇಕಡದಷ್ಟು ರೂಟ್ ಗಳಿಗೆ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಸುಳ್ಯ ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.