ಮಗ ಸುದ್ದಿಗೆ ಪತ್ರ ಬರೆದುದರಲ್ಲಿ ನನ್ನ ಪಾತ್ರ ಇಲ್ಲ

0

ಪರೀಕ್ಷೆಗೆ ಮಾತ್ರ ಸೀಮಿತನಾಗಿರುವಂತೆ ಮತ್ತು ದುಸ್ಸಾಹಸಗಳಿಗೆ ಇಳಿಯದಂತೆ ಮಗನಿಗೆ ಹೇಳಿಕೊಡುತ್ತೇನೆ

ಈ ವಿಚಾರವನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನನ್ನ ಮಗನನ್ನೂ ಎಳೆಯಬೇಡಿ

ಸರಕಾರಿ ಕಚೇರಿಯ ಭ್ರಷ್ಟಾಚಾರದ ಬಗ್ಗೆ ಸುದ್ದಿಗೆ ಪತ್ರ ಬರೆದ ವಿದ್ಯಾರ್ಥಿಯ ತಂದೆಯ ಸ್ಪಷ್ಟನೆ

ನಾನು ಹರಿಪ್ರಸಾದ್, ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದ ಬಾಲಕನ ತಂದೆ

ಈ ಮೊದಲು ನನ್ನ ಮಗ ಸುದ್ದಿ ಪತ್ರಿಕೆಗೆ ಪತ್ರ ಬರೆದಿದ್ದು, ಈಗ್ಗೆ ಪ್ರಕಟಗೊಂಡಿರುತ್ತದೆ. ಇದರಲ್ಲಿ ನನ್ನ ಪಾತ್ರ ಇಲ್ಲ. ಈ ಪತ್ರವನ್ನು ನನ್ನ ಮಗ ಬರೆದಿರುತ್ತಾನೆ.

ಇದಕ್ಕೆ ಮೊದಲು ಅವನು ಪೈಲಾರು ಶಾಲೆಯಲ್ಲಿ ಓದುತ್ತಿದ್ದಾಗ ಇದೇ ಭ್ರಷ್ಟಾಚಾರದ ಬಗ್ಗೆ ಸುದ್ದಿ ಬಿಡುಗಡೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ. ಆಗ ಪ್ರಬಂಧದಲ್ಲಿ ಮಲಾಲ, ಗ್ರೇಟಾ ತನ್ಬೆರ್ಗ್ ರಂತಹ ಬಾಲ ಕ್ರಾಂತಿಕಾರಿಗಳ ಬಗ್ಗೆಯೂ ಬರೆದಿದ್ದ. ಸುದ್ದಿ ಬಿಡುಗಡೆಯ ಈ ಪ್ರಬಂಧ ಸ್ಪರ್ಧೆ ಮತ್ತು ಎಲ್ಲೆಲ್ಲೂ ಕಾಣಸಿಗುವ ಸುದ್ದಿ ಬಿಡುಗಡೆಯ ಭ್ರಷ್ಟಾಚಾರದ ವಿರುದ್ಧದ ಸಣ್ಣ ಸಣ್ಣ ಬ್ಯಾನರ್ ಗಳೂ ಅವನಿಗೆ ಪ್ರೇರಣೆ ನೀಡಿರಬಹುದು.

ಅವನು ಹಾಗೂ ಅವನ ಸಹೋದರ ಪತ್ರಗಳ ಮೂಲಕ ಸಂಭಾಷಣೆ ನಡೆಸುವುದು ಸಾಮಾನ್ಯವಾಗಿದ್ದು, ಪತ್ರ ಬರೆಯುವುದು ಅವನ ಒಂದು ಹವ್ಯಾಸ…

ಇನ್ನು ದೇವಚಳ್ಳ ಶಾಲೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ, ನೀವು SDMC ಯವರು ಈಗಾಗಲೇ ಸ್ವಯಂ ವಿವರಣಾತ್ಮಕವಾಗಿ ಸುದ್ದಿಯಲ್ಲಿ ಹೇಳಿಕೆ ಕೊಟ್ಟಿರುವುದರಿಂದ ನಾನು ಯಾವುದೇ ರೀತಿಯ ಹೇಳಿಕೆ ಕೊಡುವ ಅವಶ್ಯಕತೆ ಇರುವುದಿಲ್ಲ..

ಈ ವಾತಾವರಣದಿಂದ ಬದಲಾವಣೆ ಪಡೆಯಲು ನಾನು 2020ನೇ ವರ್ಷದಲ್ಲಿ ನನ್ನ ಮಕ್ಕಳನ್ನು ಆ ಶಾಲೆಯಿಂದ ತೆಗೆದು ಬೇರೆ ಶಾಲೆಗೆ ಹಾಕಿದ್ದು, ಪ್ರಸ್ತುತ ನನಗೂ ಶಾಲೆಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ ಮತ್ತು ಅಲ್ಲಿ 2020ರ ನಂತರ ನಡೆದ ಘಟನೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರುವುದಿಲ್ಲ. ವೈಯಕ್ತಿಕವಾಗಿ ನನಗೆ ಶಾಲೆಯ ಶಿಕ್ಷಕರ ಬಗ್ಗೆ ಯಾವುದೇ ದ್ವೇಷಗಳಿಲ್ಲ ಹಾಗೂ ಎಲ್ಲಾ ಪೋಷಕರ ಮೇಲೆ ಪ್ರೀತಿ ಅಭಿಮಾನದ ಹೊರತು ಬೇರೇನಿಲ್ಲ ..

ಆದರೆ, ನಾನು ಆ ಮಾತನ್ನು ಆಡು ಭಾಷೆಯಲ್ಲಿ ಮಗನಿಗೆ ಹೇಳಿದ್ದು ಹೌದು. 1 ಲಕ್ಷಕ್ಕೆ ಯಾರೂ ಬರ್ಲಿಲ್ಲ- ಇನ್ನು 500/- ಕ್ಕೆ ಯಾರಾದ್ರೂ ಬರುತ್ತಾರಾ ಎಂದು… ಭ್ರಷ್ಟಾಚಾರದ ಬಗ್ಗೆ ಮಾತು ಬರುವಾಗ ನಮ್ಮ ಸುತ್ತಮುತ್ತಲಿನ, ಹತ್ತಿರದ, ಸುಲಭವಾಗಿ ಅರ್ಥವಾಗುವ ವಿಷಯ ಎಲ್ಲರೂ ರೆಫರ್ ಮಾಡುವಂತೆ, ನಾನೂ ಮಾಡಿದ್ದೆ.

ಇನ್ನು ಈ ಘಟನೆಗಳ ಬಗ್ಗೆ ಯಾವುದೇ ರೀತಿಯ ಚರ್ಚೆ ಮಾಡಲು ಇಚ್ಛೆ ಪಡುವುದಿಲ್ಲ..

ಎಲ್ಲರಂತೆ, ‘ ಒಬ್ಬ ಸೈನಿಕ ಅಥವಾ ಕ್ರಾಂತಿಕಾರಿ ಪಕ್ಕದ ಮನೆಯಲ್ಲೇ ಹುಟ್ಟಲಿ – ನಮ್ಮ ಮಗ ಇಂಜಿನಿಯರ್/ಡಾಕ್ಟರ್ ಅದ್ರೆ ಸಾಕು’ ಎಂದುಕೊಳ್ಳುವ ಸಾಮಾನ್ಯ ನಾನು. ಈ ಗಲಾಟೆಗಳಿಂದ ನನ್ನನ್ನು ಹಾಗೂ ನನ್ನ ಮಗನನ್ನು ದೂರ ಇಡಬೇಕಾಗಿ ವಿನಂತಿ. ಓದಿದ ಆದರ್ಶಗಳು ಪುಸ್ತಕಗಳಿಗೆ ಮತ್ತು ಪರೀಕ್ಷೆಗೆ ಸೀಮಿತವಾಗುವಂತೆ ನನ್ನ ಮಗನನ್ನು ಕೆಲವು ದಿನಗಳಲ್ಲಿ ಮಾರ್ಪಾಡು ಮಾಡಿ ಈ ರೀತಿಯ ದುಸ್ಸಾಹಸ ಮಾಡದಂತೆ ತಡೆಯುತ್ತೇನೆ ಎಂದು ಈ ಮೂಲಕ ಹೇಳಿಕೊಳ್ಳುತ್ತೇವೆ .

ಈ ಹೇಳಿಕೆಯು ಮೇಲೆ ನಡೆದ ಘಟನೆಯ ಬಗ್ಗೆ ಹಾಗೂ ಶಾಲಾ SDMC ಮೀಟಿಂಗ್ ನ ಹಾಗೂ ಸಮಾಜದ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಮೊದಲನೆಯದಾಗಿ ಹಾಗೂ ಕೊನೆಯದಾಗಿ ಕೊಡುತ್ತಿದ್ದೇನೆ..

ಎಲ್ಲರೂ ನಡೆದ್ದದ್ದನ್ನು ಮರೆತು ಮುಂದೆ ಸಾಗೋಣ..
ಹರಿಪ್ರಸಾದ್ ಚಳ್ಳ, ಎಲಿಮಲೆ