ಸುಳ್ಯ ನಗರದಲ್ಲಿ 50 ವಾರ ಪೂರೈಸಿದ ಸ್ವಚ್ಛತಾ ಅಭಿಯಾನ: ಪ್ರತಿ ವಾರದ ಒಂದು ಗಂಟೆ ಸ್ವಚ್ಛತೆಗಾಗಿ ಮೀಸಲು

0

ಸುಳ್ಯ ನಗರದಲ್ಲಿ ಸ್ವಚ್ಚತೆ ಕಾಪಾಡಬೇಕು ಎಂಬ ದೃಷ್ಟಿಯಲ್ಲಿ ನಗರ ಪಂಚಾಯತ್ ಮತ್ತು ಅಮರ ಸುಳ್ಯ ರಮಣೀಯ ಸುಳ್ಯ ತಂಡದ ನೇತೃತ್ವದಲ್ಲಿ ಸುಳ್ಯ ನಗರದಲ್ಲಿ ನಡೆಸುತ್ತಿರುವ‌ ಸ್ವಚ್ಛತಾ ಅಭಿಯಾನ ಮತ್ತು ಸ್ವಚ್ಛತಾ ಅರಿವು ಕಾರ್ಯಕ್ರಮ 50 ವಾರ ಪೂರೈಸಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ‌ ಆರಂಭಗೊಂಡ ಅಭಿಯಾನ ನಿರಂತರ ಮುಂದುವರಿದು ಅರ್ಧ ಶತಕ ಪೂರೈಸಿದೆ.

ವಾರದ ಪ್ರತಿ ಗುರುವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ತನಕ ಒಂದು ಗಂಟೆ ಸ್ವಚ್ಛತಾ ಕಾರ್ಯಕ್ಕಾಗಿ ಮೀಸಲಿಡಲಾಗುತ್ತದೆ. ನಗರ ಪಂಚಾಯತ್ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು, ಅಮರ‌ ಸುಳ್ಯ ರಮಣೀಯ ತಂಡದ ಸದಸ್ಯರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಗರದ ಒಂದೊಂದು ಭಾಗವನ್ನು ಗುರುತಿಸಿ, ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಫೆ.15ರಂದು ನಡೆದ 50ನೇ ವಾರದ ಸ್ವಚ್ಛತಾ ಅಭಿಯಾನ ವಿವೇಕಾನಂದ‌ ವೃತ್ತದ ಬಳಿಯಿಂದ ಕೆವಿಜಿ ಕ್ಯಾಂಪಸ್ ತನಕ ನಡೆಯಿತು. ವಿವೇಕಾನಂದ‌ ವೃತ್ತದಿಂದ‌‌ ಮೆಸ್ಕಾಂ ಕಚೇರಿ ಬಳಿಯಾಗಿ ತೆರಳುವ ಮತ್ತು ಕೆವಿಜಿ ಆಯುರ್ವೇದ ಕಾಲೇಜಿನ ಬಳಿಯಲ್ಲಿ ಸಾಗಿ ಕ್ಯಾಂಪಸ್‌ ಸಂಪರ್ಕಿಸುವ ಎರಡೂ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕೆವಿಜಿ ಇಂಜನಿಯರಿಂಗ್ ಕಾಲೇಜು ಹಾಗೂ ಕೆ.ವಿ.ಜಿ.‌ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಕರಿಸಿದರು.