ಸಂಪಾಜೆ: ಜೇಡ್ಲ ಗೋಶಾಲೆಯಲ್ಲಿ 2ನೇ ವರ್ಷದ ಗೋ ಅಪ್ಪುಗೆ ವಿನೂತನ ಕಾರ್ಯಕ್ರಮ

0

ಶ್ರೀಮಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ, ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ, ಮುಳ್ಳೇರಿಯಾ ಮಂಡಲ ಅಂತರ್ಗತ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರ ಮಂಗಲ ವಲಯಗಳ ಸಂಯುಕ್ತ ಆಶ್ರಯದಲ್ಲಿ ಗೋಪಾಲಕೃಷ್ಣ ದೇವಕಿ ಪಶುಸಂಗೋಪನ ಕೇಂದ್ರ, ಜೇಡ್ಲ , ಸಂಪಾಜೆ ಇಲ್ಲಿ ಎರಡನೇ ವರ್ಷದ ಗೋ ಅಪ್ಪುಗೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಂಪಾಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದಂತಹ ಕಾರ್ಯಕ್ರಮದಲ್ಲಿ ಮೊದಲಿಗೆ ಗೋಪೂಜೆಯನ್ನು ಮಕ್ಕಳು ಹಾಗೂ ಶಿಕ್ಷಕರು ನೆರೆದಿದ್ದಂತಹ ಸಭಿಕರೊಂದಿಗೆ ನೆರವೇರಿಸಿದರು. ನಂತರ ಗೋ ಮಾತೆಯನ್ನು ಅಪ್ಪುವ ಮೂಲಕ ಗೋವಿನ ಮಹತ್ವವನ್ನು ತಿಳಿದುಕೊಂಡರು. ಇದರೊಂದಿಗೆ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಪಾಜೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದಂತಹ ಲಕ್ಮಯ್ಯ ನಾಯಕ್ ಹಾಗೂ ಕಾಲೇಜಿನ ಸಂಚಾಲಕರಾದ ಎಂ ಎನ್ ಭಟ್ ರವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶ್ರೀರಾಮಚಂದ್ರಪುರ ಮಠದ ಮಾತೃತ್ವಂ ಸಂಸ್ಥೆಯಿಂದ ಕೊಡ ಮಾಡಲಾದಂತಹ 80 ಚೀಲ ಗೋ ಆಹಾರವನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೇಡ್ಲ ಗೋಶಾಲೆಯ ಅಧ್ಯಕ್ಷರಾದ ಡಾ. ರಾಜಾರಾಮ್ ರವರು ಮಾತನಾಡಿ ಗೋವಿನ ಮಹತ್ವವನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊಡಗಿನ ಎನ್.ಐ.ಎಂ.ಎ ವತಿಯಿಂದ ಡಾಕ್ಟರ್ ನಿತಿನ್ ಉಚಿತ ಆರೋಗ್ಯ ಸಲಹಾ ಶಿಬಿರ ನಡೆಸಿಕೊಟ್ಟರು. 50ಕ್ಕೂ ಹೆಚ್ಚು ಮಂದಿ ಗೋ ಅಪ್ಪುಗೆಯ ಅನುಭವವನ್ನು ಪಡೆದುಕೊಂಡರು. ಕಾರ್ಯಕ್ರಮ ಜೇಡ್ಲ ಗೋಶಾಲೆಯ ಖಜಾಂಚಿ ಈಶ್ವರ ಕುಮಾರ ಭಟ್ ರವರ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಾಮ ಮುರಳಿ ಕೃಷ್ಣ ಪಲಿಂಗುಲಿ ರವರು ನಡೆಸಿದರು. ಮುಳ್ಳೇರಿಯಾ ಮಂಡಲದ ಉಪಾಧ್ಯಕ್ಷರಾದಂತಹ ನಾರಾಯಣ ಮೂರ್ತಿ ಕೆ.ಆರ್, ಕೊಡಗು ವಲಯದ ಕಾರ್ಯದರ್ಶಿ ಮಡಿಕೇರಿಯ ಶ್ರೀಪತಿ ಸಿ.ಕೆ, ನಾಗರಾಜ್, ಉದಯಕುಮಾರ್, ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಮಾತೃತ್ವಂ ಸದಸ್ಯೆಯರು,ಸಾರ್ವಜನಿಕರು ಹಾಗೂ ನಾಲ್ಕು ವಲಯದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.