ಅರಂತೋಡು ಗ್ರಾ.ಪಂ. ಸಾಮಾನ್ಯ ಸಭೆ

0

ಏಕ ನಿವೇಶನ ಅನುಮೋದನೆ ಕುರಿತು ವಿಸ್ತೃತ ಚರ್ಚೆ


ಅರಂತೋಡು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಫೆ.14ರಂದು ಗ್ರಾ.ಪಂ. ಸಭಾಭವನದಲ್ಲಿ ಜರುಗಿತು. ಸಭೆಯಲ್ಲಿ ವಿಶೇಷವಾಗಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆಯ ಆಧೀನ ಕಾರ್ಯದರ್ಶಿಯವರು ಹೋರಡಿಸಿದ ಆದೇಶದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ನಿವೇಶನ ಅನುಮೋದನೆಯನ್ನು ನೀಡುವುದನ್ನು ತಡೆಹಿಡಿಯಲಾದ ಕುರಿತು ಚರ್ಚಿಸಲಾಯಿತು.
ಕಳೆದ ಜನವರಿ ತಿಂಗಳ 9ರ ಬಳಿಕ ಗ್ರಾಮ ಪಂಚಾಯಿತಿಯಲ್ಲಿ ಸ್ವೀಕೃತವಾದ ಎಲ್ಲಾ ನಮೂನೆಯ ನಮೂನೆ 9&11 ಅರ್ಜಿಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟೀಕರಣ ಕೋರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್ ಅಳವಡಿಸುವವರು ಕಡ್ಡಾಯವಾಗಿ ಬ್ಯಾನರ್ ಗಳನ್ನು ಅಳವಡಿಸುವ ಜಾಗದ ಕುರಿತು ನಿಖರ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ನೀಡುವುದು ಮತ್ತು ಗ್ರಾಮ ಪಂಚಾಯಿತಿನಿಂದ ಅನುಮತಿಯನ್ನು ಪಡೆದಿರುವ ಅವಧಿಯ ಮಾಹಿತಿಯನ್ನು ಬ್ಯಾನರ್ ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವುದು ಮತ್ತು ಬ್ಯಾನರ್ಗಳಿಗೆ ಹಾನಿಯಾದರೆ ಬ್ಯಾನರ್ ಅಳವಡಿಸಿದವರೇ, ಜವಾಬ್ದಾರರು ಎಂಬ ನಿಬಂಧನೆ ವಿಧಿಸಿ ಅನುಮತಿಯನ್ನು ನೀಡಲು ಸಭೆ ಸರ್ವಾನುಮತದಿಂದ ನಿರ್ಣಯಿಸಿತು.


ಸಭೆಯಲ್ಲಿ ಅರಂತೋಡು, ತೋಡಿಕಾನ ಅವಳಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭವಾನಿ ಸಿ.ಎ., ಸದಸ್ಯರಾದ ಶ್ರೀಮತಿ ಹರಿಣಿ ದೇರಾಜೆ, ಶ್ವೇತಾ ಅರಮನೆಗಯ, ಶ್ರೀಮತಿ ಮಾಲಿನಿ ವಿನೋದ್ ಉಳುವಾರು, ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಶ್ರೀಮತಿ ಸರಸ್ವತಿ ಬಿಳಿಯಾರು, ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ರವೀಂದ್ರ ಪಂಜಿಕೋಡಿ, ಗಂಗಾಧರ ಗುಡ್ಲಂಬನ, ಪುಷ್ಪಾಧರ ಕೊಡಂಕಿರಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಆರ್. ಸ್ವಾಗತಿಸಿ, ಸರಕಾರದ ಸುತ್ತೋಲೆಗಳನ್ನು ಮಂಡಿಸಿ, ವಂದಿಸಿದರು.