ಸುಳ್ಯ : ಮುರಿದು ಬಿದ್ದ ಚರಂಡಿ ಸ್ಲ್ಯಾಬ್

0

ಅಪಾಯ ತಪ್ಪಿಸಲು ಬೊಂಡದ ಚಿಪ್ಪನ್ನು ಗೋಣಿಯಲ್ಲಿ ತುಂಬಿಸಿಟ್ಟ ಸ್ಥಳೀಯರು

ಶಾಶ್ವತ ಪರಿಹಾರಕ್ಕಾಗಿ ಸಾರ್ವಜನಿಕರ ಆಗ್ರಹ

ಮುರಿದು ಹೋದ ಚರಂಡಿ ಸ್ಲಾಬಿನಿಂದ ಸಾರ್ವಜನಿಕರ ಜೀವ ರಕ್ಷಣೆಗಾಗಿ ಬೊಂಡದ ಚಿಪ್ಪು ತುಂಬಿದ ಚೀಲವನ್ನು ಆಶ್ರಯಿಸಿದ ದೃಶ್ಯ ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ಕಂಡು ಬಂದಿದೆ.

ಕಳೆದ ಹಲವಾರು ತಿಂಗಳುಗಳಿಂದ ಬಸ್ ನಿಲ್ದಾಣದ ಮುಂಭಾಗ ಗಣೇಶ್ ಕಾಂಪ್ಲೆಕ್ಸ್ ಬಳಿ ಚರಂಡಿಯ ಸ್ಲಾಬ್ ಕಲ್ಲು ಮುರಿದು ಬಿದ್ದು ಇದರಿಂದ ನಾನಾ ರೀತಿಯ ಅವಘಡಕ್ಕೆ ಕಾರಣವಾಗುತ್ತಿದೆ.

ಈ ಬಗ್ಗೆ ಸುದ್ದಿ ಪತ್ರಿಕೆ ಮತ್ತು ವೆಬ್ಸೈಟ್ ಗಳಲ್ಲಿ ಬೇಕಾದಷ್ಟು ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟವರ ಗಮನಕ್ಕೂ ತರಲಾಗಿದೆ. ಆದರೆ ಇಲಾಖೆಯವರು ಆ ಕ್ಷಣದಲ್ಲಿ ಮಾತ್ರ ಅಲ್ಲಿಗೆ ಧಾವಿಸಿ ಕೇವಲ ತಾತ್ಕಾಲಿಕ ಸ್ಥಿತಿಯಲ್ಲಿ ದುರಸ್ತಿಪಡಿಸಿ ಹೋಗುವುದಲ್ಲದೆ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಇದುವರೆಗೆ ವಿಫಲರಾಗಿದ್ದಾರೆ.

ಇದೀಗ ದಿನ ಕಳೆಯುತ್ತಿದ್ದಂತೇ ಹೊಂಡದ ಗಾತ್ರವು ಬೃಹತಾಕಾರವನ್ನು ಪಡೆಯುತ್ತಿದ್ದು ಇಲ್ಲಿ ನಡೆದಾಡುವ ವಿದ್ಯಾರ್ಥಿಗಳು ಮತ್ತು ಪಾದಾಚಾರಿಗಳ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಕಂಡುಬರುತ್ತಿದೆ. ಆದ್ದರಿಂದ ಸಾರ್ವಜನಿಕರ ರಕ್ಷಣೆಗಾಗಿ ಸ್ಥಳೀಯರು ಈ ಗುಂಡಿಗೆ ಬೊಂಡದ ಚಿಪ್ಪನ್ನು ತುಂಬಿದ ಚೀಲವನ್ನು ಇಟ್ಟು ಮುಂದೆ ಉಂಟಾಗುವ ಅಪಾಯವನ್ನು ತಪ್ಪಿಸಲು ಪ್ರಯತ್ನಪಟ್ಟಿದ್ದಾರೆ. ಇನ್ನಾದರೂ ಸಂಬಂಧ ಪಟ್ಟವರು ಎಚ್ಚೆತ್ತು ಸೂಕ್ತ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.