ಕಾಡುಹಂದಿ ತಿವಿದು ಕಚ್ಚಿ ಟ್ಯಾಪರ್ ಮಹಿಳೆಗೆ ತೀವ್ರ ಜಖಂ

0

ಟ್ಯಾಪಿಂಗ್ ಮಾಡಲು ರಬ್ಬರ್ ತೋಟಕ್ಕೆ ಹೋಗಿದ್ದ ಮಹಿಳೆಗೆ ಕಾಡುಹಂದಿ ತಿವಿದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ದುಗಲಡ್ಕ ಕೂಟೇಲಿನಿಂದ ವರದಿಯಾಗಿದೆ.


ಕೂಟೇಲು ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಇಂದು ಮುಂಜಾನೆ ದುಗಲಡ್ಕ ಸೆಕ್ಷನಿ‌ನ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ಧಾಳಿ ನಡೆಸಿತೆನ್ನಲಾಗಿದೆ. ಓಡಿದ ಮಹಿಳೆಯನ್ನು ಬೆನ್ನಟ್ಟಿದ ಕಾಡುಹಂದಿ ಅವರು ಬಿದ್ದಾಗ ಬೆನ್ನು ಮತ್ತಿತರೆಡೆಗೆ ಕಚ್ಚಿ ತೀವ್ರ ಗಾಯಗೊಳಿಸಿತೆಂದು ತಿಳಿದುಬಂದಿದೆ.


ವಿಷಯ ತಿಳಿದ ಇತರ ಟ್ಯಾಪರ್ ಗಳು ಕೆ.ಎಫ್.ಡಿ.ಸಿ. ಅಧಿಕಾರಿಗಳಿಗೆ ತಿಳಿಸಿದ ಕೂಡಲೇ ಅವರು ವಾಹನ ತಂದು, ನಿಗಮದ ಸಿಬ್ಬಂದಿ ಮತ್ತು ಊರವರು, ಬಂಧುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.


ರಬ್ಬರ್ ತೋಟದಲ್ಲಿರುವ ಪೊದರು ಕಾಡನ್ನು ಕಡಿಯುವ ವ್ಯವಸ್ಥೆ ಮಾಡದಿರುವುದರಿಂದ ಕಾಡುಹಂದಿ ಪೊದರಿನಲ್ಲಿ ಕುಳಿತಿತ್ತೆಂದು ಹೇಳಲಾಗುತ್ತಿದೆ.