ಲೋಕಸಭಾ ಚುನಾವಣೆ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಸುಳ್ಯ ನಗರ ವ್ಯಾಪ್ತಿಯಲ್ಲಿ ಬೈಕ್ ರ್‍ಯಾಲಿ

0

ಸಹಾಯಕ ಚುನಾವಣಾಧಿಕಾರಿ ಜಗದೀಶ್ ಡಿ.ನಾಯಕ್ ರವರಿಂದ ಪ್ರತಿಜ್ಞಾ ಭೋದನೆ

ಬೀದಿ ನಾಟಕ ಮೂಲಕ ಮತದಾನ ಜಾಗೃತಿ ಮೂಡಿಸಿದ ನೇಸರ ಕಲಾ ತಂಡ

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದ.ಕ ಜಿಲ್ಲಾಡಳಿತ , ತಾಲೂಕು ಪಂಚಾಯತ್ ಸುಳ್ಯ ,ನಗರ ಪಂಚಾಯತ್ ಸುಳ್ಯ ಇದರ ವತಿಯಿಂದ ಮತದಾನ ಜಾಗೃತಿ ಕುರಿತು ಸ್ವೀಪ್ ಕಾರ್ಯಕ್ರಮದಡಿ ಸುಳ್ಯ ನಗರ ವ್ಯಾಪ್ತಿಯಲ್ಲಿ ಮಾ.೦೫ರಂದು ಬೈಕ್ ರ್‍ಯಾಲಿ ಹಾಗೂ ಮತದಾನ ಜಾಗೃತಿ ಕುರಿತು ಬೀದಿ ನಾಟಕ ಕಾರ್ಯಕ್ರಮ ನಡೆಯಿತು. ಬೈಕ್ ರ್‍ಯಾಲಿ ಶ್ರೀ ಚೆನ್ನಕೇಶವ ದೇವಸ್ಥಾನ ವಠಾರದಿಂದ ಆರಂಭಗೊಂಡು ಕೆವಿಜಿ ಸರ್ಕಲ್ ಮೂಲಕ ವಿವೇಕಾನಂದ ಸರ್ಕಲ್ ,ಶ್ರೀ ರಾಮ್ ಪೇಟೆ ,ಜ್ಯೋತಿವೃತ್ತ , ಹಳೆಗೇಟು ಪೈಚಾರ್ ಮೂಲಕ ಸಾಗಿ ಗಾಂಧಿನಗರ ಪೆಟ್ರೋಲ್ ಬಂಕ್‌ಬಳಿ ತೆರಳಿ ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ವಠಾರದಲ್ಲಿ ಸಮಾಪ್ತಿಗೊಂಡಿತು. ಸುಳ್ಯ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಜಗದೀಶ್ ಡಿ ನಾಯಕ್ ರ್‍ಯಾಲಿಗೆ ಚಾಲನೆ ನೀಡಿದರು.

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ವಠಾರದಲ್ಲಿ ಮತದಾರರ ಜಾಗೃತಿ ಕುರಿತು ನೇಸರ ಕಲಾ ತಂಡ ಮೆಟ್ಟಿನಡ್ಕ ಇವರಿಂದ ಬೀದಿ ನಾಟಕ ಮತ್ತು ಮತದಾನ ಜಾಗೃತಿ ಕುರಿತ ಜಾನಪದ ಗೀತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಜಗದೀಶ್ ಡಿ ನಾಯಕ್ ಮತದಾನ ಪ್ರತಿಯೊಬ್ಬ ಪ್ರಜೇಯ ಹಕ್ಕು , ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯು ಮತದಾನದ ಹಕ್ಕನ್ನು ಚಲಾಯಿಸುವುದು ಮುಖ್ಯವಾಗಿದೆ. ಇದೇಬರುವ ಲೋಕಸಭಾ ಚುನಾವಣೆ ಎ,.೨೬ ರಂದು ನಡೆಯಲಿದ್ದು ಎಲ್ಲರೂ ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುವ ಮೂಲಕ ಈ ಬಾರಿ ಶೇಕಡಾ ೧೦೦ರ ಫಲಿತಾಂಶವನ್ನು ನೀಡಿ ಇತಿಹಾಸಸೃಷ್ಟಿಸಬೇಕಾಗಿದೆ ಎಂದು ಕರೆ ನೀಡಿದರು. ಬಳಿಕ ಪರಿಸರದಲ್ಲಿ ಸೇರಿದ್ದ ನೂರಾರು ಮಂದಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.


ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್ ಜಿ , ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ , ಸುಳ್ಯ ಪೋಲಿಸ್ ವೃತ್ತ ನಿರೀಕ್ಷಕ ಸತ್ಯನಾರಾಯಣ್ , ಸುಳ್ಯ ಪೋಲಿಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು, ಜಿಲ್ಲಾ ಪಂಚಾಯತ್ ಇಲಾಖಾಧಿಕಾರಿ ರುಕ್ಕು , ಅಧಿಕಾರಿಗಳಾದ ಅವಿನ್ ರಂಗತಮಲೆ, ದೇವರಾಜ್ ಮುತ್ಲಾಜೆ, ತಿಪ್ಪೇಶ್ , ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಉಮಾದೇವಿ, ಹಾಗೂ ವಿವಿಧ ಇಲಾಖೆಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನೇಸರತಂಡದ ಕಲಾವಿದರಾದ ರಮೇಶ್ ಮೆಟ್ಟಿನಡ್ಕ , ರವಿ ಎಮ್ ಪೆರ್ಲಂಪ್ಪಾಡಿ, ಶ್ರೀಮತಿ ನೀಲಾವತಿ ಮೊಗ್ರ, ದರ್ಶನ್ ಮೆಟ್ಟಿನಡ್ಕ , ಮತದಾನ ಜಾಗೃತಿ ಗಾಯನವನ್ನು ಮಾಡಿದರು. ತಾಲೂಕು ಪಂಚಾಯತ್ ಸಿಇಒ ಪರಮೇಶ್ ಸ್ವಾಗತಿಸಿ,ಸುಳ್ಯ ನ.ಪಂ.ಮುಖ್ಯ ಅಧಿಕಾರಿ ಬಿ.ಎಮ್.ಡಾಂಗೆ ವಂದಿಸಿದರು.