5 ತಿಂಗಳಿನಿಂದ‌ ಅಂಗವಿಕಲ ವೇತನ ಬಂದಿಲ್ಲ

0

2 ತಿಂಗಳಿನಿಂದ ಚಿಕಿತ್ಸೆಗೆ ಹೋಗಲು ಸಾಧ್ಯವಾಗಿಲ್ಲ

ಅಂಗವಿಕಲನ ಕೂಗಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕಿದೆ

5 ತಿಂಗಳಿನಿಂದ ಅಂಗವಿಕಲ ವೇತನ ಬರುತ್ತಿಲ್ಲ. 2 ತಿಂಗಳಿನಿಂದ ಚಿಕಿತ್ಸೆಗೆ ಹೋಗಿಲ್ಲ. ನನ್ನ ದೇಹಕ್ಕೆ ಹಾಕಿದ ಪೈಪ್ ಚೇಂಜ್ ಮಾಡಲಿಕ್ಕಿದೆ. ಹಣ ಎಜೆಸ್ಟ್ ಮಾಡದೇ ಹೋಗಲು ಸಾಧ್ಯವಾಗಲಿಲ್ಲ. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ.

ಇದು ಪ್ರತಿ ತಿಂಗಳು‌ ತನಗೆ ಬರುತ್ತಿದ್ದ ಅಂಗವಿಕಲ ವೇತನ 5 ತಿಂಗಳಿನಿಂದ ಬಾರದೇ, ಚಿಕಿತ್ಸೆಯು ಪಡೆಯದೇ ನೋವು ನುಂಗಿ ಕುಳಿತಿರುವ ಅಂಗವಿಕಲರೊಬ್ಬರ ನೋವಿನ ಮಾತು.

ನೆಲ್ಲೂರು ಕೆಮ್ರಾಜೆ ಗ್ರಾಮದ ಮುಂಡೋಕಜೆ ಆನಂದ ನಾಯ್ಕ ಎಂಬವರು ಅಡಿಕೆ ಮರದಿಂದ ಬಿದ್ದು ಅಂಗವಿಕಲರಾಗಿ ಮಲಗಿದಲ್ಲಿಯೇ ದಿನ ಕಳೆಯುತ್ತಿದ್ದಾರೆ. ಇವರಿಗೆ ಕಳೆದ ಹಲವು ಸಮಯಗಳಿಂದ ಅಂಗವಿಕಲ ವೇತನ ಬರುತ್ತಿತ್ತು. ದುಡಿಮೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ಇವರು ಹಾಸಿಗೆ ಹಿಡಿದ ದಿನದಿಂದ ಇವರ ಕುಟುಂಬ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೀಡಾಯಿತು. ಆನಂದರವರಿಗೆ ಪ್ರತೀ ತಿಂಗಳು ಚಿಕಿತ್ಸೆ ಆಗಬೇಕಿರುವುದರಿಂದ ಸರಕಾರದಿಂದ ಸಿಗುವ ಅಂಗವಿಕಲ ವೇತನ ಇವರ ಬದುಕಿಗೆ ನೆರವಾಗುತ್ತಿತ್ತು. ಆದರೆ ಕಳೆದ 5 ತಿಂಗಳಿನಿಂದ ಇವರಿಗೆ ಅಂಗವಿಕಲ ವೇತನ ಬರುತ್ತಿಲ್ಲ. ಹೀಗಾಗಿ 2 ತಿಂಗಳಿನಿಂದ‌ ಚಿಕಿತ್ಸೆಗೂ ಹೋಗಿಲ್ಲ ಎಂದು ಇವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.