ಜೀರ್ಮುಖಿ ಬಳಿ ಕಾರಿನಿಂದ ಬಿದ್ದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್

0

ಹಿಂತಿರುಗಿ ಬಂದು ನೋಡುವಾಗ ನಾಪತ್ತೆ – ಬೈಕ್ ಸವಾರ ಹೆಕ್ಕಿ ಕೊಂಡೊಯ್ಯುವುದು ಸಿ.ಸಿ.ಟಿ.ವಿ. ದೃಶ್ಯಾವಳಿಯಲ್ಲಿ ಪತ್ತೆ , ಪೋಲೀಸ್ ದೂರು

ಸುದ್ದಿಯಲ್ಲಿ ವರದಿ – ಸುರಕ್ಷಿತವಾಗಿ ಮರಳಿದ ಚಿನ್ನಾಭರಣ

ಕಾರಿನಲ್ಲಿ ತೆರಳುವಾಗ ರಸ್ತೆಗೆ ಬಿದ್ದು ನಾಪತ್ತೆಯಾಗಿದ್ದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್ ಸುದ್ದಿ ವರದಿಯ ಪರಿಣಾಮವಾಗಿ ವಾಪಸ್ ಬಂದು, ಕಳೆದುಕೊಂಡವರ ಮಡಿಲು ಸೇರಿದ ಘಟನೆ ಎಲಿಮಲೆ ಜೀರ್ಮುಕ್ಕಿಯಿಂದ ವರದಿಯಾಗಿದೆ.
ಸುಳ್ಯದ ಪೈಚಾರಿನಿಂದ ಗುತ್ತಿಗಾರಿಗೆ ಕಾರಲ್ಲಿ ಕುಟುಂಬ ಸಮೇತ ಹೋಗುತ್ತಿದ್ದ ಅಜೀಜ್ ಎಂಬವರ ಪತ್ನಿಯ ನಾಲ್ಕು ಪವನ್ ಚಿನ್ನಾಭರಣ ಮತ್ತು ಒಂಬತ್ತು ಸಾವಿರ ರೂ. ಇದ್ದ ಬ್ಯಾಗ್ ಜೀರ್ಮುಖಿ ಬಳಿ ರಸ್ತೆಗೆ ಬಿದ್ದುಹೋಗಿತ್ತು. ಸ್ವಲ್ಪ ದೂರ ಹೋಗುವಾಗ ಬ್ಯಾಗ್ ಇಲ್ಲದಿರುವ ವಿಚಾರ ಅವರ ಗಮನಕ್ಕೆ ಬಂದು ಕಾರನ್ನು ತಿರುಗಿಸಿ ಹುಡುಕಿಕೊಂಡು ಬಂದರು. ಕಾರಿಂದ ಬ್ಯಾಗ್ ಬಿದ್ದಿರುವುದು ಅವರಿಗೆ ಖಚಿತವಾಗಿತ್ತು. ಆದರೆ ಬ್ಯಾಗ್ ಎಲ್ಲಿಯೂ ಕಾಣಸಿಗಲಿಲ್ಲ. ಅವರು ಜೀರ್ಮುಕ್ಕಿಗೆ ಹೋಗಿದ್ದ ಮನೆಗೂ ಹೋಗಿ ವಿಷಯ ಹೇಳಿಬಂದರು.
ಮರುದಿನ ಎ.14 ರಂದು ಬೆಳಿಗ್ಗೆ ಸಮೀಪದ ಮನೆಗಳ ಸಿ.ಸಿ. ಟಿ.ವಿ. ಫೂಟೇಜ್ ಗಳನ್ನು ಪರಿಶೀಲಿಸಿದಾಗ ಆ ಬ್ಯಾಗ್ ಕಾರಿಂದ ಬಿದ್ದುದು ಮತ್ತು ಆ ದಾರಿಯಾಗಿ ಬಂದ ಬೈಕ್ ಸವಾರರೊಬ್ಬರು ಅದನ್ನು ಹೆಕ್ಕಿಕೊಂಡು ಹೋಗುತ್ತಿರುವುದು ಸಿ.ಸಿ. ಟಿ.ವಿ.ಯಲ್ಲಿ ಕಂಡುಬಂತು. ಆದರೆ ಅವರ ಗುರುತು ಸಿಗುತ್ತಿರಲಿಲ್ಲ. ಅಜೀಜ್ ರವರು ಈ ಬಗ್ಗೆ ಸುಳ್ಯ ಪೋಲೀಸರಿಗೆ ದೂರು ನೀಡಿದ್ದಲ್ಲದೆ, ಸುದ್ದಿ ಕಚೇರಿಗೂ ಬಂದು ವಿಷಯ ತಿಳಿಸಿದರು. ಸುದ್ದಿ ವೆಬ್ ಸೈಟ್ ನಲ್ಲಿ ಈ ವರದಿ ಪ್ರಕಟವಾಯಿತು.

ಎ.14 ರಂದು ಸಂಜೆ ಎಲಿಮಲೆ ಮೂಸಾ ಹಾಜಿಯವರ ಮನೆಗೆ ಅಪರಿಚಿತರೊಬ್ಬರು ಬಂದು ಈ ಬ್ಯಾಗು ಬೇರೊಬ್ಬರಿಗೆ ದೊರಕಿದ್ದು ಅದನ್ನು ತಮ್ಮ ಮನೆಗೆ ನೀಡುವಂತೆ ನನ್ನಲ್ಲಿ ಸೂಚಿಸಿದ ಮೇರೆಗೆ ಇದನ್ನು ನಾನು ತಮಗೆ ಒಪ್ಪಿಸುತ್ತಿದ್ದೇನೆ ಎಂದು ಹೇಳಿ ಬ್ಯಾಗನ್ನು ಕೊಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.

ಬ್ಯಾಗನ್ನು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಬ್ಯಾಗಿನಲ್ಲಿ ಇತ್ತು. ಅವರು ಅಜೀಜ್ ರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಹಾಗೆಯೇ ಬ್ಯಾಗ್ ಮತ್ತು ಅದರಲ್ಲಿದ್ದ ನಗ ನಗದು ಮಾಲಕರ ಮಡಿಲು ಸೇರಿತು.
ಸುದ್ದಿ ವರದಿಯಲ್ಲಿ ಸಿಸಿಟಿವಿಯಲ್ಲಿ ಪತ್ತೆಯಾದ ಫೂಟೇಜನ್ನು ಹಾಕಿ ಪೋಲೀಸ್ ದೂರಾಗಿರುವ ವಿಚಾರ ಪ್ರಕಟಿಸಿದ್ದುದರಿಂದ, ಇನ್ನು ಪೋಲೀಸರು ಬೆನ್ನು ಹಿಡಿಯಬಹುದೆಂಬ ಭಯದಿಂದ ಬೇರೆಯವರ ಮೂಲಕ ಬ್ಯಾಗನ್ನು ತಂದು ನೀಡಿರಬಹುದು ಎಂದು ಊಹಿಸುವಂತಾಗಿದೆ.