ಬಾಯಿ ಅರ್ಬುದ ರೋಗ ( ORAL CANCER )

0
ಬಾಯಿಯ ಒಳಗಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು, ಗಡ್ಡೆಗಳ ರೂಪದಲ್ಲಿ ಬೆಳೆಯುವುದಕ್ಕೆ ಬಾಯಿಯ ಅರ್ಬುದ ರೋಗ ಅಥವಾ ಬಾಯಿಯ ಕ್ಯಾನ್ಸರ್ ಎಂದು ಹೇಳುತ್ತೇವೆ. ಅರ್ಬುದ ರೋಗ ಎನ್ನುವುದು ಒಂದು ವಿಶ್ವವ್ಯಾಪ್ತಿ ಹರಡಿರುವ ಒಂದು ಭೀಕರವಾದ ರೋಗ. ಗಂಡಸರಲ್ಲಿ ಶ್ವಾಸಕೋಶ, ಕರುಳು ಮತ್ತು ಬಾಯಿಯ ಕ್ಯಾನ್ಸರ್ ಹೆಚ್ಚು ಹೆಚ್ಚು ಕಾಣ ಸಿಗುತ್ತದೆ. ಹೆಂಗಸರಲ್ಲಿ ಜನನಾಂಗ, ಎದೆ ಮತ್ತು ಗರ್ಭಕೋಶದ ಕ್ಯಾನ್ಸರ್ ಹೆಚ್ಚು ಕಾಣಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಬಾಕು, ಗುಟ್ಕಾ, ಧೂಮಪಾನ, ಮದ್ಯಪಾನ ಇತ್ಯಾದಿಗಳ ಅಧಿಕ ಉಪಯೋಗದಿಂದಾಗಿ ಬಾಯಿಯ ಅರ್ಬುದ ರೋಗದ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹಿಂದಿನ ಕಾಲದಲ್ಲಿ ಅರ್ಬುದ ರೋಗ ಹೆಚ್ಚಾಗಿ 50 ವರ್ಷ ದಾಡಿದ ಹಿರಿಯ ನಾಗರೀಕರಲ್ಲಿ ಮಾತ್ರ ಕಾಣ ಸಿಗುತ್ತಿತ್ತು. ಆದರೆ ಈಗೀಗ ಯುವ ಜನತೆಯಲ್ಲ್ಲಿ (30 ರಿಂದ 40 ವರ್ಷದ ಜನರು) ಹೆಚ್ಚು ಹೆಚ್ಚು ಅರ್ಬುದ ರೋಗ ಕಾಣಿಸಿಕೊಳ್ಳುತ್ತದೆ. ಇದು ತುಂಬಾ ಆತಂಕಕಾರಿ ವಿಚಾರವಾಗಿದೆ. ಇದಕ್ಕೆ ಕಾರಣ ದಿನನಿತ್ಯ ನಾವು ಹಲವಾರು ಕ್ಯಾನ್ಸರ್ ಜನಕ ಅಂಶಗಳಿಗೆ ಮತ್ತು ವಾತಾವರಣಕ್ಕೆ ನಮ್ಮ ದೇಹವನ್ನು ತೆರೆದಿಡುತ್ತಿರುವುದು ಅಲ್ಲದೆ ಯುವಜನತೆ ಹೆಚ್ಚು ಹೆಚ್ಚು ತಂಬಾಕು, ಧೂಮಪಾನದಂತಹ ದುಶ್ಚಟಗಳಿಗೆ ಮಾರು ಹೋಗುತ್ತಿರುವುದೇ ಮುಖ್ಯ ಕಾರಣ. ಅಭಿವೃದ್ಧಿ ಹೊಂದಿದ  ದೇಶಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಹೆಚ್ಚು ಹೆಚ್ಚು ಜನರು ಅರ್ಬುದ ರೋಗಕ್ಕೆ ಬಲಿಯಾಗುತ್ತಿರುವುದು ತುಂಬಾ ಆತಂಕಕಾರಿಯಾದ ಬೆಳವಣಿಗೆಯಾಗಿದೆ.

ನಮ್ಮ ದೇಶದ ಅನಕ್ಷರತೆ, ಬಡತನ ಮತ್ತು ಮೂಲಸೌಕರ್ಯಗಳ ಕೊರತೆ, ಅಪೌಷ್ಠಿಕತೆ ಇತ್ಯಾದಿಗಳೂ ಕೂಡಾ ಅರ್ಬುದ ರೋಗಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ. ನಮ್ಮ ಭಾರತ ದೇಶದಲ್ಲಿ ಶೇಕಡಾ 22 ಕ್ಕಿಂತಲೂ ಹೆಚ್ಚು ರೋಗಿಗಳು ಬಾಯಿಯ ಅರ್ಬುದ ರೋಗದಿಂದ ನರಳುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನದ ಅಂಕಿ ಅಂಶಗಳ ಪ್ರಕಾರ ನಮ್ಮ ಭಾರತ ದೇಶದಲ್ಲಿ ಬಾಯಿ ಕ್ಯಾನ್ಸರ್ ಇತರ ಕ್ಯಾನ್ಸರ್ ರೋಗವನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿ ದಾಪುಕಾಲು ಇಡುತ್ತಿದೆ ಮತ್ತು ಪ್ರತಿ ವರ್ಷ ಎರಡರಿಂದ ಮೂರುವರೆ ಲಕ್ಷಕ್ಕೂ ಹೆಚ್ಚು ಮಂದಿ ಹೊಸ ಕ್ಯಾನ್ಸರ್ ರೋಗಿಗಳು ಕಂಡು ಬರುತ್ತಿದ್ದಾರೆ. ಬಾಯಿಯ ಅರ್ಬುದ ರೋಗಕ್ಕೆ ಚಿಕಿತ್ಸೆ ಪಡೆದು 5 ವರ್ಷಗಳ ಕಾಲ ಸಹಜ ಜೀವನ ನಡೆಸಿದರೆ ಅದನ್ನು ಯಶಸ್ವಿ ಕ್ಯಾನ್ಸರ್ ಎಂದು ಹೇಳಲಾಗುತ್ತದೆ. ಆದರೆ ವಿಷಾದನೀಯ ಅಂಶ ಎಂದರೆ ಶೇಕಡಾ 75 ಕ್ಕಿಂತ ಹೆಚ್ಚು ಶೇಕಡಾ ಅರ್ಬುದ ರೋಗಿಗಳು ರೋಗದ ಮೂರನೇ ಹಂತದಲ್ಲಿ ಪತ್ತೆ ಮಾಡಲ್ಪಡುತ್ತದೆ. ಇಂತಹ ರೋಗಿಗಳಲ್ಲಿ ಯಶಸ್ವಿ ಚಿಕಿತ್ಸೆ ನಡೆಸುವುದು ತುಂಬಾ ಕಷ್ಟ ಸಾಧ್ಯ ಪ್ರಾಥಮಿಕ ಹಂತದಲ್ಲಿ ಅರ್ಬುದ ರೋಗವನ್ನು ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಈಗಿನ ಅಂಕಿ ಅಂಶಗಳ ಪ್ರಕಾರ ಈ ರೀತಿ ಯಶಸ್ವಿ ಚಿಕಿತ್ಸೆಯಿಂದ ಬಲಿಯಾಗುವವರ ಸಂಖ್ಯೆ ಶೇಕಡ 40 ಕ್ಕಿಂತಲೂ ಕಡಿಮೆ. ಅರ್ಬುದ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಶೀಘ್ರವಾಗಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಕ್ಯಾನ್ಸರ್ ರೋಗಕ್ಕೆ ಸರಿಯಾಗಿ ಚಿಕಿತ್ಸೆ ನೀಡಬಹುದು. ಆದರೆ ರೋಗಿಗಳು ಸರಿಯಾದ ಮಾಹಿತಿ ಇಲ್ಲದೆ ಅಜ್ಞಾನ ಮೂಢನಂಬಿಕೆಗಳ ತಪ್ಪು ಮಾಹಿತಿಯಿಂದ ಸರಿಯಾದ ಚಿಕಿತ್ಸೆ ಪಡೆಯದೇ ಕ್ಯಾನ್ಸರ್ ಎನ್ನುವುದು ನಮ್ಮ ಸಮಾಜಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಬಾಯಿಯ ಗಡ್ಡೆಗಳಲ್ಲಿ ಎರಡು ವಿಧಗಳಿವೆ.

  1. ನಿಧಾನವಾಗಿ ಬೆಳೆಯುವ ಗಡ್ಡೆ( Benign Tumour)
  2. ತೀವ್ರವಾಗಿ ಬೆಳೆಯುವ ಗಡ್ಡೆ (Malignant Tumour) ಸಾಮಾನ್ಯವಾಗಿ ತೀವ್ರವಾಗಿ ಬೆಳೆಯುವ ಗಡ್ಡೆಗಳನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ತೀವ್ರವಾಗಿ ಬೆಳೆಯುವ ಗಡ್ಡೆಗಳು ಬಹಳ ಬೇಗನೆ ಬೆಳೆಯುತ್ತದೆ. ಅದಕ್ಕೆ ಯಾವುದೇ ಪರಿಧಿ ಇರುವುದಿಲ್ಲ. (Capsule) ಅದು ತನ್ನ ಹುಟ್ಟಿದ ಭ್ರೂಣದಿಂದ ದೇಹದ ಬೇರೆ ಬೇರೆ ಭಾಗಕ್ಕೆ ಬಹಳ ವೇಗವಾಗಿ ರಕ್ತದ ಮೂಲಕ ಅಥವಾ ಲಿಂಫ್ ಎಂಬ ಕಾಲುವೆಗಳ ಮೂಲಕ ಹರಡುತ್ತದೆ. ಈ ರೀತಿಯ ವೇಗವಾಗಿ ಬೆಳೆಯುವ ಗಡ್ಡೆಗಳಿಗೆ ಮತ್ತು ಅದರಲ್ಲಿರುವ ಜೀವಕಣಗಳಿಗೆ ಅದರ ಮೂಲದ ಸಾಮಾನ್ಯ ಜೀವಕಣಗಳ ಆಕಾರವಿರುವುದಿಲ್ಲ. ಮತ್ತು ಅವುಗಳು ಸಂಪೂರ್ಣ ಜೀವಕಣಗಳಾಗಿ ಬೆಳೆಯುವುದಿಲ್ಲ. ಗಡ್ಡೆಗಳು ಅವುಗಳ ಮೂಲ ಕಣಗಳಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಉದಾಹರಣೆಗೆ ರಕ್ತನಾಳಗಳ ಜೀವಕಣ, ಮಾಂಸಖಂಡಗಳ ಜೀವಕಣ, ಎಲುಬಿನ ಜೀವಕಣ ಅಥವಾ ನರಗಳ ಜೀವಕಣ. ಈ ರೀತಿಯ ಗಡ್ಡೆಗಳನ್ನು ‘Biopsy’ ಎನ್ನುವ ಪರೀಕ್ಷೆ ನಡೆಸಿ ಸೂಕ್ಷ್ಮದರ್ಶಕದ (Microscope) ಮೂಲಕ ನಿರ್ದಿಷ್ಟವಾಗಿ ರೋಗದ ಮೂಲ ಜೀವಕಣಗಳನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
    ನಿಧಾನವಾಗಿ ಬೆಳೆಯುವ ಗಡ್ಡೆಗಳು ಮೆಲ್ಲನೆ ಬೆಳೆಯುತ್ತದೆ ಮತ್ತು ಒಂದು ಪರಿಧಿಯ ಒಳಗೆ ಇರುತ್ತದೆ. ಈ ರೀತಿಯ ಗಡ್ಡೆಗಳು ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆಯೋ, ಅಲ್ಲಿಯೇ ಉಳಿಯುತ್ತದೆ ಮತ್ತು ಶರೀರದ ಬೇರೆ ಅಂಗಗಳಿಗೆ ಹರಡುವುದಿಲ್ಲ. ಜೀವಕಣಗಳು ತಮ್ಮ ಮೂಲ ಜೀವಕಣಗಳನ್ನು ಹೋಲುತ್ತದೆ ಮತ್ತು ತುಂಬಾ ನಿಧಾನವಾಗಿ ಬೆಳೆಯುತ್ತದೆ ಮತ್ತು ಇಂತಹ ಗಡ್ಡೆಗಳಿಂದ ನೋವು ಇರುವುದಿಲ್ಲ ಮತ್ತು ಜೀವಕ್ಕೆ ಅಪಾಯ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.

ಬಾಯಿ ಅರ್ಬುದ ರೊಗಕ್ಕೆ ಕಾರಣಗಳು

  1. ಶರೀರದ ಒಳಗಿನ ಕಾರಣಗಳು
  2. ಅನುವಂಶಿಕತೆ
  3. ಜನಾಂಗೀಯ ಕಾರಣ
  4. ಭೌಗೋಳಿಕ ಕಾರಣಗಳು
  5. ಹೊರಗಿನ ಅಥವಾ ಪರಿಸರದ ಕಾರಣಗಳು
  6. ಧೂಮಪಾನ
  7. ಮದ್ಯಪಾನ
  8. ಗುಟ್ಕಾ ಮುಂತಾದ ತಂಬ್‍ಕು ಉತ್ಪನ್ನಗಳ ಸೇವನೆ
  9. ಕೃತಕ ದಂತ ಪಂಕ್ತಿಗಳ ಅಸಮರ್ಪಕ ಜೋಡಣೆ
  10. ಚೂಪಾದ ಹಲ್ಲಿನ ಭಾಗಗಳಿಂದ ಆಗುವ ನಿರಂತರ ಗಾಯಗಳಿಂದ
  11. ಪರಿಸರ ಮಾಲಿನ್ಯ ಅಥವಾ ಕಲುಷಿತ ಪರಿಸರ ಮಾಲಿನ್ಯ
  12. ಆಹಾರ ಮಾಲಿನ್ಯ
  13. ಅತಿಯಾದ ದಂತ ವಿಕಿರಣ ಅಥವಾ ಪರಿಸರ ವಿಕಿರಣ, ಮಾಲಿನ್ಯ ಇತ್ಯಾದಿ
  14. ಶಿಲೀಂದ್ರ ಅಥವಾ ವೈರಸ್ ಸೋಂಕು

ಬಾಯಿ ಅರ್ಬುದ ರೋಗದ ಚಿಹ್ನೆಗಳು

 ಬಾಯಿ ಅರ್ಬುದ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಸಾಮಾನ್ಯವಾಗಿ ಆರಂಭಿಕದಲ್ಲಿ ಇರುವ ಬಾಯಿ ಅರ್ಬುದ ರೋಗವನ್ನು ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣ ಗುಣಪಡಿಸಬಹುದು. ಆದರೆ ಒಮ್ಮೆ ಅರ್ಬುದ ರೋಗ, ಕುತ್ತಿಗೆಯಲ್ಲಿರುವ Lymphnode  ಗಳಿಗೆ ತಲುಪಿದ ಬಳಿಕ ಅಥವಾ ಮೂಲಕ ಅಂಗಾಂಗಗಳಿಗೆ ತಲುಪಿದಲ್ಲಿ (ರಕ್ತನಾಳದ ಮೂಲಕ ಅಥವಾ Lymph ದ್ರವದ ಮೂಲಕ) ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಅರ್ಬುದ ರೋಗಕ್ಕೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ (Radiotheraphy)  ಮತ್ತು ಕೀಮೋಥೆರಪಿ ಎಂಬ ರೀತಿಯ ಚಿಕಿತ್ಸೆಗಳನ್ನು ಬೇರೆ ಬೇರೆ ರೀತಿಯಲ್ಲಿ ನೀಡಲಾಗುತ್ತದೆ. ಒಟ್ಟಿನಲ್ಲಿ ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು

ಅರ್ಬುದ ರೋಗದ ಚಿಹ್ನೆಗಳು

  1. ಪ್ರಾರಂಭಿಕ ಹಂತದಲ್ಲಿ ಖಾರ ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ.
    2.ಬಾಯಿಯಲ್ಲಿ ಹುಣ್ಣು ಅಥವಾ ಗಾಯ ಆಗುತ್ತದೆ ಮತ್ತು ಗಾಯ ಒಣಗುವುದು ಇಲ್ಲ.
  2. ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.
  3. ವಿಪರೀತ ನೋವು ಇರುತ್ತದೆ ಮತ್ತು ಮಾತ್ರೆ ತಿಂದರೂ ನೋವು ನಿವಾರಣೆ ಆಗುವುದಿಲ್ಲ.
  4. ಬಾಯಿ ತೆರೆಯಲು ಕಷ್ಟವಾಗಬಹುದು ಸಾಮಾನ್ಯವಾಗಿ 50 ಮಿ.ಮಿ ವರೆಗೆ ಒಬ್ಬ ವ್ಯಕ್ತಿ ಬಾಯಿ ತೆರೆಯಲು ಸಾಧ್ಯವಾಗುತ್ತದೆ. ಆದರೆ ಅರ್ಬುದ ರೋಗಿಗಳಲ್ಲಿ 20 ಮಿ.ಮಿ. ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು.
  5. ಮಾತನಾಡುವಾಗ ಮತ್ತು ಪದಾರ್ಥ ಸೇವಿಸುವಾಗ ತೊಂದರೆ ಮತ್ತು ನೋವು ಆಗಬಹುದು.
  6. ಬಾಯಿಯಲ್ಲಿ ಬಿಳಿ ಮತ್ತು ಕೆಂಪು ಕಾಣಿಸಿಕೊಳ್ಳಬಹುದು.
  7. ನಾಲಗೆಯ ಮೇಲೆ ಗುಳ್ಳೆ, ಗಡ್ಡೆ ಅಥವಾ ಹುಣ್ಣು ಕಾಣಿಸಿಕೊಂಡು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು
  8. ಅತಿಯಾದ ಜೊಲ್ಲುರಸ (ಎಂಜಲು) ಬಂದಂತೆ ಅನಿಸಬಹುದು
  9. ಕುತ್ತಿಗೆಯ ಸುತ್ತ ಗಡ್ಡೆ, ಗುಳ್ಳೆ ಬೆಳೆದಂತೆ ಅನಿಸಬಹುದು ಗಡ್ಡೆ ಸುಮಾರು 2 ರಿಂದ 10 ರ ವರೆಗೆ ಇದ್ದು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಆದರೆ ನೋವಿರುವುದಿಲ್ಲ.
    ಸಾಮಾನ್ಯವಾಗಿ ಬಾಯಿ ಅರ್ಬುದ ರೋಗ ಹಿರಿಯ ನಾಗರೀಕರಲ್ಲಿ (50 ರಿಂದ ಮೇಲೆ) ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗೀಗ ತಂಬಾಕು, ಗುಟ್ಕಾ, ಧೂಮಪಾನ ಇತ್ಯಾದಿಗಳ ಅಧಿಕ ಬಳಕೆಯಿಂದಾಗಿ ಯುವಕರಲ್ಲಿ (30 ರಿಂದ 40 ವಯಸ್ಸಿನವರಲ್ಲಿ) ಬಾಯಿ ಅರ್ಬುದ ರೋಗ ಹೆಚ್ಚು ಹೆಚ್ಚು ಕಾಣಿಸತೊಡಗುತ್ತದೆ. ಆದುದರಿಂದ ಮೇಲೆ ತಿಳಿಸಿದ ಯಾವುದಾದರೂ ಲಕ್ಷಣಗಳು ಕಾಣಿಸಿಕೊಂಡಲ್ಲಿ, ತಕ್ಷಣ ದಂತ ವೈದ್ಯರ ಬಳಿ ತೋರಿಸಿಕೊಂಡು ಸರಿಯಾದ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ತೆಗೆದುಕೊಂಡಲ್ಲಿ ಅರ್ಬುದ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದು….Jai Hind

ಡಾ. ಮುರಳೀಮೋಹನ್ ಚೂಂತಾರು