26 ವರ್ಷಗಳ ಬಳಿಕ ಮಂಡೆಕೋಲು ದೇವಸ್ಥಾನದಲ್ಲಿ ಬ್ರಹ್ಮಕಲಶ

0

ಎ.26ರಿಂದ ಆರಂಭ:ಸ್ಮರಣೀಯ ಕಾರ್ಯಕ್ಕೆ ಊರಿಗೆ ಊರೇ ಸಂಭ್ರಮದಲ್ಲಿದೆ

ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಏ.೨೬ರಿಂದ ಮೇ ೪ರ ವರೆಗೆ ನಡೆಯಲಿದೆ. ಸರಿ ಸುಮಾರು ೨೬ ವರ್ಷಗಳ ಬಳಿಕ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆಯುತ್ತಿದ್ದು ಈ ಸ್ಮರಣೀಯ ಪುಣ್ಯ ಕಾರ್ಯ ಕಣ್ತುಂಬಿಕೊಳ್ಳಲು ಊರಿಗೆ ಊರೇ ಸಂಭ್ರಮ ಸಡಗರದಲ್ಲಿದೆ.
ಬ್ರಹ್ಮಕಲಶವು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿವೆ ಈ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಎ.೨೦ರಂದು ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ವಿವರ ನೀಡಿದರು.
ಸುಮಾರು ೨ ಕೋಟಿ ರೂ . ವೆಚ್ಚದಲ್ಲಿ ದೇಗುಲದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದ್ದು ದೇಗುಲಕ್ಕೆ ಸಂಬಂಧಿಸಿದ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮಗಳು ಈಗಾಗಲೇ ವಿಜೃಂಭಣೆಯಿಂದ ನಡೆದಿದೆ. ಇದೀಗ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ. ಏ.೨೬ ರ ಬೆಳಗ್ಗೆ ಉಗ್ರಾಣ ತುಂಬಿಸುವುದು, ಸಂಜೆ ೪.೩೦ ಕ್ಕೆ ಪೂರ್ಣಕುಭ ಸ್ವಾಗತದೊಂದಿಗೆ ಕ್ಷೇತ್ರದ ತಂತ್ರಿಗಳನ್ನು ಬರಮಾಡಿಕೊಳ್ಳುವುದು, ಸಂಜೆ ೬.೩೦ ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ ಸಹಿತ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಹಸಿರುವಾಣಿ ಸಮರ್ಪಣೆ: ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನಿಮಿತ್ತ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣಾ ಕಾರ್ಯಕ್ರಮ ಏ.೨೭ ರಂದು ಬೆಳಗ್ಗೆ ೧೧ಗಂಟೆಗೆ ಮಂಡೆಕೋಲಿನ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿಯಿಂದ ನಡೆಯಲಿದೆ. ಅಂದು ಕೋಟಿ ಲೇಖನ ಯಜ್ಞ ಅಭಿಯಾನದ ಮಂಗಲೋತ್ಸವ ನಡೆಯಲಿದೆ. ೫ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ೭ ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭೆಯ ಬಳಿಕ ರಾತ್ರಿ ೯ ರಿಂದ ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
ಏ.೨೮ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ನಡೆಯಲಿದೆ. ಸಂಜೆ ೭ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬೆಳ್ತಂಗಡಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ೮.೩೦ ರಿಂದ ಮಂಜೇಶ್ವರ ನಾಟ್ಯ ನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ ನೃತ್ಯ ವಿದುಷಿ ಅಪೂರ್ವ ಪಾವೂರು ಮತ್ತು ಬಳಗದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಏ.೨೯ರಂದು ಬೆಳಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಸಂಜೆ ೭ ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಉದ್ಘಾಟಿಸಲಿದ್ದಾರೆ. ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ೮.೩೦ ಕ್ಕೆ ಮಂಗಳಾ ದೇವಿ ಮೇಳದ ಕಲಾವಿದರಿಂದವ ಸಾರ್ಲಪಟ್ಟೊದ ಸತ್ಯ' ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಏ.೩೦ರಂದು ಬೆಳಗ್ಗಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ೭ ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಎಡನೀರಿನ ಜಗದ್ಗುರು ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಂಟಾರಿನ ಬ್ರಹ್ಮಶ್ರೀ ರವೀಶ ತಂತ್ರಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸೇವಾ ಪ್ರಮುಖ್ ನ.ಸೀತಾರಾಮ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಕಣೆಮರಡ್ಕ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ ೮.೩೦ ರಿಂದ ಮಂಜೇಶ್ವರದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದವಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ನಾಟಕ ಪ್ರದರ್ಶನ ನಡೆಯಲಿದೆ.
ಮೇ ೧ರಂದು ಪ್ರತಿಷ್ಠಾ ಮಹೋತ್ಸವ: ಮೇ ೧ ರಂದು ಬೆಳಗ್ಗೆ ೫.೩೦ ರಿಂದ ೧೦೮ ತೆಂಗಿನಕಾಯಿಯ ಗಣಪತಿ ಹೋಮ, ಪ್ರತಿಷ್ಠಾ ಪಾಣಿ ಕಾರ್ಯಕ್ರಮ ನಡೆಯಲಿದೆ. ನಂತರ ೧೦.೧೮ ರ ಮಿಥುನ ಲಗ್ನದ ಸುಮುಹೂರ್ತದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಮತ್ತು ದುರ್ಗಾಂಬಿಕೆ ದೇವಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ.
ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಪ್ರಯುಕ್ತ ಸಂಜೆ ೪ಕ್ಕೆ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರುವ ಕಾರ್ಯಕ್ರಮ ನಡೆಯಲಿದೆ. ಸಂಜೆ ೫.೩೦ ರಿಂದ ಸತ್ಯನಾರಾಯಣ ಪೂಜೆ ನಡೆದು ನಂತರ ಭೂತಬಲಿ ಉತ್ಸವ, ಬಲಿಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ ಹಾಗೂ ನೃತ್ಯ ಬಲಿ ಉತ್ಸವ ನಡೆಯಲಿದೆ.
ಮೇ ೨ರಂದು ಬೆಳಗ್ಗೆ ೮ರಿಂದ ದೇವರ ದರ್ಶನಬಲಿ ಉತ್ಸವ, ರಾಜಾಂಗಣ ಪ್ರಸಾದ ಹಾಗೂ ಮಂತ್ರಾಕ್ಷತೆ ನಡೆಯಲಿದೆ.
ಉಳ್ಳಾಕುಲು ನೇಮೋತ್ಸವ, ಅಡ್ಡಣಪೆಟ್ಟು: ಮೇ ೩ರಂದು ಬೆಳಗ್ಗೆ ೯ ಕ್ಕೆ ಉಳ್ಳಾಕುಲು ನೇಮೋತ್ಸವ ನಡೆಯಲಿದ್ದು ಧಾರ್ಮಿಕ ಮಹತ್ವದ ಅಡ್ಡಣಪೆಟ್ಟು ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨.೩೦ ರಿಂದ ಉದ್ರಾಂಡಿ ಹಾಗೂ ಉಪದೈವಗಳ ಕೋಲ ನಡೆಯಲಿದೆ. ಸಂಜೆ ೪ ಕ್ಕೆ ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತಂದ ಬಳಿಕ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯಲಿದೆ. ಮೇ ೪ ರಂದು ಬೆಳಗ್ಗೆ ೧೦ ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಜೀರ್ಣೋದ್ಧಾರ ಸಮಿತಿಯ ಸದಸ್ಯೆ ಮೋಹಿನಿ, ದೇಗುಲದ ಅರ್ಚಕ ಅನಂತಕೃಷ್ಣ ಪಾಂಗಣ್ಣಾಯ, ಮಂಡೆಕೋಲು ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್, ವೈದಿಕ ಸಮಿತಿಯ ಸಂಚಾಲಕ ಎ.ಕೆ ಮಣಿಯಾಣಿ, ವಿವಿಧ ಸಮಿತಿಯ ಪದಾಧಿಕಾರಿಗಳಾದ ಪದ್ಮನಾಭ ಪಾತಿಕಲ್ಲು, ದಾಮೋದರ ಪಾತಿಕಲ್ಲು, ಕೃಷ್ಣ ಮಣಿಯಾಣಿ, ಬಾಲಚಂದ್ರ ದೇವರಗುಂಡ, ಡಿ.ವಿ.ಸುರೇಶ್, ಸುಂದರ ನಾಯ್ಕ್, ಜಾನಕಿ ಕಣೆಮರಡ್ಕ, ಗೋಪಾಲ ಗೌಡ ಮೇಲ್ಮನೆ, ಗಣೇಶ್ ಮಾವಂಜಿ, ಶೇಖರ ಮಣಿಯಾಣಿ ಕಣೆಮರಡ್ಕ, ಉಮೇಶ್ ದೇವರಗುಂಡ, ಬಾಲಕೃಷ್ಣ, ತುಳಸಿನಿ ದೇವರಗುಂಡ, ತಿರುಮಲೇಶ್ವರ, ಪುಟ್ಟಣ್ಣ ಮಾವಂಜಿ, ಲಕ್ಷ್ಮಣ ಗೌಡ ಮೊದಲಾದವರಿದ್ದರು.