ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಆರಂಭ

0

ಕ್ಷೇತ್ರಕ್ಕೆ ತಂತ್ರಿಗಳ ಆಗಮನ

ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಶುಕ್ರವಾರ ಬ್ರಹ್ಮಕಲಶೋತ್ಸವದ ಆರಂಭದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಸಂಜೆ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಮುಂದಿನ ಸರ್ವ ಕಾರ್ಯಗಳಿಗೆ ಯಾವುದೇ ವಿಘ್ನಗಳು ಬಾಧಿಸದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ದೇವತಾ ಪ್ರಾರ್ಥನೆ ಮಾಡಲಾಯಿತು. ಬಳಿಕ ತಂತ್ರಿಗಳ ನೇತ ಆಚಾರ್ಯವರಣ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ಕಾರ್ಯಕ್ರಮಗಳು ನಡೆದವು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ವೇಳೆ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುಂಡರೀಕ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ವೈದಿಕ ಸಮಿತಿಯ ಸಂಚಾಲಕ ಎ. ಕೆ ಮಣಿಯಾಣಿ, ಮಾತೃ ಸಮಿತಿಯ ಸಂಚಾಲಕಿ ವಿನುತಾ ಪಾತಿಕಲ್ಲು, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಹಾಗೂ ವಿವಿಧ ಉಪಸಮಿತಿಯ ಪ್ರಮುಖರು ಹಾಗೂ ಊರವರು ಹಾಜರಿದ್ದರು.

ಇಂದು (ಶನಿವಾರ) ಭಕ್ತಾದಿಗಳಿಂದ ದೇಗುಲಕ್ಕೆ ಹಸಿರುವಾಣಿ ಸಮರ್ಪಣೆ, ಕೋಟಿ ಲೇಖನ‌ ಯಜ್ಞ ಮಂಗಲೋತ್ಸವ

ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನಿಮಿತ್ತ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣಾ ಕಾರ್ಯಕ್ರಮ ಎಪ್ರಿಲ್‌ 27 ರ ಶನಿವಾರ ನಡೆಯಲಿದೆ.

ಬೆಳಿಗ್ಗೆ 11 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಊರ ಜನತೆ ಸಾಂಪ್ರದಾಯಿಕ ದಿರಿಸಿನೊಂದಿಗೆ ಭಾಗವಹಿಸಿ ತಮ್ಮ ಭಕ್ತ್ಯಾನುಸಾರ ಹಸಿರು ಕಾಣಿಕೆಯನ್ನು ದೇಗುಲಕ್ಕೆ ಸಮರ್ಪಿಸಲಿದ್ದಾರೆ.

ಅಂತೆಯೇ ಬೆಳಿಗ್ಗೆ 6 ಕ್ಕೆ ದೇಗುಲದಲ್ಲಿ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ ನಡೆಯಲಿದೆ. ಭಕ್ತ ಸಮೂಹದಲ್ಲಿ ಹರಿ ನಾಮಸ್ಮರಣೆ ಜಾಗೃತಗೊಳಿಸಲು ದೇಗುಲದ ವತಿಯಿಂದ ಆಯೋಜಿಸಲಾದ ಕೋಟಿ ಲೇಖನ ಯಜ್ಞ ಅಭಿಯಾನದ ಸಮಾರೋಪವೂ ಆ ದಿನ ನಡೆಯಲಿದ್ದು ಭಕ್ತರು ತಮ್ಮ ಪುಸ್ತಕದಲ್ಲಿ ದಾಖಲಿಸಿದ ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರಗಳ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀ ಕೃಷ್ಣ ಭಜನಾ ಮಂದಿರ ಮೇನಾಲ ಹಾಗೂ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಮಲ್ಲಾವರ ಆದೂರಿನ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12 ಕ್ಕೆ ಅಂಕುರ ಪೂಜೆ ಹಾಗೂ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ‌ಅಪರಾಹ್ನ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ ಹಾಗೂ ಅಡೂರಿನ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 5 ರಿಂದ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 7 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ರಾಜ್ಯದ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ಶಾಖಾಮಠ ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖ್ಯಾತ ವಾಗ್ಮಿ ಕುಮಾರಿ ಶ್ರೀದೇವಿ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ರಮಾನಾಥ ರೈ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಭೋಜೇ ಗೌಡ, ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ವಹಿಸಲಿದ್ದಾರೆ.

ರಾತ್ರಿ 9 ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.