ವಾಸ್ತವ

0

ನಮ್ಮೂರಲ್ಲಿ ಮರಗಳು ಸುಳ್ಯ
ಮರುಗಿದರೆ
ಮರಳುಗಾಡಿನ ಪುಷ್ಪಗಳು
ಅರಳುತ್ತಿವೆ

ಹಲಸು, ಮಾವಿನ ಹೂಗಳು
ಕರಟಿದರೆ
ಎಕ್ಕ, ಎಡೇನಿಯಂ ಹೂಗಳು
ಬಿರಿಯುತ್ತಿವೆ

ಕಾಗೆ, ಕಾಜಾಣ ಖಗಗಳು
ಕಾಣೆಯಾದರೆ
ನವಿಲು, ನರಿ, ಮಿಡತೆಗಳು
ಕುಣಿಯುತ್ತಿವೆ

ಕೆರೆ, ತೋಡು, ತೊರೆಗಳು
ಬತ್ತಿದರೆ
ಗಿಡಗಂಟಿ ಮುಳ್ಳುಗಳು
ಚಿಗುರೊಡೆಯುತ್ತಿವೆ

ಸಿಡಿಲು, ಮಿಂಚು, ಮಳೆ
ಅಬ್ಬರಿಸಿದರೆ
ಅವನಿಯೊಡಲು ಬಿರಿದು
ಹರಿಯುತ್ತಿದೆ

ರವಿಯಂಚಿನ ಕಿರಣಗಳು
ಪ್ರಜ್ವಲಿಸಿದರೆ
ರಸ್ತೆಯಲಿ ಓಯಸಿಸ್‌ಗಳು
ನಗುತ್ತಿವೆ

ಇಳೆಯ ಹಸನಾದ ಮಣ್ಣು
ಸಾಗರ ಸೇರಿದರೆ
ಕಲ್ಲು ಬಂಡೆಗಳು ಮೇಲೆದ್ದು
ಹಲ್ಲು ಕಿಸಿಯುತ್ತಿವೆ

ಕಂಡು ಕೇಳರಿಯದ ಸುಳಿಗಾಳಿ
ನರ್ತಿಸಿದರೆ
ಶತಮಾನ ಕಂಡ ಹಿರಿಜೀವ
ರೋದಿಸುತ್ತಿದೆ.

ಡಾ. ಬಿ. ರೇವತಿ ನಂದನ್