ಜಾಲ್ಸೂರು: ಕಲ್ಲಮುರ ಮಣ್ಣುಹಾಕಿದ ಎತ್ತರಿಸಿದ ಸ್ಥಳಕ್ಕೆ ಎ.ಸಿ. ಭೇಟಿ -ಪರಿಶೀಲನೆ

0

ಸರ್ಕಾರಿ ಜಾಗ ಆಗಿದ್ದರೆ ಗ್ರಾ.ಪಂ.ಗೆ ಹಸ್ತಾಂತರದ ಭರವಸೆ

ಜಾಲ್ಸೂರು ಗ್ರಾಮದ ಕಲ್ಲಮುರದಲ್ಲಿ ಖಾಸಗಿ ಅವರಿಗೆ ಸೇರಿದ ಖಾಸಗಿ ಸ್ಥಳವನ್ನು ಮಣ್ಣು ಹಾಕಿ ಎತ್ತರಿಸುವ ಕೆಲಸ ಮಾಡುವ ವೇಳೆ ಸ್ಥಳೀಯ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ತೊಂದರೆಯಾಗಿದ್ದು, ಈ ಬಗ್ಗೆ ಕಾಲನಿ ನಿವಾಸಿಗಳು ಎ.ಸಿ. ತಹಶಿಲ್ದಾರ್ ಹಾಗೂ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಜೂ.13ರಂದು ಸಂಜೆ ಎ.ಸಿ. ಜುಬಿನ್ ಮೊಹಪಾತ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರಲ್ಲದೇ, ಅಲ್ಲಿರುವ 46 ಸೆಂಟ್ಸ್ ಜಾಗ ಸರ್ಕಾರಿ ಜಾಗವಾಗಿದ್ದರೆ ಸ್ಥಳೀಯ ಗ್ರಾ.ಪಂ.ಗೆ ಹಸ್ತಾಂತರ ಮಾಡುವುದಾಗಿ ಎ.ಸಿ. ಅವರು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

ಕಲ್ಲಮುರದಲ್ಲಿ ರಸ್ತೆ ಬದಿಯಲ್ಲಿ ಖಾಸಗಿಯವರು ತಮಗೆ ಸೇರಿದ ಜಾಗಕ್ಕೆ ಮಣ್ಣುಹಾಕಿ ಎತ್ತರಿಸುವ ಕೆಲಸ ಮಾಡುವ ವೇಳೆ ಅಲ್ಲಿರುವ 46 ಸೆಂಟ್ಸ್ ಜಾಗಕ್ಕೆ ಮಣ್ಣು ಹಾಕಿದ್ದು, ಅಲ್ಲದೇ ಇದರಿಂದ ಸಮೀಪದ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ಸಮಸ್ಯೆಯಾಗಿದ್ದು, ಕಾಲನಿ ನಿವಾಸಿಗಳು ಸೇರಿ ಇತ್ತೀಚೆಗೆ ಅಲ್ಲಿರುವ ಸರ್ಕಾರಿ ಜಾಗವನ್ನು ತಮಗೆ ನೀಡಬೇಕೆಂದು ಜಾಲ್ಸೂರು ಗ್ರಾಮ ಪಂಚಾಯತಿ, ತಹಶಿಲ್ದಾರ್, ಎ.ಸಿ.ಅವರಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಜೂ.13ರಂದು ಸುಳ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಎ.ಸಿ. ಜುಬಿನ್ ಮೊಹಪಾತ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಎ.ಸಿ. ಅವರು ಕಲ್ಲಮುರದಲ್ಲಿರುವ 46 ಸೆಂಟ್ಸ್ ಜಾಗ ಸರ್ಕಾರಿ ಜಾಗವಾಗಿದ್ದರೆ ಅದನ್ನು ಸ್ಥಳೀಯ ಜಾಲ್ಸೂರು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡುವುದಾಗಿ ಹೇಳಿದರೆಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಅಧಿಕಾರಿ ವರ್ಗದವರು, ಸ್ಥಳೀಯ ಕಾಲನಿ ನಿವಾಸಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವೃದ್ಧೆ ಬೇಬಿ ಆಚಾರ್ತಿ ಮನೆಗೆ ಟರ್ಪಲ್ – ಅಕ್ಕಿ ಹಾಗೂ ಗ್ಯಾಸ್ ವ್ಯವಸ್ಥೆ ಎ.ಸಿ. ಹೇಳಿಕೆ

ಇದೇ ಸ್ಥಳದಲ್ಲಿ ಗುಡಿಸಲಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ವಾಸಿಸುತ್ತಿರುವ ವೃದ್ಧೆ ಬೇಬಿ ಆಚಾರ್ತಿ ಅವರ ಮನೆಗೆ ಭೇಟಿ ನೀಡಿದ ಎ.ಸಿ. ಅವರು ಅವರಿಗೆ ಔಷಧಿಯ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿದಾಗ, ಬೇಬಿ ಅವರು ತನಗೆ ಔಷಧಿ ಬೇಡ ಬದಲಾಗಿ ಗುಡಿಸಲಿಗೆ ಟರ್ಪಲಿನ ವ್ಯವಸ್ಥೆ, ಅಡುಗೆಗೆ ಅಕ್ಕಿ, ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಡುವಂತೆ ಹೇಳಿದ ಮೇರೆಗೆ ಎ.ಸಿ. ಜುಬಿನ್ ಮೊಹಪಾತ್ರ ಅವರು ಬೇಬಿ ಅವರ ಮನೆಗೆ ಟರ್ಪಲ್, ಅಕ್ಕಿ ಹಾಗೂ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.